Advertisement

ಗದುಗಿನಲ್ಲಿ ನಿರ್ವಹಣೆಯಿಲ್ಲದ ʼಗೌರವ ಘಟಕಗಳು’

01:07 PM Dec 13, 2022 | Team Udayavani |

ಗದಗ: ಸಾರ್ವಜನಿಕರಿಗೆ ಹೈಟೆಕ್‌ ಶೌಚಾಲಯ ವ್ಯವಸ್ಥೆ ಕಲ್ಪಿಸುವುದಕ್ಕಾಗಿ ಅವಳಿ ನಗರದಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ “ಗೌರವ ಘಟಕಗಳು’ ಮೂಲ ಸೌಲಭ್ಯದ ಕೊರತೆಯಿಂದ ಪಾಳು ಬಿದ್ದಿದೆ.

Advertisement

ನಗರದ ಹೃದಯದ ಭಾಗದಲ್ಲಿರುವ ರಾಜೀವ ಗಾಂಧಿ ನಗರ, ಎಸ್‌.ಎಂ. ಕೃಷ್ಣ ನಗರ ಹಾಗೂ ಕುಲಕರ್ಣಿ ಓಣಿಯಲ್ಲಿರುವ ಗೌರವ ಘಟಕಗಳನ್ನು ನಿರ್ಮಿಸಲಾಗಿದೆ. ಈ ಭಾಗದ ಜನರಿಗೆ ಕಡಿಮೆ ಹಣದಲ್ಲಿ ಹೈಟೆಕ್‌ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಸರಿಯಾದ ನಿರ್ವಹಣೆ ಕೊರತೆಯಿಂದ ನಿರುಪಯುಕ್ತವಾಗಿದೆ.

ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಗೌರವ ಘಟಕ (ಹೈಟೆಕ್‌ ಶೌಚಾಲಯ)ಕ್ಕೂ ಸಾರ್ವಜನಿಕರಿಗೆ ನಂಟು ಇಲ್ಲದಂತಾಗಿದೆ. ಇತ್ತ ಸರಕಾರದ ಅನುದಾನ ಮಾತ್ರ ಹೊಳೆಯಲ್ಲಿ ಕೊಚ್ಚಿ ಹೋದಂತಾಗಿದೆ. ಇನ್ನಾದರೂ ದುರಸ್ತಿಗೊಳಿಸಿ, ಸಾರ್ವಜನಿಕ ಬಳಕೆಗೆ ಅನುಕೂಲ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕಳೆದ ಎರಡೂ ವರ್ಷದಿಂದ ಕೋವಿಡ್‌ ಹಿನ್ನೆಲೆಯಲ್ಲಿ ಗೌರವ ಘಟಕಕ್ಕೆ ಹೋಗುವವರ ಸಂಖ್ಯೆ ಕಡಿಮೆಯಾಗಿದೆ. ಗೌರವ ಘಟಕದಲ್ಲಿರುವ ಸಲಕರಣೆಗಳು ಸಂಪೂರ್ಣ ಹಾಳಾಗಿವೆ. ಅದರಲ್ಲೂ ಶೌಚಾಲಯದಲ್ಲಿ ನೀರು ಬಿಡುವ ನಳ, ಮೂತ್ರ ಹೊರ ಹೋಗುವ ಪೈಪ್‌ಗ್ಳು ಕಿತ್ತು ಹೋಗಿವೆ. ಕಸ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಮೂತ್ರ ವಿಸರ್ಜನೆ ಕಾರಣದಿಂದ ಆ ಜಾಗ ಆಶುಚಿತ್ವದಿಂದ ಕೂಡಿದೆ. ಸ್ನಾನಕ್ಕೂ ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಅದು ಕೂಡ ಬಂದ್‌ ಆಗಿವೆ.

ದುರಸ್ತಿಗೆ ಆಗ್ರಹ: ಗದಗ-ಬೆಟಗೇರಿ ಅವಳಿ ನಗರದಲ್ಲಿರುವ ಗೌರವ ಘಟಕದಲ್ಲಿನ ವಿವಿಧ ಸಲಕರಣೆಗಳು ಸಂಪೂರ್ಣವಾಗಿ ತುಕ್ಕು ಹಿಡಿದಿವೆ. ಬೂಟ್‌ ಪಾಲಿಶ್‌ ಮಶಿನ್‌, ಹ್ಯಾಂಡ್‌ ಡ್ರೈಯರ್‌, ಹೇರ್‌ ಡ್ರೈಯರ್‌, ಐರನ್‌ ಬಾಕ್ಸ್‌, ಶೋವರ್‌ ಬಾತ್‌ ಬಂದ್‌ ಆಗಿದ್ದು, ಕೆಲ ವಸ್ತುಗಳು ತುಕ್ಕು ಹಿಡಿದಿವೆ. ಫ್ರೆಶ್‌ಅಪ್‌ ರೂಮ್‌ನಲ್ಲಿನ ಸಾಮಗ್ರಿಗಳು ಹಾಳಾಗಿವೆ. ಇಲ್ಲಿನ ಸಿಬ್ಬಂದಿಗೆ ಸರಿಯಾದ ಸಂಬಳ ಇಲ್ಲದ ಕಾರಣ ನಿರ್ವಹಣೆ ಕೊರತೆ ಕಾಡುತ್ತಿದೆ. ಹೀಗಾಗಿ ಗೌರವ ಘಟಕದ ದುರಸ್ತಿ ಮಾಡಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

ಹಂದಿಗಳ ಕಾಟ: ಸಾರ್ವಜನಿಕರಿಗೆ ಉಪಯೋಗಕ್ಕೆ ನಿರ್ಮಿಸಲಾಗಿರುವ ಗೌರವ ಘಟಕದ ಪಕ್ಕದಲ್ಲಿ ಶೌಚಾಲಯದ ನೀರು ಸಂಗ್ರಹಗೊಂಡು ದುರ್ನಾತ ಬೀಡುತ್ತಿದೆ. ಹಂದಿಗಳ ಹಾವಳಿ ಜೋರಾಗಿದೆ. ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ. ಅಧಿ ಕಾರಿಗಳು ಶೌಚಾಲಯದ ನೀರು ಬೇರೆ ಹೋಗಲು ಕೂಡಲೇ ವ್ಯವಸ್ಥೆ ಮಾಡಬೇಕು. ಚರಂಡಿಗಳನ್ನು ದುರಸ್ತಿ ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಗದಗ-ಬೆಟಗೇರಿ ಅವಳಿ ನಗರದ ಲ್ಲಿರುವ ಗೌರವ ಘಟಕಗಳು ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದೆ. ಕೂಡಲೇ ಮೂಲಸೌಲಭ್ಯ ಕಲ್ಪಿಸಬೇಕು. ಸಾರ್ವಜನಿಕರಿಗೆ ಉಪಯೋಗ ಮಾಡಲು ಅವಕಾಶ ನೀಡಬೇಕು.  -ಪರಶುರಾಮ ರಾಮಣ್ಣವರ ಗದಗ ನಿವಾಸಿ

ಗದಗ-ಬೆಟಗೇರಿ ಅವಳಿ ನಗರದಲ್ಲಿರುವ ಗೌರವ ಘಟಕಗಳು ಸ್ಥಗಿತಗೊಂಡಿರುವುದು ನನ್ನ ಗಮನಕ್ಕಿಲ್ಲ. ಒಂದು ವೇಳೆ ಸ್ಥಗಿತಗೊಂಡಿದ್ದರೆ ಪುನರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಖಾಸಗಿ ವ್ಯಕ್ತಿಯೊಬ್ಬರು ಗೌರವ ಘಟಕಗಳ ನಿರ್ವಹಣೆ ಮಾಡುತ್ತಿದ್ದು, ಸಾರ್ವಜನಿಕರಿಗೆ ಅನಾನುಕೂಲ ಆಗದಂತೆ ನಿಗಾ ವಹಿಸಲು ನಿರ್ದೇಶಿಸುತ್ತೇನೆ.  –ಉಷಾ ದಾಸರ, ನಗರಸಭೆ ಅಧ್ಯಕ್ಷೆ, ಗದಗ-ಬೆಟಗೇರಿ

ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next