ಹೈದರಾಬಾದ್: ಟಾಲಿವುಡ್ ಸಿನಿರಂಗದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ “ಕಣ್ಣಪ್ಪ”ಸಟ್ಟೇರಿದ ದಿನದಿಂದ ಸದ್ದು ಮಾಡುತ್ತಿದೆ.
ಬಿಗ್ ಬಜೆಟ್ ಸಿನಿಮಾದಲ್ಲಿ ದಕ್ಷಿಣದ ಖ್ಯಾತ ಕಲಾವಿದರು ನಟಿಸಲಿದ್ದಾರೆ ಎನ್ನುವ ಮಾತುಗಳು ಮೊದಲಿನಿಂದಲೂ ಹರಿದಾಡುತ್ತಿದೆ. ಇದರಲ್ಲಿ ಕನ್ನಡದ ಶಿವರಾಜ್ ಕುಮಾರ್ ಇದ್ದಾರೆ ಎನ್ನಲಾಗಿದೆ. ಇದರೊಂದಿಗೆ ಶಿವನ ಪಾತ್ರದಲ್ಲಿ ಟಾಲಿವುಡ್ ಸೂಪರ್ ಸ್ಟಾರ್ ನಟ ಪ್ರಭಾಸ್ ಅವರು ಕಾಣಿಸಿಕೊಳ್ಳಲಿದ್ದಾರೆ. ಇನ್ನು ಲೇಡಿ ಸೂಪರ್ ಸ್ಟಾರ್ ನಯನತಾರಾ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇಷ್ಟು ಮಾತ್ರವಲ್ಲದೆ ಮಾಲಿವುಡ್ ನಟ ಮೋಹನ್ ಲಾಕ್ ಕೂಡ ʼಕಣ್ಣಪ್ಪʼ ಚಿತ್ರದ ಭಾಗವಾಗಲಿದ್ದಾರೆ.
ಇದೀಗ ಶಿವನ ನಿಷ್ಠಾವಂತ ಅನುಯಾಯಿಯಾದ ʼಕಣ್ಣಪ್ಪʼ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಬಣ್ಣ ಹಚ್ಚಲಿದ್ದಾರೆ ಎನ್ನುವ ಸುದ್ದಿಯೊಂದು ಹೊರಬಿದ್ದಿದೆ. ಈ ಬಗ್ಗೆ ಟ್ರೇಡ್ ಅನಾಲಿಸ್ಟ್ ರಮೇಶ್ ಬಾಲಾ ಅವರು ಟ್ವೀಟ್ ಮಾಡಿದ್ದಾರೆ.
ಆ ಮೂಲಕ ಅಕ್ಷಯ್ ಕುಮಾರ್ ಇದೇ ಮೊದಲ ಬಾರಿಗೆ ಟಾಲಿವುಡ್ ಸಿನಿರಂಗಕ್ಕೆ ಎಂಟ್ರಿ ಕೊಡಲಿದ್ದಾರೆ.
ಮುಕೇಶ್ ಸಿಂಗ್ ನಿರ್ದೇಶನದ ಈ ಚಿತ್ರದ ತಾರಾಬಳಗದಲ್ಲಿ ವಿಷ್ಣು ಮಂಚು, ಮೋಹನ್ ಬಾಬು, ಜೊತೆಗೆ ಪ್ರಭಾಸ್, ಮೋಹನ್ ಲಾಲ್, ಶಿವ ರಾಜಕುಮಾರ್, ಮಧು, ಶರತ್‌ಕುಮಾರ್, ಪ್ರಭುದೇವ, ಬ್ರಹ್ಮಾನಂದಂ, ಮುಖೇಶ್ ರಿಷಿ, ಕೌಶಲ್ ಮಂದ ಮುಂತಾದ ಪ್ರಮುಖರು ಕಾಣಿಸಿಕೊಳ್ಳಲಿದ್ದಾರೆ.