Advertisement

ಹಂಪಿಯ ಹುಡುಗರ ಆಟ-ಪಾಠ

09:03 AM Apr 14, 2019 | Lakshmi GovindaRaju |

ಪಾಕ್ಷ ಮತ್ತು ರುಸ್ತುಂ ಇಬ್ಬರೂ ಹಂಪಿಯಲ್ಲಿರುವ ಆತ್ಮೀಯ ಸ್ನೇಹಿತರು. ಚುರುಕುಮತಿಯ ಹುಡುಗ ಪಾಕ್ಷನಿಗೆ ಹಂಪಿ ಎಂದರೆ ಪ್ರಾಣ. ಹಂಪಿಯ ಬಗ್ಗೆ ಪ್ರತಿಯೊಂದನ್ನೂ ತಿಳಿದುಕೊಳ್ಳುವ ಆಸಕ್ತಿ ಈ ಹುಡುಗನಿಗೆ. ಮತ್ತೂಬ್ಬ ಹುಡುಗ ರುಸ್ತುಂ ಮೂಗನಾದರೂ, ಹಂಪಿಯ ಸುಂದರ ದೃಶ್ಯಗಳನ್ನು ಚಿತ್ರರೂಪದಲ್ಲಿ ಬಿಡಿಸುವ ಕಲೆ ಇವನಿಗೆ ಕರಗತ.

Advertisement

ಈ ಇಬ್ಬರು ಹುಡುಗರ ಜೊತೆ ಆಶ್ರಮದಿಂದ ಅಚಾನಕ್ಕಾಗಿ ತಪ್ಪಿಸಿಕೊಂಡ ವಿನ್ಸೆಂಟ್‌ ಎಂಬ ಮತ್ತೂಬ್ಬ ಅಂಧ ಹುಡುಗ ಕೂಡ ಸೇರಿಕೊಳ್ಳುತ್ತಾನೆ. ವಿನ್ಸೆಂಟ್‌ ಅಂಧನಾದರೂ ಒಳ್ಳೆಯ ಸಂಗೀತಗಾರ. ಈತನ ಹಾಡಿನ ಮೋಡಿಗೆ ಎಲ್ಲರೂ ತಲೆದೂಗುತ್ತಿರುತ್ತಾರೆ.

ಈ ಹುಡುಗರು ಕಲ್ಯಾಣಿ, ಮಂಟಪ, ದೇವಸ್ಥಾನ, ತುಂಗಭದ್ರಾ ನದಿ, ಕಣಿವೆ, ಗುಡ್ಡಬೆಟ್ಟಗಳು ಹೀಗೆ ಹಂಪಿಯ ಮೂಲೆ ಮೂಲೆಯನ್ನು ಸುತ್ತುತ್ತಿರುವಾಗಲೇ ಅಲ್ಫ್ರಾಡ್‌ ಎಂಬ ಫ್ರೆಂಚ್‌ ಪ್ರವಾಸಿಗನೊಬ್ಬನ ಕಣ್ಣಿಗೆ ಬೀಳುತ್ತಾರೆ. ಕೊನೆಗೆ ಈ ಮೂವರೂ ಹಂಪಿಯ ಇಂಚಿಂಚೂ ಇತಿಹಾಸವನ್ನು ವಿದೇಶಿ ಪ್ರವಾಸಿಗನಿಗೆ ಪರಿಚಯಿಸುತ್ತಾ ಹೋಗುತ್ತಾರೆ.

ಹಂಪಿಯಿಂದ ವಾಪಾಸ್ಸಾಗುವ ಅಲ್ಫ್ರಾಡ್‌ ಈ ಹುಡುಗರ ಕಥೆಯನ್ನು ದಾಖಲಿಸುತ್ತಾನೆ. ಹೆಸರೇ ಹೇಳುವಂತೆ ವಿನ್ಸೆಂಟ್‌, ರುಸ್ತುಂ ಮತ್ತು ಪಾಕ್ಷ ಎಂಬ ಮೂವರು ಹುಡುಗರ ಕಥೆಯೇ ವಿರುಪಾ ಚಿತ್ರ. ಹಾಗಾದರೆ, ಈ ಹುಡುಗರು ಆ ವಿದೇಶಿಗನಿಗೆ ಇಲ್ಲಿಯ ಸಂಸ್ಕೃತಿ, ಇತಿಹಾಸದ ಬಗ್ಗೆ ಏನೇನು ಪಾಠ ಹೇಳುತ್ತಾರೆ ಅನ್ನೋದನ್ನ ಚಿತ್ರದಲ್ಲೇ ನೋಡಬೇಕು.

ಒಂದೇ ಮಾತಿನಲ್ಲಿ ಹೇಳುವುದಾದರೆ ವಿರುಪಾ ಒಂದು ಮಕ್ಕಳ ಚಿತ್ರ. ಚಿತ್ರದ ಕಥಾಹಂದರ, ನಿರೂಪಣೆ, ದೃಶ್ಯ ಜೋಡಣೆ ಎಲ್ಲವೂ ಮಕ್ಕಳನ್ನೇ ಕೇಂದ್ರೀಕರಿಸಿ ಮಾಡಲಾಗಿದೆ. ಮಾಮೂಲಿ ಮಕ್ಕಳ ಚಿತ್ರಗಳಂತೆ ಇಲ್ಲಿ ಕೂಡ ಒಂದು ಸರಳ ಕಥೆಯನ್ನು ಇಟ್ಟುಕೊಂಡು, ಅದರ ಜೊತೆ ಸಂದೇಶ ಕೊಡುವ ಪ್ರಯತ್ನ ಮಾಡಲಾಗಿದೆ.

Advertisement

ಆದರೆ ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹೇಳುವ ಎಲ್ಲಾ ಸಾಧ್ಯತೆಗಳಿದ್ದರೂ, ನಿರ್ದೇಶಕರು ಕೈಚೆಲ್ಲಿದಂತಿದೆ. ಚಿತ್ರಕಥೆ ಮತ್ತು ನಿರೂಪಣೆಯಲ್ಲಿ ಕೊಂಚ ಮಟ್ಟಿಗೆ ಪ್ರಯೋಗ ಮಾಡಿದ್ದರೆ, ಚಿತ್ರ ಮಕ್ಕಳ ಜೊತೆಗೆ ದೊಡ್ಡವರಿಗೂ ಇಷ್ಟವಾಗುವ ಸಾಧ್ಯತೆ ಇತ್ತು.

ಇನ್ನು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಮೂವರು ಹುಡುಗರು ಅಚ್ಚುಕಟ್ಟಾದ ಅಭಿನಯ ನೀಡಿದ್ದಾರೆ. ಉಳಿದ ಪಾತ್ರಗಳು ಹಾಗೆ ಬಂದು, ಹೀಗೆ ಹೋಗುವುದರಿಂದ ಮನಸ್ಸಿನಲ್ಲಿ ಉಳಿಯುವುದಿಲ್ಲ. ತಾಂತ್ರಿಕವಾಗಿ ಹೇಳುವುದಾದರೆ ಅನಂತ್‌ ರಾಜ್‌ ಅರಸ್‌ ಛಾಯಾಗ್ರಹಣ ಹಂಪಿಯ ಸೌಂದರ್ಯವನ್ನು ಸೊಗಸಾಗಿ ಕಟ್ಟಿಕೊಟ್ಟಿದೆ.

ಸಂಕಲನ ಕಾರ್ಯ ಸ್ವಲ್ಪ ಮೊನಚಾಗಿದ್ದರೆ, ದೃಶ್ಯಗಳು ಇನ್ನಷ್ಟು ಪರಿಣಾಮಕಾರಿಯಾಗಿರುತ್ತಿದ್ದವು. ಸಿಂಕ್‌ ಸೌಂಡ್‌ ಶಬ್ದಗ್ರಹಣ ಕೂಡ ಚಿತ್ರದ ದೃಶ್ಯಗಳಿಗೆ ಅಲ್ಲಲ್ಲಿ ತಡೆ ನೀಡುತ್ತದೆ. ಹಾಡುಗಳು ಕೂಡ ಹೆಚ್ಚು ಹೊತ್ತು ಕಿವಿಯಲ್ಲಿ ಉಳಿಯುವುದಿಲ್ಲ. ಒಟ್ಟಾರೆ ತೀರಾ ಹೊಸತನದ ನಿರೀಕ್ಷೆಯನ್ನು ಇಟ್ಟುಕೊಳ್ಳದೆ “ವಿರುಪಾ’ ಬೇಸಿಗೆ ರಜೆಯಲ್ಲಿ ಮಕ್ಕಳು ನೋಡಬಹುದಾದ ಚಿತ್ರ ಎನ್ನಲು ಅಡ್ಡಿಯಿಲ್ಲ.

ಚಿತ್ರ: ವಿರುಪಾ
ನಿರ್ಮಾಣ: ಡ್ಯಾಫ್ನಿ ನೀತು ಡಿಸೋಜ
ನಿರ್ದೇಶನ: ಪುನೀಕ್‌ ಶೆಟ್ಟಿ
ತಾರಾಗಣ: ವಿಶ್ವನಾಥ್‌, ಚರಣ್‌, ಶಯಲ್‌ ಗೋಮ್ಸ್‌, ಪ್ರಾಪ್ತಿ, ಮಂಜು. ಜೆ ಮತ್ತಿತರರು

* ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next