ಚಿಕ್ಕಮಗಳೂರು: ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಹತ್ಯೆಮಾಡಿದ್ದ ಆರೋಪಿಗಳಿಗೆ ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಶನಿವಾರ ಗಲ್ಲು ಶಿಕ್ಷೆ ವಿಧಿಸಿದೆ. ನಾಲ್ಕು ವರ್ಷಗಳ ಹಿಂದೆ ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮದಲ್ಲಿ ನಡೆದ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಉಮೇಶ್ ಎಂ.ಅಡಿಗ, ಆರೋಪಿ ಗಳಾದ ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮದ ಅಕ್ಸಾಲು ಕೂಡಿಗೆ ನಿವಾಸಿ ಪ್ರದೀಪ್ ಹಾಗೂ ಸಂತೋಷ್‌ಗೆ ಮರಣ ದಂಡನೆ ವಿಧಿ ಸಿ ತೀರ್ಪು ನೀಡಿದ್ದಾರೆ.
ಕಳೆದ ಜ.3ರಂದು ವಿಚಾರಣೆ ನಡೆಸಿ ಪ್ರಕರಣದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯ ಆರೋಪಿಗಳು ಕೃತ್ಯವೆಸಗಿರುವುದು ಸಾಬೀತಾಗಿರುವುದರಿಂದ ಜ.18 ರಂದು ಶಿಕ್ಷೆ ವಿಧಿಸಲು ದಿನ ನಿಗದಿ ಮಾಡಿತ್ತು. ಶೃಂಗೇರಿ ತಾಲೂಕಿನ ಮೆಣಸೆಯ ಅಕ್ಸಾಲು ಕೂಡಿಗೆ ಗ್ರಾಮದ ಯುವತಿ 2016ರ ಫೆ.16ರಂದು ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಪ್ರಥಮ ಪಿಯು ಪರೀಕ್ಷೆ ಬರೆಯಲು ತೆರಳಿದ್ದಳು. ಪರೀಕ್ಷೆ ಮುಗಿಸಿ ಕಾಲುದಾರಿಯಲ್ಲಿ ಬರುವಾಗ ಅದೇ ಗ್ರಾಮದ ಸಂತೋಷ್, ಪ್ರದೀಪ್ ಆಕೆಯನ್ನು ಕಾಡಿನೊಳಗೆ ಎಳೆದೊಯ್ದು ಅತ್ಯಾಚಾರವೆಸಗಿದ್ದರು. ಅಲ್ಲದೇ ಹತ್ಯೆ ಮಾಡಿ, ಶವವನ್ನು ಸಮೀಪದ ಹಾಳು ಬಾವಿಗೆ ಎಸೆದು ತಲೆಮರೆಸಿಕೊಂಡಿದ್ದರು.
ಆರೋಪಿಗಳಿಗೆ ಕೊನೆಗೂ ಶಿಕ್ಷೆಯಾಗಿದೆ. ಈ ಪ್ರಕರಣದ ಮಹತ್ವದ ತೀರ್ಪಿನಿಂದ ಸಮಾಜದಲ್ಲಿ ನ್ಯಾಯಾಲಯದ ಬಗ್ಗೆ ಗೌರವ ಹೆಚ್ಚುತ್ತಿದೆ. ಘಟನೆ ನಂತರ ನಮ್ಮ ಕುಟುಂಬದ ಜೊತೆ ಸಮಾಜವೇ ನಿಂತಿದ್ದು, ಧೈರ್ಯ ತುಂಬಿದೆ. ಅಂದಿನ ಪಿಎಸ್ಸೈ ಸುಧೀರ್ ಹೆಗಡೆ ಮತ್ತು ತಂಡ ಪ್ರಕರಣದ ಸಾಕ್ಷಿಗಳನ್ನು ಒದಗಿಸಿದ್ದರಿಂದ ಯೋಗ್ಯ ತೀರ್ಪು ದೊರಕಿದೆ.
-ಸಂತ್ರಸ್ತೆಯ ತಂದೆ