Advertisement

ವಾಮಾಚಾರದ ವಿರುದ್ಧ ‘ಗದಾಯುದ್ಧ’

04:17 PM Oct 01, 2022 | Team Udayavani |

ರನ್ನನ “ಗದಾಯುದ್ಧ’ದ ಬಗ್ಗೆ ಬಹುತೇಕರು ಕೇಳಿರುತ್ತೀರಿ. ಈಗ ಅದೇ “ಗದಾಯುದ್ಧ’ ಎಂಬ ಹೆಸರಿನಲ್ಲಿ ಸಿನಿಮಾವೊಂದು ತೆರೆಗೆ ಬರುತ್ತಿದೆ. ಅಂದಹಾಗೆ, ಈ ಸಿನಿಮಾದ ಹೆಸರು “ಗದಾಯುದ್ಧ’ ಅಂತಿದ್ದರೂ, ಈ ಸಿನಿಮಾಕ್ಕೂ ರನ್ನನ “ಗದಾಯುದ್ಧ’ ಕೃತಿಗೂ ಯಾವುದೇ ಸಂಬಂಧವಿಲ್ಲ. ಸಿನಿಮಾದ ಕಥೆಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಚಿತ್ರತಂಡ ತಮ್ಮ ಸಿನಿಮಾಕ್ಕೆ “ಗದಾಯುದ್ಧ’ ಅಂತ ಹೆಸರಿಟ್ಟಿದೆ.

Advertisement

ಈಗಾಗಲೇ “ಗದಾಯುದ್ಧ’ ಸಿನಿಮಾದ ಬಹುತೇಕ ಕೆಲಸಗಳನ್ನು ಸದ್ದಿಲ್ಲದೆ ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಟೀಸರ್‌ ಮತ್ತು ಹಾಡೊಂದನ್ನು ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ.

ಇದೇ ವೇಳೆ ಮಾತನಾಡಿದ ನಿರ್ದೇಶಕ ಶ್ರೀವತ್ಸ ರಾವ್‌, “ಕಣ್ಣಿಗೆ ಕಾಣುವ ಶಕ್ತಿಗಳ ವಿನಾಶಕ್ಕೆ ಮಿಸೆಲ್‌ ಬೇಕಾದರೆ, ಕಣ್ಣಿಗೆ ಕಾಣದ ಶಕ್ತಿಗಳ ವಿನಾಶಕ್ಕೆ ಗದೆ ಬೇಕು. ಅಂಥದ್ದೇ ವಿಷಯವನ್ನು ಈ ಸಿನಿಮಾದಲ್ಲಿ ಹೇಳಿದ್ದೇವೆ. ಭಸ್ಮಾಸುರನ ವಂಶಸ್ಥರು ಇಂದಿಗೂ ಜೀವಂತವಾಗಿದ್ದು, ಸಮುದ್ರದ ಮಧ್ಯೆದಲ್ಲಿರುವ ಒಂದು ದ್ವೀಪದಲ್ಲಿ ವಾಮಾಚಾರದ ಮೂಲಕ ಜನರನ್ನು ಕೊಲ್ಲುತ್ತಿರುತ್ತಾರೆ. ಇಂಥ ದುಷ್ಟರ ರಕ್ಷಣೆಗೆ ಭೀಮ ಮತ್ತೂಮ್ಮೆ ಹುಟ್ಟಿ ಬಂದು ಅವರನ್ನು ಹೇಗೆ ಸಂಹರಿಸುತ್ತಾನೆ ಎನ್ನುವುದು ಸಿನಿಮಾದ ಕಥೆಯ ಎಳೆ. ಕಾಲ್ಪನಿಕ ಕಥೆಯಾದರೂ ಸಾಕಷ್ಟು ಸತ್ಯ ಘಟನೆಗಳನ್ನು ಇಟ್ಟುಕೊಂಡು ಅದನ್ನು ವೈಜ್ಞಾನಿಕವಾಗಿ ಮತ್ತು ಮನರಂಜನಾತ್ಮಕವಾಗಿ ಸಿನಿಮಾದಲ್ಲಿ ಹೇಳಿದ್ದೇವೆ’ ಎಂದು ಕಥಾಹಂದರದ ಬಗ್ಗೆ ವಿವರಣೆ ನೀಡಿದರು.

ಸಿನಿಮಾದಲ್ಲಿ ಭೀಮನನ್ನು ಪ್ರತಿನಿಧಿಸುವಂಥ ಪಾತ್ರದಲ್ಲಿ ನಾಯಕ ಸುಮಿತ್‌ ಕಾಣಿಸಿಕೊಂಡಿದ್ದಾರೆ. “ಭಾರತದಲ್ಲಿ ಪ್ರತಿವರ್ಷ ಸರಿ ಸುಮಾರು 8 ಲಕ್ಷ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಬಹುತೇಕ ಆತ್ಮಹತ್ಯೆಗಳ ಹಿಂದೆ ಕೊಲೆಯ ಸಂಚು ಇರುತ್ತದೆ. ಪೌರಾಣಿಕ ಎಳೆ ,ವಾಮಾಚಾರ ವಿಷಯವನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಲವ್‌, ಆ್ಯಕ್ಷನ್‌, ಸಸ್ಪೆನ್ಸ್‌ ಎಲ್ಲವೂ ಸಿನಿಮಾದಲ್ಲಿದೆ’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು ನಾಯಕ ಸುಮಿತ್‌.

ನಿರ್ಮಾಪಕ ನಿತಿನ್‌ ಶಿರಗೂರ್ಕರ್‌, ನಟಿ ಧನ್ಯಾ ಪಾಟೀಲ್‌, ನಟ ಡ್ಯಾನಿ ಕುಟ್ಟಪ್ಪ, ಛಾಯಾಗ್ರಹಕ ಸುರೇಶ ಬಾಬು, ಸಂಗೀತ ನಿರ್ದೇಶಕ ಶಾದ್ರಚ್‌ ಸೋಲೊಮನ್‌ ಸಂಗೀತ, ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್‌, ಚೇತನ್‌ ಅನಿಕೇತ್‌ ಮೊದಲಾದವರು “ಗದಾಯುದ್ಧ’ದ ಬಗ್ಗೆ ಒಂದಷ್ಟು ಮಾತನಾಡಿದರು.

Advertisement

ಈ ಹಿಂದೆ “ಮೃಗಶಿರ’ ಸಿನಿಮಾವನ್ನು ನಿರ್ದೇಶಿಸಿದ್ದ ಶ್ರೀವತ್ಸ ರಾವ್‌ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. “ನಿತಿನ್‌ ಶಿರಗೂರ್ಕರ್‌ ಫಿಲಂಸ್‌’ ಬ್ಯಾನರಿನಲ್ಲಿ ನಿತಿನ್‌ ಶಿರಗೂರ್ಕರ್‌ ಈ ಸಿನಿಮಾ ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next