Advertisement

ಕಪ್ಪತ್ತಗುಡ್ಡ  ವನ್ಯಧಾಮ, ಕಂಪನಿಗಳಿಗೆ ಶಾಕ್‌ 

09:57 AM Jan 11, 2019 | |

ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡ ಅರಣ್ಯ ಪ್ರದೇಶವನ್ನು ವನ್ಯಧಾಮವನ್ನಾಗಿಸಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೖತ್ವದ ಜೆಡಿಎಸ್‌- ಕಾಂಗ್ರೆಸ್‌ ಸರಕಾರ ನಿರ್ಧರಿಸಿದೆ. ಸಕಾರದ ಈ ನಿರ್ಧಾರ ಕಪ್ಪತ್ತಗುಡ್ಡದ ಅದಿರಿನ ಮೇಲೆ ಕಣ್ಣಿಟ್ಟಿದ್ದ ಬಹುರಾಷ್ಟ್ರೀಯ ಕಂಪನಿಗಳಿಗೆ ಬಿಗ್‌ ಶಾಕ್‌ ಕೊಟ್ಟಿದೆ. ಅದರೊಂದಿಗೆ ಈ ಭಾಗದ ಜನರ ದಶಕಗಳ ಹೋರಾಟಕ್ಕೆ ಮನ್ನಣೆ ಸಿಕ್ಕಂತಾಗಿದೆ.

Advertisement

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಬೆಂಗಳೂರಿನಲ್ಲಿ ಅರಣ್ಯ ಇಲಾಖೆ ‘ರಾಜ್ಯ ವನ್ಯಜೀವಿ ಮಂಡಳಿ’ ಸಭೆಯಲ್ಲಿ ಕಪ್ಪತ್ತಗುಡ್ಡದ ಬಗ್ಗೆ ವಿಸ್ತೃತ ಚರ್ಚೆ ನಡೆದಿದ್ದು, ಸಂರಕ್ಷಿತ ಕಪ್ಪತ್ತಗುಡ್ಡವನ್ನು ‘ವನ್ಯಧಾಮ’ವನ್ನವಾಗಿಸಲು ತೀರ್ಮಾನಿಸಿರುವುದು ಈ ಭಾಗದ ಜನರಲ್ಲಿ ಹರ್ಷ ತಂದಿದೆ.

ಸಮುದ್ರ ಮಟ್ಟದಿಂದ 2700 ಅಡಿ ಎತ್ತರವಿರುವ ಜಿಲ್ಲೆಯ ಗದಗ ತಾಲೂಕಿನ ಬಿಂಕದಕಟ್ಟಿಯಿಂದ ಮುಂಡರಗಿ ತಾಲೂಕಿನ ಸಿಂಗಟಾಲಕೇರಿ ವರೆಗೆ 63 ಕಿಮೀ ಉದ್ದ ಹಾಗೂ ಒಟ್ಟು 32 ಸಾವಿರ ಹೆಕ್ಟೇರ್‌(80 ಸಾವಿರ ಎಕರೆ) ಪ್ರದೇಶದಲ್ಲಿ ಹಸಿರಿನ ಸೆರಗೊಡ್ಡಿದೆ. ಕರಿ ಏಲೆಕ್ಕಿ, ಅಶ್ವಗಂಧ, ಚದುರಂಗ, ಅಮೖತಬಳ್ಳಿ ಸೇರಿದಂತೆ 300ಕ್ಕೂ ಹೆಚ್ಚು ಜಾತಿಯ ಔಷಧೀಯ ಸಸ್ಯಗಳ ಆಗರವಾಗಿದೆ. ಕಪ್ಪತ್ತಗುಡ್ಡದಲ್ಲಿ 700ರಿಂದ 1000ಕ್ಕೂ ಹೆಚ್ಚು ನವಿಲುಗಳು, ಹೈನಾ, ಚಿರತೆ, ಸಾರಂಗ, ಜಿಂಕೆ, ಕಾಡುಹಂದಿ ಹಾಗೂ ಮತ್ತಿತರೆ ವನ್ಯಜೀವಿಗಳ ಆಶ್ರಯತಾಣವಾಗಿದೆ. ಕಪ್ಪತ್ತಗುಡ್ಡವನ್ನು ಮೋಡಗಳು ಚುಂಬಿಸಿದರೆ ಉತ್ತರ ಕರ್ನಾಟಕದಲ್ಲಿ ಮಳೆಯಾಗುತ್ತವೆ ಎಂಬುದು ಇಲ್ಲಿನ ಪ್ರತೀತಿ.

ಅದರೊಂದಿಗೆ ಬಂಗಾರ, ಮ್ಯಾಂಗನೀಜ್‌, ತಾಮ್ರ, ಕ್ಯಾಲ್ಸಿಯಂ ಹಾಗೂ ಕಬ್ಬಿಣದ ಸೇರಿದಂತೆ ಶೇ. 60 ಅದರಿನಿಂದ ಸಮೃದ್ಧವಾಗಿದೆ. ಹೀಗಾಗಿ ಕಪ್ಪತ್ತಗಿರಿಯ ಖನಿಜ ಸಂಪತ್ತಿನ ಮೇಲೆ ಪೋಸ್ಕೋ, ರಾಮಗಡ ಮಿನರಲ್ಸ್‌ ಆ್ಯಂಡ್‌ ಮೈನಿಂಗ್‌ ಲಿ. ಸೇರಿದಂತೆ ವಿವಿಧ ಕಂಪನಿಗಳು ಕಪ್ಪತ್ತಗುಡ್ಡದಲ್ಲಿ ಮೈನಿಂಗ್‌ ನಡೆಸಲು ಕಾದು ಕುಳಿತಿವೆ. ಆದರೆ, ಕಪ್ಪತ್ತಗುಡ್ಡದಲ್ಲಿ ಯಾವುದೇ ರೀತಿಯ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಜ| ತೋಂಟದ ಸಿದ್ಧಲಿಂಗ ಸ್ವಾಮೀಜಿ ತಮ್ಮ ಕೊನೆಯುಸಿರಿನ ವರೆಗೂ ಹೋರಾಡಿದ್ದರು. ಪೋಸ್ಕೋ ವಿರುದ್ಧದ ಹೋರಾಟ, ಸಂರಕ್ಷಿತ ಅರಣ್ಯ ಸ್ಥಾನಮಾನ ಹಿಂಪಡೆದಾಗಲೂ ಈ ಭಾಗದ ಜನರು ಶ್ರೀಗಳೊಂದಿಗೆ ನಿರಂತರ ಹೋರಾಟ ನಡೆಸಿದ್ದರು. ಅದರ ಫಲವಾಗಿ ಹಿಂದಿನ ಕಾಂಗ್ರೆಸ್‌ ಸರಕಾರ ಮತ್ತೆ ಕಪ್ಪತ್ತಗುಡ್ಡಕ್ಕೆ ಸಂರಕ್ಷಿತ ಸ್ಥಾನಮಾನ ಮುಂದುವರಿಸುವಂತಾಯಿತು. ಆದರೆ, ಇತ್ತೀಚೆಗೆ ಜ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಕಪ್ಪತ್ತಗುಡ್ಡದಲ್ಲಿ ಮತ್ತೆ ಗಣಿಕೆಗಾರಿಕೆ ಆರಂಭಗೊಳ್ಳುವ ಬಗ್ಗೆ ಆತಂಕದ ಮಾತುಗಳು ಕೇಳಿ ಬಂದಿತ್ತು. ಆದರೆ, ಕಪ್ಪತ್ತಗುಡ್ಡವನ್ನು ವನ್ಯಧಾಮವನ್ನಾಗಿಸುವ ಎಲ್ಲ ರೀತಿಯ ಗಣಿಗಾರಿಕೆಗಳಿಂದ ಮುಕ್ತಗೊಳಿಸುವ ಸರಕಾರದ ನಿರ್ಧಾರ ಕಪ್ಪತ್ತಗಿರಿ ಸಂರಕ್ಷಣೆಯಲ್ಲಿ ಮಹತ್ವದ ಬೆಳವಣಿಗೆ ಎನ್ನಲಾಗಿದೆ.

‘ವನ್ಯಧಾಮ’ದ ಪ್ರಯೋಜನೆ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದ ವನ್ಯಧಾಮ ಸಭೆಯಲ್ಲಿ ಕಪ್ಪತ್ತಗುಡ್ಡದ 300 ಚದುರ ಕಿಮೀ(30 ಸಾವಿರ ಹೆಕ್ಟೇರ್‌) ಪ್ರದೇಶವನ್ನು ವನ್ಯ ಧಾಮವನ್ನಾಗಿಸಲು ತೀರ್ಮಾನಿಸಿದೆ. ಇದು ಸಂರಕ್ಷಿತ ಅರಣ್ಯ ಸ್ಥಾನಮಾನಕ್ಕಿಂತ ಉನ್ನತ ಹಂತವಾಗಿದ್ದು, ಕೆಲವಾರು ಕಠಿಣ ನಿಯಮ ಅನುಸರಿಸಲಾಗುತ್ತದೆ. ಅಧಿಸೂಚಿತ ವನ್ಯಧಾಮ ಪ್ರದೇಶ ಹಾಗೂ ಸುತ್ತಲಿನ 100 ಮೀಟರ್‌ ವ್ಯಾಪ್ತಿಯಲ್ಲಿ ಮರಳು, ಕಲ್ಲು ಸೇರಿದಂತೆ ಯಾವುದೇ ರೀತಿಯ ಗಣಿಗಾರಿಕೆಗೆ ಅವಕಾಶವಿಲ್ಲ.

Advertisement

ವನ್ಯಜೀವಿಗಳಿಗೆ ತೊಂದರೆಯುಂಟು ಮಾಡುವಂತಹ ಸಿಡಿಮದ್ದು ಬಳಸುವಂತಿಲ್ಲ. ಅರಣ್ಯ ಮಧ್ಯ ಭಾಗದಲ್ಲಿ ಹಳ್ಳಿಗರ ಸಂಚಾರದ ಮೇಲೆ ಕೆಲವಾರು ನಿಯಮ ಹೇರಲಾಗುತ್ತದೆ. ವನ್ಯಜೀವಿ ಬೇಟೆ ತಡೆಗೆ ಕಠಿಣ ಕ್ರಮವಹಿಸಲಾಗುತ್ತದೆ.

ವನ್ಯಧಾಮದ ಅಭಿವೃದ್ಧಿ ಮತ್ತು ಪರಿಸರ ಸ್ನೇಹಿ ಪ್ರವಾಸೋದ್ಯಮ ಅಭಿವೃದ್ಧಿ, ವನ್ಯಧಾಮದ ವ್ಯಾಪ್ತಿ ವಿಸ್ತಾರವಾಗಿದ್ದರೆ, ಅದಕ್ಕಾಗಿ ಪ್ರತ್ಯೇಕ ಆರ್‌ಎಫ್‌ಒ, ಎಸಿಎಫ್‌ಒ ಅಧಿಕಾರಿ, ಅಗತ್ಯ ಸಿಬ್ಬಂದಿ ಒದಗಿಸಲಾಗುತ್ತದೆ. ಸಮೀಪದ ಹಳ್ಳಿಗರನ್ನು ಒಳಗೊಂಡಂತೆ ಇಕೋ ಡವೆಲಪ್‌ಮೆಂಟ್ ಕಮಿಟಿ ರಚಿಸಲಾಗುತ್ತದೆ. ಆ ಮೂಲಕ ವನ್ಯಧಾಮದಲ್ಲಿ ಕೈಗೊಳ್ಳುವ ವಿವಿಧ ಕಾಮಗಾರಿಗಳಿಂದಾಗಿ ಸ್ಥಳೀಯರಿಗೆ ಉದ್ಯೋಗ ಅವಕಾಶಗಳೂ ಹೆಚ್ಚುತ್ತವೆ ಎಂದು ಹೇಳಲಾಗಿದೆ.

ಈ ಕುರಿತು ಹೊಸದಾಗಿ ಪ್ರಸ್ತಾವನೆ ಕಳುಹಿಸಿಲ್ಲ. ಆದರೆ, 2012ರ ಫೆ.21ರಂದು ರಾಜ್ಯ ವನ್ಯಜೀವಿ ಮಂಡಳಿ ಉಪಾಧ್ಯಕ್ಷರಾಗಿದ್ದ ಅನಿಲ ಕುಂಬ್ಳೆ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಡಂಬಳದಲ್ಲಿ ಸಾರ್ವಜನಿಕ ಸಮಾಲೋಚನಾ ಸಭೆ ನಡೆದಿತ್ತು. ಅದರಲ್ಲಿ ಬಹುತೇಕ ‘ವನ್ಯಧಾಮ’ದ ಪರವಾಗಿ ಅಭಿಪ್ರಾಯಗಳು ಬಂದಿದ್ದವು. ಅದನ್ನೇ ಆಧರಿಸಿ ವನ್ಯಧಾಮವನ್ನಾಗಿಸಲು ತೀರ್ಮಾನಿಸಿರಬಹುದು. ಇದರಿಂದ ವನ್ಯಜೀವಿಗಳ ಸಂರಕ್ಷಣೆಯಾಗಲಿದ್ದು, ಸ್ಥಳೀಯರನ್ನು ಬೇರೆಡೆ ಸ್ಥಳಾಂತರಿಸಲಾಗದು.
ಸೋನಲ್‌ ವೃಷ್ಣ,
 ಉಪ ಅರಣ್ಯ ಸಂರಕ್ಷಣಾಧಿಕಾರಿ

ಕಪ್ಪತ್ತಗುಡ್ಡದ 300 ಚದುರ ಕಿಮೀ ಪ್ರದೇಶವನ್ನು ವನ್ಯಧಾಮವನ್ನಾಗಿಸಲು ನಿರ್ಧರಿಸಲಾಗಿದೆ. ಸಂರಕ್ಷಿತ ಅರಣ್ಯ ಸ್ಥಾನಮಾನದಷ್ಟೇ ಮಹತ್ವದ್ದಾಗಿದ್ದು, ವನ್ಯಜೀವಿಗಳ ಸಂರಕ್ಷಣೆಗೆ ಹೆಚ್ಚು ಅನುಕೂಲವಾಗಲಿದೆ.
•ಸಿ. ಜಯರಾಮ,
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವಿ).

•ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next