ಮಳವಳ್ಳಿ: ಕೆಆರ್‌ಎಸ್ ಜಲಾಶಯದಿಂದ ಕಾವೇರಿ ನದಿಗೆ 10 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿಯ ಬಿಟ್ಟಿರುವುದರಿಂದ ತಾಲೂಕಿನ ಬ್ಲಫ್‌ನ ಗಗನಚುಕ್ಕಿ ಜಲಪಾತ ಹಾಲಿನ ನೊರೆಯಂತೆ ಉಕ್ಕಿ ಭೋರ್ಗರೆಯುತ್ತಿದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.
ಜಿಲ್ಲೆಯ ರೈತರ ಜೀವನಾಡಿಯಾಗಿರುವ ಕಾವೇರಿ ಮಾತೆ ಬ್ಲಫ್‌ನ ಗಗನಚುಕ್ಕಿ ಜಲಪಾತದಲ್ಲಿ ಮೈದುಂಬಿ ತಮಿಳುನಾಡಿಗೆ ಹರಿದು ಹೋಗುತ್ತಿದ್ದು, ಸೌಂದರ್ಯ ಹೆಚ್ಚಿಸಿದ್ದು, ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ.
ಕೃಷ್ಣರಾಜಸಾಗರ ಆಣೆಕಟ್ಟೆಗೆ 30 ಸಾವಿರ ಕ್ಯೂಸೆಕ್ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದ್ದು, 112 ಅಡಿ ತಲುಪಿದೆ. ನದಿಯೂ ಸೇರಿದಂತೆ ನಾಲೆಗಳಿಗೆ ೧೩ ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹಾರಂಗಿ ಮತ್ತು ಹೇಮಾವತಿ ಜಲಾಶಯದ ಮೇಲ್ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯಕ್ಕೆ ಹೆಚ್ಚಿನ ಒಳಹರಿವು ಬರಲಿದೆ.
ಇದನ್ನೂ ಓದಿ :ನೂತನ ಸಿಎಂ ಬಸವರಾಜ ಬೊಮ್ಮಾಯಿ ರಾಜಕೀಯ ಇತಿಹಾಸ ಹೀಗಿದೆ
ಪ್ರವಾಸಿಗರ ದಂಡು:
ಕೊರೊನಾ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿತ್ತು. ಪ್ರಸ್ತುತ ಕಳೆದ ಹಲವು ದಿನಗಳಿಂದ ಪ್ರವಾಸಿಗರಿಗೆ ಮುಕ್ತ ಪ್ರವೇಶ ನೀಡಲಾಗಿರುವುದರಿಂದ ಮೈಸೂರು, ಬೆಂಗಳೂರು, ಚಾಮರಾಜನಗರ ಹಾಗೂ ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದು, ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.