ಗದಗ: ‘ವಿಶ್ವ ಶೌಚಾಲಯ ದಿನಾಚರಣೆ-2018’ರ ಭಾಗವಾಗಿ ‘ಸ್ವಚ್ಛ ಭಾರತ ಮಿಷನ್’ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಟಾಪ್-12 ಜಲ್ಲೆಗಳ ಹೊರತಾಗಿ ಮೂವತ್ತು ವಿಶೇಷ ಜಿಲ್ಲೆಗಳ ಪಟ್ಟಿಗೆ ಗದಗ ಜಿಲ್ಲೆ ಆಯ್ಕೆಯಾಗಿದೆ. ಉತ್ತರ ಕರ್ನಾಟಕದ ಮೊದಲ ಬಯಲು ಶೌಚ ಮುಕ್ತ ಜಿಲ್ಲೆಯೆಂಬ ಹೆಗ್ಗಳಿಕೆ ಪಡೆದಿರುವ ಗದಗ, ಶೌಚಾಲಯ ಅಗತ್ಯತೆ ಬಗ್ಗೆ ಪರಿಣಾಮಕಾರಿಯಾಗಿ ಜನಜಾಗೃತಿ ಮೂಡಿಸಿದ್ದಕ್ಕೆ ಇದೀಗ ರಾಷ್ಟ್ರಮಟ್ಟದ ಪ್ರಶಸ್ತಿಗೆ ಪಾತ್ರವಾಗಿದೆ.
‘ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಯೋಜನೆ ಅನುಷ್ಠಾನಕ್ಕೆ ಬಂದು ಐದು ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಕುಡಿಯುವ ನೀರು ಮುತ್ತು ನೈರ್ಮಲ್ಯ ಮಂತ್ರಾಲಯದಿಂದ 2018ರ ನ. 19ರಿಂದ 10 ದಿನಗಳ ಕಾಲ ದೇಶದ ಎಲ್ಲ ಜಿಲ್ಲೆಗಳಿಗೆ ‘ಸ್ವಚ್ಛ ಭಾರತ ಮಿಷನ್-ವಿಶ್ವ ಶೌಚಾಲಯ ದಿನಾಚರಣೆ-2018’ರ ಸ್ಪರ್ಧೆ ಆಯೋಜಿಸಿತ್ತು. ಗ್ರಾಮೀಣ ಭಾಗದಲ್ಲಿ ಶುಚಿತ್ವ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಜನಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು.
2012ರಲ್ಲಿ ನಡೆದ ಸಮೀಕ್ಷೆಯಂತೆ ಜಿಲ್ಲೆಯ 327 ಗ್ರಾಮಗಳಲ್ಲಿ ನಿರ್ಮಿಸಬೇಕಿದ್ದ ಒಟ್ಟು 1,35,434 ಶೌಚಾಲಯ ಗುರಿ ತಲುಪುವಲ್ಲಿ ಯಶಸ್ವಿಯಾಗಿದ್ದ ಗದಗ ಜಿಲ್ಲೆ, ಉತ್ತರ ಕರ್ನಾಟಕದ ಮೊದಲ ಬಯಲು ಬಹಿರ್ದೆಸೆ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅದಕ್ಕೂ ಮುನ್ನ ನರಗುಂದ ತಾಲೂಕನ್ನು ರಾಜ್ಯದ ಮೊದಲ ಬಯಲು ಶೌಚಮುಕ್ತ ತಾಲೂಕು ಎಂದು 2017ರ ಸೆ. 26ರಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಘೋಷಿಸಿದ್ದರು. ಹೀಗಾಗಿ ಅದೇ ಹುರುಪಿನಲ್ಲಿದ್ದ ಜಿಪಂ ಅಧಿಕಾರಿಗಳು ವಿಶ್ವ ಶೌಚಾಲಯ ದಿನಾಚರಣೆ ಹತ್ತು ಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಲ್ಲರ ಗಮನ ಸೆಳೆದಿದ್ದರು.
ಪ್ರಶಸ್ತಿಗೆ ಆಯ್ಕೆ ವಿಧಾನ: ಗ್ರಾಮ ಮಟ್ಟದಲ್ಲಿ ಧಾರ್ಮಿಕ ಮುಖಂಡರು, ಜನಪ್ರನಿಧಿಗಳಿಂದ ಮನೆ ಮನೆ ಭೇಟಿ, ಮೇಣದ ಬತ್ತಿ ಜಾಥಾ ಮತ್ತು ಸ್ವಚ್ಛತಾ ರಥ, ಸಾಕ್ಷ್ಯಚಿತ್ರ ಪ್ರದರ್ಶನ, ಸಾಧಕರಿಗೆ ಸನ್ಮಾನ, ಗ್ರಾಮಗಳಲ್ಲಿ ಶಾಲಾ ಮಕ್ಕಳಿಂದ ಸೈಕಲ್ ಜಾಥಾ, ಶಾಲಾ ಮಕ್ಕಳಿಗೆ ಬಯಲು ಶೌಚಾಲಯ ಅಪಾಯಗಳು, ಬಯಲು ಮುಕ್ತ ಶೌಚಾಲಯ ಲಾಭಗಳ ಕುರಿತು ಪ್ರಬಂಧ, ಭಾಷಣ, ಮಹಿಳಾ ಸ್ವಸಹಾಯ ಸಂಘಗಳು, ಅಂಗನವಾಡಿ ಮತ್ತು ಆಶಾ ಕಾರ್ಯ ಕರ್ತೆಯರ ಮೂಲಕ ಜಾಗೃತಿ ಸೇರಿದಂತೆ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅವುಗಳ ಆಯ್ದ ಚಿತ್ರ ಮತ್ತು ಮಾಹಿತಿಯೊಂದಿಗೆ ಕೇಂದ್ರ ಸರಕಾರದ ಸ್ವಚ್ಛ ಭಾರತ ಮಿಷನ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಅದರಂತೆ ದೇಶದ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 412 ಜಿಲ್ಲೆಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.
ಈ ಕುರಿತು ಮೌಲ್ಯಮಾಪನ ನಡೆಸಿದ ಸ್ವಚ್ಛ ಭಾರತ ಅಭಿಯಾನದ ಅಧಿಕಾರಿಗಳು, ಅಗ್ರ ಶ್ರೇಯಾಂಕಿತ-12 ಜಿಲ್ಲೆಗಳಲ್ಲಿ ರಾಜ್ಯ ಕೊಡಗು 7ನೇ ಸ್ಥಾನ ಪಡೆದಿದೆ. ಅದರೊಂದಿಗೆ 13ನೇ ಸ್ಥಾನಕ್ಕೆ ಅರ್ಹತೆ ಪಡೆಯಬಹುದಾದಂಥ ಒಟ್ಟು 30 ಜಿಲ್ಲೆಗಳನ್ನು ವಿಶೇಷ ಜಿಲ್ಲೆಗಳೆಂದು ಪರಿಗಣಿಸಲಾಗಿದೆ. ಅದರಲ್ಲಿ ಗದಗ ಜಿಲ್ಲೆ ಆಯ್ಕೆಯಾಗಿರುವುದು ಸಂತಸದ ಸಂಗತಿ.
ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಜಿಲ್ಲೆಗೆ ಸ್ಥಾನ ಲಭಿಸಿರುವುದು ಖುಷಿ ತಂದಿದೆ. ಬಯಲು ಮುಕ್ತ ಶೌಚಾಲಯ ಕುರಿತು ಇನ್ನೂ ಹೆಚ್ಚಿನ ಜನಜಾಗೃತಿ ಮೂಡಿಸಬೇಕಿದೆ.
·ಮಂಜುನಾಥ ಚವ್ಹಾಣ,
ಜಿಪಂ ಸಿಇಒ
•ವಿಶೇಷ ವರದಿ