Advertisement

ಸಮೇಳನಕ್ಕೆ ಲಕ್ಷ ಖಡಕ್‌ ರೊಟ್ಟಿ  ಸಿದ್ಧ!

10:04 AM Jan 03, 2019 | Team Udayavani |

ಗದಗ: ವಿದ್ಯಾಕಾಶಿ ಧಾರವಾಡದಲ್ಲಿ ನಗರದಲ್ಲಿ ನ. 4 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ-84ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ ಅವರ ಸ್ವಗ್ರಾಮವಾದ ಶಿಗ್ಲಿಯಲ್ಲಿ ಸುಮಾರು ಒಂದು ಲಕ್ಷ ಖಡಕ್‌ ರೊಟ್ಟಿಗಳು ಸಿದ್ಧಗೊಂಡಿವೆ. ಧಾರವಾಡದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದರಿಂದ ಈ ಭಾಗದ ಸ್ವಸಹಾಯ ಗುಂಪುಗಳಿಗೆ ರೊಟ್ಟಿ ಬಡಿಯುವ ಕಾಯಕ ಸಿಕ್ಕಿದ್ದು, ಆರ್ಥಿಕ ಸದೃಢರನ್ನಾಗಿಸಿದೆ.

Advertisement

ಮೂರು ದಿನಗಳ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳುತ್ತಾರೆ. ಅವರಿಗೆ ಊಟೋಪಚಾರಕ್ಕಾಗಿ ಈಗಾಗಲೇ ಬಹುತೇಕ ಸಿದ್ಧತೆಗಳು ಪೂರ್ಣಗೊಂಡಿವೆ. ಅದರ ಭಾಗವಾಗಿ ಗದಗ ಜಿಲ್ಲೆಯ ಶಿಗ್ಲಿ ಗ್ರಾಮದ ಮಧು ಈಶ್ವರ ಹುಲಗುರು, ಕಮಲವ್ವ ಈರಣ್ಣ ಪುಟ್ಟಪ್ಪನವರ ಹಾಗೂ ಶೋಭಕ್ಕ ಮಲ್ಲೇಪ್ಪ ನೀಗಲಮನಿ ಎಂಬುವವರು ನೇತೃತ್ವದ ಸ್ವಸಹಾಯ ಗುಂಪುಗಳಿಗೆ ಒಟ್ಟು ಒಂದು ಲಕ್ಷ ರೊಟ್ಟಿ ಪೂರೈಸುವಂತೆ ಸೂಚಿಸಲಾಗಿತ್ತು. ಅದರಂತೆ ಕಳೆದ ಒಂದು ತಿಂಗಳಿಂದ ಹಗಲಿರುಳು ಶ್ರಮಿಸುವ ಹತ್ತಾರು ಮಹಿಳೆಯರು ಈಗಾಗಲೇ ಒಂದು ಲಕ್ಷ ಖಡಕ್‌ ರೊಟ್ಟಿಗಳನ್ನು ತಯಾರಿಸಲಾಗಿದ್ದು, ರೊಟ್ಟಿಗಳನ್ನು ಧಾರವಾಡಕ್ಕೆ ಸಾಗಿಸಲಾಗುತ್ತಿದೆ.

ಪ್ರತಿನಿತ್ಯ 5000 ರೊಟ್ಟಿ ತಯಾರಿ: ಶಿಗ್ಲಿ ಗ್ರಾಮದ ಮಧು ಈಶ್ವರ ಹುಲಗುರು, ಕಮಲವ್ವ ಈರಣ್ಣ ಪುಟ್ಟಪ್ಪನವರ ಹಾಗೂ ಶೋಭಕ್ಕ ಮಲ್ಲೇಪ್ಪ ನೀಗಲಮನಿ ಎಂಬುವವರು ಈಗಾಗಲೇ ಜಿಪಂ ಕೈಗಾರಿಕಾ ಸ್ಥಾಯಿ ಸಮಿತಿ ಮೂಲಕ ಸರಕಾರದ ಸಬ್ಸಿಡಿ ದರದಲ್ಲಿ ಸೋಲಾರ್‌ ಆಧಾರಿತ ರೊಟ್ಟಿ ತಯಾರಿಕಾ ಯಂತ್ರ ಖರೀದಿಸಿದ್ದಾರೆ. ಕಳೆದ ಒಂದು ವರ್ಷದಿಂದ ಇದೇ ಯಂತ್ರದಲ್ಲಿ ರೊಟ್ಟಿ ತಯಾರಿಸಿ, ಹುಬ್ಬಳ್ಳಿ-ಧಾರವಾಡ, ಬೆಂಗಳೂರಿಗೆ ಸಾಗಿಸುತ್ತಿದ್ದರು.

ಸ್ವಗ್ರಾಮದವರೇ ಆದ ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ ಅವರ ಅಧ್ಯಕ್ಷತೆಯಲ್ಲಿ ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದರಿಂದ ತಮ್ಮದೂ ಸೇವೆ ಸಲ್ಲಬೇಕು ಎಂಬ ಉದ್ದೇಶದಿಂದ ಆಯೋಜಕರನ್ನು ಸಂಪರ್ಕಿಸಿ, ಅನುಮತಿಯನ್ನೂ ಪಡೆದರು.

ಸಾಹಿತ್ಯ ಸಮ್ಮೇಳನಕ್ಕೆ ಒಂದು ತಿಂಗಳು ಬಾಕಿ ಇರುವಾಗಲೇ, ಅನುಮತಿ ಪಡೆದಿದ್ದರಿಂದ ಹೆಚ್ಚಿನ ಶ್ರಮವಾಗಲಿಲ್ಲ. ಬೆಳಗ್ಗೆ 8 ರಿಂದ ಸಂಜೆ 4 ಗಂಟೆ ವರೆಗೆ 10-15 ಮಹಿಳೆಯರು ಹಾಗೂ ರಾತ್ರಿ 9 ರಿಂದ ಬೆಳಗಿನ ಜಾವ 5 ಗಂಟೆ ವರೆಗೆ 8 ಮಹಿಳೆಯರು ಎರಡು ಪಾಳೆಯಲ್ಲಿ ಹಗಲಿರುಳೂ ಶ್ರಮಿಸಿದ್ದಾರೆ. ಅದರೊಂದಿಗೆ ಎಂಟು ಮಂದಿ ರೊಟ್ಟಿ ತಟ್ಟಿದರೆ, ನಾಲ್ವರು ಸುಡುತ್ತಿದ್ದರು. ಪ್ರತಿ ದಿನಕ್ಕೆ ಸರಾಸರಿ ರೊಟ್ಟಿ ಯಂತ್ರದಿಂದ 3,500 ರೊಟ್ಟಿಗಳು ತಯಾರಾದರೆ, 1200 ರೊಟ್ಟಿಗಳನ್ನು ಮಹಿಳೆಯರು ತಟ್ಟುತ್ತಿದ್ದರು.

Advertisement

ಸಮ್ಮೇಳನದ ಆಯೋಜಕರು ನೀಡಿದ ಗಡುವಿನಂತೆ ಜ. 3ರೊಳಗಾಗಿ ರೊಟ್ಟಿಗಳನ್ನು ಸಮ್ಮೇಳನಕ್ಕೆ ಸಾಗಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇನ್ಮುಂದೆ ಇಂತಹ ಯಾವುದೇ ದೊಡ್ಡ ಆರ್ಡರ್‌ ಪಡೆದರೂ, ನಿಭಾಯಿಸುತ್ತೇವೆ ಎಂಬ ಆತ್ಮವಿಶ್ವಾಸವನ್ನು ಕನ್ನಡ ಸಮ್ಮೇಳನ ಹೆಚ್ಚಿಸಿದೆ ಎನ್ನುತ್ತಾರೆ ಮಹಿಳಾ ಸಂಘದ ಶೋಭಕ್ಕ ಮಲ್ಲೇಪ್ಪ ನೀಗಲಮನಿ.

30 ಸಾವಿರ ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ, 70 ಸಾವಿರ ಜೋಳದ ರೊಟ್ಟಿ, 15 ಸಾವಿರ ಎಳ್ಳು ಹಚ್ಚಿದ ಬಿಳಿ ಜೋಳದ ರೊಟ್ಟಿ ಸೇರಿದಂತೆ ಒಟ್ಟು 1 ಲಕ್ಷ ಖಡಕ್‌ ರೊಟ್ಟಿಗಳನ್ನು ತಯಾರಿಸಿದ್ದೇವೆ. ಒಂದು ರೊಟ್ಟಿಗೆ 5 ರೂ. ನೀಡುವುದಾಗಿ ಸಮ್ಮೇಳನದ ಆಯೋಜಕರು ತಿಳಿಸಿದ್ದರು. ಹೀಗಾಗಿ ಸಬ್ಸಿಡಿ ರೊಟ್ಟಿ ಯಂತ್ರ ಖರೀದಿಸಿದ ಬ್ಯಾಂಕ್‌ ಸಾಲ ಮರಳಿಸಿ, ಖರ್ಚಿ ಎಲ್ಲವನ್ನೂ ತೆಗೆದರೂ ಸುಮಾರು 3 ಲಕ್ಷ ರೂ. ನಮ್ಮ ಸಂಘಗಳಿಗೆ ಉಳಿತಾಯವಾಗುವ ತೃಪ್ತಿಯಿದೆ.
 ಮಧು ಈಶ್ವರ ಹುಲಗುರು, ಶಿಗ್ಲಿ
ಸ್ವಸಹಾಯ ಸಂಘದ ಸದಸ್ಯೆ.

ಸಾಹಿತ್ಯ ಸಮ್ಮೇಳನಕ್ಕೆ ನಮ್ಮ ಜಿಲ್ಲೆಯಿಂದ ಖಡಕ್‌ ರೊಟ್ಟಿಗಳು ಪೂರೈಕೆಯಾಗುತ್ತಿರುವುದು ಸಂತಸ ಸುದ್ದಿ. ಸೋಲಾರ್‌ ಯಂತ್ರದೊಂದಿಗೆ ಶಿಗ್ಲಿ ಗ್ರಾಮದ ಅನೇಕ ಮಹಿಳೆಯರಿಗೆ ರೊಟ್ಟಿ ತಟ್ಟುವ ಕೆಲಸ ಸಿಕ್ಕಿದೆ. ಬರಗಾಲದ ಈ ಸಂದರ್ಭದಲ್ಲಿ ತಲಾ 150-170 ರೂ. ಕೂಲಿ ಸಿಕ್ಕಂತಾಗಿದೆ. ಈ ಹಿಂದೆ ನಾನು ಜಿಪಂ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷನಾಗಿದ್ದಾಗ ಶಿಗ್ಲಿ ಗ್ರಾಮದ ಸಂಘಗಳಿಗೆ ಸೋಲಾರ್‌ ಆಧಾರಿತ ರೊಟ್ಟಿ ಯಂತ್ರ ಮಂಜೂರು ಮಾಡಿದ್ದರಿಂದ ನನಗೂ ಹೆಮ್ಮೆಯಾಗುತ್ತಿದೆ.
 ಎಸ್‌.ಪಿ. ಬಳಿಗಾರ, ಜಿ.ಪಂ. ಅಧ್ಯಕ್ಷ 

ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next