Advertisement

ನಭಕ್ಕೆ ನೆಗೆಯಲಿದ್ದಾರೆ ಮಹಿಳಾ ಗಗನಯಾತ್ರಿ​​​​​​​

12:30 AM Jan 12, 2019 | |

ಬೆಂಗಳೂರು: ಮಾನವರನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ಬಹುನಿರೀಕ್ಷಿತ ಗಗನಯಾನ ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಯೋಜನೆ ಅನುಷ್ಠಾನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈಗಿನಿಂದಲೇ ಭರದ ಸಿದ್ಧತೆ ನಡೆಸಿದ್ದು, 2021ರ ಡಿಸೆಂಬರ್‌ನಲ್ಲಿ ಮಾನವಸಹಿತ ನೌಕೆ ನಭಕ್ಕೆ ಚಿಮ್ಮಲಿದೆ. ವಿಶೇಷವೆಂದರೆ ಈ ನೌಕೆಯಲ್ಲಿ ಒಬ್ಬ ಮಹಿಳೆಗೂ ಅವಕಾಶ ಮಾಡಿಕೊಡುವ ಸಾಧ್ಯತೆಗಳಿವೆ.

Advertisement

ಮಾನವಸಹಿತ ಬಾಹ್ಯಾಕಾಶ ನೌಕಾ ಕೇಂದ್ರಕ್ಕೆ ಉನ್ನಿಕೃಷ್ಣನ್‌ ನಾಯರ್‌ ಮುಖ್ಯಸ್ಥರನ್ನಾಗಿ ಮತ್ತು ಗಗನಯಾನ ಯೋಜನಾ ನಿರ್ದೇಶಕರನ್ನಾಗಿ ಆರ್‌. ಹಟನ್‌ ಅವರನ್ನು ನೇಮಕ ಮಾಡಲಾಗಿದೆ. 2021ರ ಅಂತ್ಯಕ್ಕೆ ಮಾನವಸಹಿತ ನೌಕೆಯನ್ನು ಉಡಾವಣೆ ಮಾಡಲಾಗುವುದು. ಇದರಲ್ಲಿ ಮೂವರು ಗಗನಯಾತ್ರಿಗಳು ಇರಲಿದ್ದು, ಮಹಿಳೆಯರಿಗೂ ಅವಕಾಶ ನೀಡುವ ಚಿಂತನೆ ಇದೆ. ಇದಕ್ಕೂ ಮುನ್ನ 2020ರ ಡಿಸೆಂಬರ್‌ ಮತ್ತು 2021ರ ಜುಲೈನಲ್ಲಿ ಕ್ರಮವಾಗಿ ತಲಾ ಒಂದು ಮಾನವರಹಿತ ನೌಕೆಯನ್ನು ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಇಸ್ರೋದ ವಿವಿಧ ಕಾರ್ಯಚಟುವಟಿಕೆಗಳಿಗಾಗಿ ಕೇಂದ್ರ ಸರ್ಕಾರವು 30 ಸಾವಿರ ಕೋಟಿ ರೂ. ನೀಡಿದ್ದು, ಈ ಪೈಕಿ ಎರಡು ವರ್ಷಗಳ ಯೋಜನೆ ಗಗನಯಾನಕ್ಕೆ 10,600 ಕೋಟಿ ರೂ. ಮೀಸಲಿಡಲಾಗಿದೆ. ಇದಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಇಡೀ ತಂಡ ಯೋಜನೆ ಹಿಂದೆಬಿದ್ದಿದೆ. ಗುರಿ ಸಾಧನೆ ವಿಶ್ವಾಸ ಇದೆ ಎಂದ ಅವರು, ಇಸ್ರೋ ಕಾರ್ಯಚಟುವಟಿಕೆಗಳಿಂದ ಸುಮಾರು 20 ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು. 

ಏಪ್ರಿಲ್‌ನಲ್ಲಿ ಚಂದ್ರಯಾನ-2 ಮತ್ತೂಂದು ಮಹತ್ವಾಕಾಂಕ್ಷಿ ಚಂದ್ರಯಾನ-2 ಉಪಗ್ರಹ ಉಡಾವಣೆಗೂ ಮುಹೂರ್ತ ನಿಗದಿಯಾಗಿದ್ದು, ಏಪ್ರಿಲ್‌ ಮಧ್ಯಾವಧಿಯಲ್ಲಿ ಉಡಾವಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಚಂದ್ರನ ದಕ್ಷಿಣ ಧ್ರುÅವದ ಮೇಲ್ಮೆ„ ಪದರ ಚಿತ್ರಣವನ್ನು ನೀಡಲಿರುವ ಈ ಉಪಗ್ರಹವು ಬಾಹ್ಯಾಕಾಶದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆ ಎಂದು ಕೆ. ಶಿವನ್‌ ವಿಶ್ವಾಸ ವ್ಯಕ್ತಪಡಿಸಿದರು. 

ಇದುವರೆಗೆ ಯಾವುದೇ ಉಪಗ್ರಹವು ಚಂದ್ರನ ದಕ್ಷಿಣ ಧ್ರುÅವಕ್ಕೆ ಪ್ರವೇಶಿಸಿಲ್ಲ. ಚಂದ್ರಯಾನ-2 35-45 ದಿನಗಳ ಅಂತರದಲ್ಲಿ ನಿಗದಿತ ಕಕ್ಷೆ ತಲುಪಲಿದ್ದು, ನಂತರ ಚಂದ್ರನ ಮೇಲೆ ಇಳಿಯುವ ಕೋಶ ಲ್ಯಾಂಡರ್‌ ಆ ಉಪಗ್ರಹದಿಂದ ಹೊರಬರಲಿದೆ. ತದನಂತರ ರೋವರ್‌ (ಆರು ಚಕ್ರಗಳ ಸ್ವಯಂಚಾಲಿತ ವಾಹನ) ಕೇವಲ 500 ಮೀ. ಅಂತರದಿಂದ ಚಂದ್ರನ ಮೇಲ್ಮೆ„ನಲ್ಲಿರುವ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ ಚಂದ್ರನನ್ನು ಸುತ್ತುವ ಕಕ್ಷವಾಹನ ಆರ್ಬಿಟರ್‌ಗೆ ಮಾಹಿತಿ ರವಾನಿಸಲಿದೆ. ಅಲ್ಲಿಂದ ಭೂ ಕೇಂದ್ರಕ್ಕೆ ಮಾಹಿತಿ ಬರಲಿದೆ ಎಂದು ವಿವರಿಸಿದರು. 

Advertisement

ಈ ಮೊದಲು ಜನವರಿ-ಫೆಬ್ರವರಿಯಲ್ಲಿ ಉಡಾವಣೆಗೆ ಉದ್ದೇಶಿಸಲಾಗಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಏಪ್ರಿಲ್‌ 15ಕ್ಕೆ ಮುಂದೂಡಲಾಗಿದೆ. ಆಗಲೂ ಸಾಧ್ಯವಾಗದಿದ್ದರೆ, ಜೂನ್‌ನಲ್ಲಿ ಉಡ್ಡಯನ ಮಾಡಲು ನಿರ್ಧರಿಸಲಾಗಿದೆ. ಗಗನಯಾತ್ರಿಗಳನ್ನು ಭಾರತೀಯ ವಾಯುಪಡೆ ಆಯ್ಕೆ ಮಾಡಲಿದ್ದು, ಅವರಿಗೆ ಪ್ರಾಥಮಿಕ ತರಬೇತಿ ಭಾರತದಲ್ಲಿ ಹಾಗೂ ಮುಂದುವರಿದ ತರಬೇತಿಯನ್ನು ರಷಿಯಾದಿಂದ ನೀಡಲಾಗುವುದು ಎಂದರು. 

2020ಕ್ಕೆ ಆದಿತ್ಯ-ಎಲ್‌1
ಸೂರ್ಯನ ಹೊರ ಪದರದಲ್ಲಿ ನೆಲೆ ನಿಂತು ಅಧ್ಯಯನ ನಡೆಸುವ ಆದಿತ್ಯ-1ಬಾಹ್ಯಾಕಾಶ ನೌಕೆಯನ್ನು 2020ರ ಜನವರಿಯಲ್ಲಿ ಉಡಾವಣೆ ಮಾಡಲು ಉದ್ದೇಶಿಸಲಾಗಿದೆ. ಇದು ಸೂರ್ಯಮಂಡಲ, ಅದರ ಒಡಲು, ಸೌರ ಮಾರುತ ಮತ್ತು ಅದರಿಂದ ಭೂಮಿಯ ಮೇಲಿನ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲಿದೆ. ಅದೇ ರೀತಿ, ವೀನಸ್‌ 2023ಕ್ಕೆ ಉಡಾವಣೆ ಆಗಲಿದೆ ಎಂದರು. 

2019ರಲ್ಲಿ 14 ಉಡಾವಣಾ ನೌಕೆಗಳು ಹಾಗೂ 18 ಉಪಗ್ರಹಗಳು ಸೇರಿದಂತೆ ಒಟ್ಟಾರೆ 32 ಮಿಷನ್‌ಗಳನ್ನು ಇಸ್ರೋ ಹಮ್ಮಿಕೊಂಡಿದೆ ಎಂದು ಮಾಹಿತಿ ನೀಡಿದ ಅವರು, 2019ರ ಸೆಪ್ಟೆಂಬರ್‌-ಅಕ್ಟೋಬರ್‌ನಲ್ಲಿ ಜಿ-ಸ್ಯಾಟ್‌ 20 ಸಂವಹನ ಉಪಗ್ರಹ ಉಡಾವಣೆ ಮಾಡಲಾಗುವುದು. ಇದರಿಂದ ಜಮ್ಮು-ಕಾಶ್ಮೀರ್‌ ಮತ್ತು ಈಶಾನ್ಯ ರಾಜ್ಯಗಳಿಗೆ 100 ಜಿಬಿಪಿಎಸ್‌ ವೇಗದಲ್ಲಿ ಇಂಟರ್‌ನೆಟ್‌ ಸೌಲಭ್ಯ ದೊರೆಯಲಿದೆ. 2018ರಲ್ಲಿ 16 ಮಿಷನ್‌ಗಳನ್ನು ಯಶಸ್ವಿಯಾಗಿ ಪೂರೈಸಲಾಗಿದೆ ಎಂದು ಮಾಹಿತಿ ನೀಡಿದರು. 

ಅಲ್ಲದೆ, ಮರುಬಳಕೆ ಮಾಡಬಹುದಾದ ಉಡಾವಣಾ ವಾಹಕಗಳ ಪ್ರಾತ್ಯಕ್ಷಿಕೆ ಕೂಡ ಇದೇ ವರ್ಷ ನಡೆಯಲಿದೆ. ಉಪಗ್ರಹ ಉಡಾವಣೆಗೆ ಬಳಸುವ ವಾಹಕಗಳು ಸ್ವಲ್ಪ ದೂರ ಹೋದ ನಂತರ ಪುನಃ ನಿಗದಿತ ಜಾಗಕ್ಕೆ ಹಿಂತಿರುಗುತ್ತವೆ. ಮುಂಬರುವ ದಿನಗಳಲ್ಲಿ ಮರುಬಳಕೆ ಮಾಡಬಹುದಾದ ವಾಹಕಗಳನ್ನು ತಯಾರಿಸಲು ಉದ್ದೇಶಿಸಲಾಗಿದೆ. ಇವುಗಳ ಪ್ರಾತ್ಯಕ್ಷಿಕೆ ನಡೆಸಲಿದ್ದು, ಇದಕ್ಕಾಗಿ ಹೆಲಿಕಾಪ್ಟರ್‌ನಲ್ಲಿ ಸುಮಾರು ಮೂರ್‍ನಾಲ್ಕು ಕಿ.ಮೀ. ಎತ್ತರದಿಂದ ವಾಹಕಗಳನ್ನು ಕೈಬಿಡಲಾಗುವುದು. ಅವು ರನ್‌ವೇನಲ್ಲಿ ಭೂಸ್ಪರ್ಶ ಮಾಡಲಿವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. 

ಎಲ್‌ಆ್ಯಂಡ್‌ಟಿಯಿಂದಲೂ ಪಿಎಸ್‌ಎಲ್‌ವಿ!
ಖಾಸಗಿ ಕಂಪನಿಗಳಿಂದ ಪಿಎಸ್‌ಎಲ್‌ವಿ (ದ್ರುವೀಯ ಉಪಗ್ರಹ ಉಡಾವಣಾ ವಾಹನ) ನಿರ್ಮಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ ಎರಡಕ್ಕಿಂತ ಹೆಚ್ಚು ಕಂಪನಿಗಳು ಈ ಸಂಬಂಧ ಮುಂದೆಬಂದಿವೆ ಎಂದು ಕೆ. ಶಿವನ್‌ ತಿಳಿಸಿದರು. 

ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿ., (ಎಚ್‌ಎಎಲ್‌), ಎಲ್‌ ಆಂಡ್‌ ಟಿ ಒಗ್ಗೂಡಿ ಪಿಎಸ್‌ಎಲ್‌ವಿ ನಿರ್ಮಾಣಕ್ಕೆ ಆಸಕ್ತಿ ತೋರಿಸಿವೆ. ಇದಲ್ಲದೆ, ಇನ್ನೂ ಹಲವು ಕಂಪನಿಗಳೂ ಮುಂದೆಬಂದಿವೆ. ಇಸ್ರೋ ಇತಿಹಾಸದಲ್ಲಿ ಇದೊಂದು ಮಹತ್ವದ ಮೈಲುಗಲ್ಲು ಆಗಲಿದೆ. ಬಾಹ್ಯಾಕಾಶ ಕ್ಷೇತ್ರ ಬೆಳೆಯಲು ಇದು ಮಹತ್ವದ ನಿರ್ಧಾರ ಆಗಿದೆ ಎಂದು ಕೆ. ಶಿವನ್‌ ವಿಶ್ಲೇಷಿಸಿದರು. 

72 ಗಂಟೆಯಲ್ಲಿ ಉಪಗ್ರಹ ಉಡಾವಣಾ ವಾಹನ!
ಈಗ ಕೇವಲ 72 ಗಂಟೆಗಳಲ್ಲಿ ಆರು ಜನರಿಂದ ಒಂದು ಉಪಗ್ರಹ ಉಡಾವಣಾ ವಾಹನ ನಿರ್ಮಾಣ ಮಾಡಬಹುದು! ಹೌದು, ಸಣ್ಣ ಉಪಗ್ರಹ ಉಡಾವಣಾ ವಾಹನ (ಎಸ್‌ಎಸ್‌ಎಲ್‌ವಿ)ವನ್ನು ನಿರ್ಮಿಸಲು ಇಸ್ರೋ ಉದ್ದೇಸಿಸಿದ್ದು, 2019ರ ಜುಲೈನಲ್ಲಿ ಈ ಮಾದರಿಯ ಮೊದಲ ವಾಹನ ನಭಕ್ಕೆ ಚಿಮ್ಮಲಿದೆ.  ಇದರ ನಿರ್ಮಾಣಕ್ಕೆ 72 ದಿನಗಳಲ್ಲ; 72 ಗಂಟೆಗಳು ಸಾಕು. ಇದರ ಬಿಡಿಭಾಗಗಳ ಜೋಡಣೆಗೆ ಆರು ಜನರ ಅವಶ್ಯಕತೆ ಇದೆ. ಕೇವಲ 30 ಕೋಟಿ ವೆಚ್ಚದಲ್ಲಿ ತಯಾರಿಸಬಹುದಾದ ಈ ಎಸ್‌ಎಸ್‌ಎಲ್‌ವಿ ತೂಕ 110 ಟನ್‌. ಇದು 500 ಕೆಜಿ ತೂಕದ ಉಪಗ್ರಹವನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ ಎಂದು ಮಾಹಿತಿ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next