Advertisement

ಗದಗ: ಸಮಾಜಮುಖಿ ಆಲೋಚನೆ ಹೊಂದಿದ್ದ ಒಡೆಯರ್‌

05:27 PM Jun 06, 2024 | Team Udayavani |

■ ಉದಯವಾಣಿ ಸಮಾಚಾರ
ಗದಗ: ಮೈಸೂರಿನ ಸುವರ್ಣಯುಗದ ಸಾಮ್ರಾಟ್‌, ಸಾಮಾಜಿಕ ನ್ಯಾಯದ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್‌. ಅವರ ಆಡಳಿತಾವಧಿಯಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಇಂಬು-ವೇಗೋತ್ಕರ್ಷ ದೊರೆಯಿತು. ಅವರು ಅರಮನೆಯಲ್ಲಿ ಕಾಲ ಕಳೆದದ್ದಕ್ಕಿಂತ ಸಮಾಜಮುಖಿ ಆಲೋಚನೆ ಹೊಂದಿ ಜನರೊಂದಿಗೆ ಇದ್ದುದೇ ಹೆಚ್ಚು. ಇವರ ತುಡಿತದ ಫಲವೇ ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ಕಾರಣವಾಯಿತು ಎಂದು ಬರಹಗಾರ ಬಸವರಾಜ ಗಣಪ್ಪನವರ ಹೇಳಿದರು.

Advertisement

ನಗರದಲ್ಲಿ ಜಿಲ್ಲಾ ಕಸಾಪ ಏರ್ಪಡಿಸಿದ ಕಸಾಪ ಸಂಸ್ಥಾಪಕ ರಾಜರ್ಷಿ ನಾಲ್ವಡಿ ಕೃಷ್ಣರಾಜ  ಒಡೆಯರ್‌ ಅವರ 140ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲೇ ಮೊಟ್ಟಮೊದಲ ವಿವಿಯನ್ನು ಮೈಸೂರಿನಲ್ಲಿ ತೆರೆದು ದಾಖಲೆ ನಿರ್ಮಿಸಿದ ಕೀರ್ತಿ ನಾಲ್ವಡಿಯವರಿಗೆ ಸಲ್ಲುತ್ತದೆ ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಕಾಲದಲ್ಲಿ ಮೈಸೂರನ್ನು ಸರ್ವತೋಮುಖ ಅಭಿವೃದ್ಧಿಯತ್ತ ಕೊಂಡೊಯ್ದರು. ಶಿಕ್ಷಣ, ಕೈಗಾರಿಕೆ, ಕೃಷಿ ಮೂರು ಆಯಾಮಗಳಲ್ಲಿ ಬೃಹತ್‌ ಕೈಗಾರಿಕೆಗಳ ಸ್ಥಾಪನೆ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಕೃಷಿ ಭೂಮಿಯ ಅಭಿವೃದ್ಧಿಗೆ ನೀರಾವರಿ ಯೋಜನೆ ಜಾರಿಗೆ ತಂದ ಧೀಮಂತರು ಎಂದರು.

ಆಡಳಿತದಲ್ಲಿ ಜನರ ಸಹಭಾಗಿತ್ವ ಇರಬೇಕು ಎಂಬ ಉದೇಶದಿಂದ ಮೈಸೂರು ಸಂಸ್ಥಾನದಲ್ಲಿ ಚಾಮರಾಜ ಒಡೆಯರ ಕಾಲದಲ್ಲಿ ಪ್ರಜಾಪ್ರತಿನಿಧಿ ಸಭೆ ಪ್ರಾರಂಭಗೊಂಡಿತು. ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಕಾಲದಲ್ಲಿ ಇದು ವಿಸ್ತಾರವಾಗಿ ಬೆಳೆಯಿತು. ಶಿಕ್ಷಣ ಇಲ್ಲದೇ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ನಾಲ್ವಡಿ ಕೃಷ್ಣರಾಜರು
ಕಂಡುಕೊಂಡಿದ್ದರು. ಈ ಕಾರಣಕ್ಕಾಗಿ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಅವರು ಹೆಚ್ಚಿನ ಒತ್ತು ನೀಡಿದರು. ಉಚಿತ ಶಿಕ್ಷಣ ಪ್ರಾರಂಭಿಸಿದರು.

ಕನ್ನಡ ನಾಡಿನಲ್ಲಿ ನೆಲ-ಜಲ, ಭಾಷೆಯ ಹಿರಿಮೆಯನ್ನು ಎತ್ತಿ ಹಿಡಿಯಲು ಕಸಾಪದಂತಹ ಸಂಸ್ಥೆ ಬೇಕು ಎನ್ನುವ ಚಿಂತನೆ ಮಾಡಿ ಸ್ಥಾಪಿಸಿದ ಸಂಸ್ಥೆ ಒಂದು ಶತಮಾನ ಕಂಡು ಕನ್ನಡಿಗರ ಹೆಮ್ಮೆಯ ದ್ಯೊತಕವಾಗಿದೆ ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಲ್ವಡಿ ಕೃಷ್ಟರಾಜ ಒಡೆಯರ್‌ ಮೊಟ್ಟ ಮೊದಲ ಬಾರಿಗೆ
ಸ್ತ್ರೀ ಶಿಕ್ಷಣವನ್ನು ಕಡ್ಡಾಯಗೊಳಿಸಿದರು. ಕುರುಡ ಮತ್ತು ಮೂಕ ಮಕ್ಕಳಿಗೆ ಶಾಲೆಗಳನ್ನು ಪ್ರಾರಂಭಿಸಿದರು. ಅವರ ಅವಧಿಯಲ್ಲಿ 1911ರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭಿಸಲಾಯಿತು. 1918ರಲ್ಲಿ ಶಾಲಾ ಪ್ರವೇಶಕ್ಕೆ ಜಾತಿ ಪದ್ಧತಿ ನಿರ್ಮೂಲನೆ ಮಾಡಲಾಯಿತು ಎಂದರು.

Advertisement

ಕಾರ್ಯಕ್ರಮದಲ್ಲಿ ಅಶೋಕ ಬರಗುಂಡಿ, ಚಂದ್ರಶೇಖರ ವಸ್ತ್ರದ, ಪ್ರ.ತೋ. ನಾರಾಯಣಪುರ, ಶಶಿಕಾಂತ ಕೊರ್ಲಹಳ್ಳಿ, ಅಶೋಕ ಹಾದಿ, ಅಶೋಕ ಸತ್ಯರಡ್ಡಿ, ಡಿ.ಎಸ್‌. ಬಾಪುರಿ, ಮಂಜುನಾಥ ಹಿಂಡಿ, ಸಿ.ಎಂ. ಮಾರನಬಸರಿ, ಡಾ| ರಾಜೇಂದ್ರ ಗಡಾದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next