ದುಬೈ: ಐಸಿಸಿ ಟಿ20 ವಿಶ್ವಕಪ್ ನ ಸೆಮಿ ಫೈನಲ್ ಪಂದ್ಯದಲ್ಲಿ ಆಸೀಸ್ ಆಟಗಾರ ಡೇವಿಡ್ ವಾರ್ನರ್ ಅವರು ವಿಚಿತ್ರ ರೀತಿಯಲ್ಲಿ ಸಿಕ್ಸರ್ ಬಾರಿಸಿದ್ದರು. ಹಫೀಜ್ ಅವರ ಕೈಯಿಂದ ಜಾರಿ ಬಂದ ಎಸೆತವೊಂದನ್ನು ಬೆನ್ನಟ್ಟಿ ಹೋದ ವಾರ್ನರ್ ಅದನ್ನು ಸಿಕ್ಸರ್ ಗೆ ಬಾರಿಸಿದ್ದರು. ಆದರೆ ಇದನ್ನು ಗೌತಮ್ ಗಂಭೀರ್ ಖಂಡಿಸಿದ್ದಾರೆ.
ಆಸ್ಟ್ರೇಲಿಯಾ ಬ್ಯಾಟಿಂಗ್ ವೇಳೆ ಬೌಲಿಂಗ್ ಮಾಡುತ್ತಿದ್ದ ಹಫೀಜ್ ಕೈಯಿಂದ ಜಾರಿದ ಚೆಂಡು ಎರಡು ಮೂರು ಪಿಚ್ ಆಗಿ ಹೋಯಿತು. ಇದನ್ನು ಬೆನ್ನಟ್ಟಿದ ವಾರ್ನರ್ ಸಿಕ್ಸರ್ ಗೆ ಬಾರಿಸಿದರು. ನಿಯಮಗಳ ಪ್ರಕಾರ ಇದು ನೋ ಬಾಲ್ ಎಂದು ಪರಿಗಣಿಸಲಾಯಿತು. ಆಸೀಸ್ ಗೆ ಏಳು ರನ್ (1+6) ನೀಡಲಾಯಿತು. ಆದರೆ ಇದು ಕ್ರೀಡಾ ಸ್ಪೂರ್ತಿಗೆ ವಿರುದ್ಧ ಎಂದು ಗಂಭೀರ್ ಅಸಮಾಧಾನಗೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಗಂಭೀರ್, “ವಾರ್ನರ್ ರಿಂದ ಕ್ರೀಡಾ ಸ್ಪೂರ್ತಿಯ ಸಂಪೂರ್ಣ ಕರುಣಾಜನಕ ಪ್ರದರ್ಶನ! ನಾಚಿಕೆಗೀಡು, ನೀವೇನು ಹೇಳುತ್ತೀರಿ ಅಶ್ವಿನ್” ಎಂದು ರವಿಚಂದ್ರನ್ ಅಶ್ವಿನ್ ಗೆ ಟ್ಯಾಗ್ ಮಾಡಿದ್ದಾರೆ.
ಇದನ್ನೂ ಓದಿ:ಕಿವೀಸ್ ವಿರುದ್ಧದ ಟೆಸ್ಟ್ ಸರಣಿಗೆ ತಂಡ ಪ್ರಕಟ: ರೋಹಿತ್, ವಿರಾಟ್, ಪಂತ್, ಬುಮ್ರಾಗಿಲ್ಲ ಜಾಗ
ಹಫೀಜ್ ವಿರುದ್ಧದ ವಾರ್ನರ್ ಸಿಕ್ಸ್ ಬಾರಿಸಿದಾಗ ಶೇನ್ ವಾರ್ನ್ ಅವರಂತಹವರು ಏಕೆ ಮಾತನಾಡಲಿಲ್ಲ ಎಂದು ಗಂಭೀರ್ ಆಶ್ಚರ್ಯಪಟ್ಟರು. ಆಸ್ಟ್ರೇಲಿಯಾದ ಸ್ಪಿನ್ನರ್ ವಾರ್ನ್ ಕ್ರಿಕೆಟ್‌ನಲ್ಲಿನ ಕೆಲವು ಘಟನೆಗಳ ಬಗ್ಗೆ ಧ್ವನಿ ಎತ್ತಿದ್ದಾರೆ. 2021 ಐಪಿಎಲ್ ಸಮಯದಲ್ಲಿ ಆಫ್ ಸ್ಪಿನ್ನರ್ ಇಯಾನ್ ಮಾರ್ಗನ್ ಅವರೊಂದಿಗೆ ಮೈದಾನದಲ್ಲಿ ವಾಗ್ವಾದ ನಡೆಸಿದಾಗ ಮತ್ತು 2019 ಐಪಿಎಲ್ ರ ಸಮಯದಲ್ಲಿ ಮಂಕಡಿಂಗ್ ಘಟನೆಯ ಸಂದರ್ಭದಲ್ಲಿ ವಾರ್ನ್ ಅಶ್ವಿನ್ ಅವರನ್ನು ಟೀಕಿಸಿದ್ದರು ಎಂದು ಗಂಭೀರ್ ಗಮನಸೆಳೆದರು.
“ಶೇನ್ ವಾರ್ನ್ ಪ್ರತಿಯೊಂದರ ಬಗ್ಗೆಯೂ ಕಾಮೆಂಟ್ ಮಾಡುತ್ತಾರೆ ಮತ್ತು ಟ್ವೀಟ್ ಮಾಡುತ್ತಾರೆ. ರಿಕಿ ಪಾಂಟಿಂಗ್ ಕೂಡ ಕ್ರೀಡಾ ಸ್ಪೂರ್ತಿಯ ಬಗ್ಗೆ ದೊಡ್ಡ ಸಮರ್ಥನೆಗಳನ್ನು ಮಾಡುತ್ತಾರೆ. ಅವರು ಈ ಬಗ್ಗೆ ಏನು ಹೇಳುತ್ತಾರೆ?” ಎಂದು ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮವೊಂದರಲ್ಲಿ ಗಂಭೀರ್ ಕೇಳಿದರು.