ಗದಗ: ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೃಷಿ ಇಲಾಖೆ ಹಾಗೂ ದುಂದೂರಿನ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ತಾಲೂಕಿನ ದುಂದೂರು ಗ್ರಾಮದ ಎಫ್.ಎಸ್. ನೀಲಗುಂದ ಅವರ ಹೊಲದಲ್ಲಿ ಹಿಂಗಾರು ಜೋಳ ಹಾಗೂ ಕಡಲೆ ಬೆಳೆಗಳ ಕ್ಷೇತ್ರೋತ್ಸವ ಜರುಗಿತು.
ಸಾನ್ನಿಧ್ಯ ವಹಿಸಿದ್ದ ದುಂದೂರು ಫಕ್ಕೀರ ಸ್ವಾಮೀಜಿ ಮಾತನಾಡಿ, ವಿಜ್ಞಾನಿಗಳು ಅಭಿವೃದ್ಧಿ ಪಡಿಸಿ, ರೈತರ ಕ್ಷೇತ್ರಗಳಲ್ಲಿ ಮಾಡಿ ತೋರಿಸಿದ ನೂತನ ತಳಿ, ತಂತ್ರಜ್ಞಾನ ಬಳಸಬೇಕು. ಇದರಿಂದ ಕಡಿಮೆ ಖರ್ಚು ಮತ್ತು ನೀರಿನ ಮಿತ ಬಳಕೆಯಿಂದ ಹೆಚ್ಚಿನ ಹಿಳುವರಿ ಮತ್ತು ವೈಜ್ಞಾನಿಕ ಕೃಷಿ ಮಾಡಬೇಕು ಎಂದು ಸಲಹೆ ನೀಡಿದರು.
ಡಾ| ಸಿ.ಎಂ. ರಫಿ ಮಾತನಾಡಿ, ಅಧಿಕ ಇಳುವರಿ ಕೊಡುವ ಹಿಂಗಾರಿ ಜೊಳ, ಕಡಲೆ, ಶೇಂಗಾ ಮತ್ತಿತರೆ ಬೆಳೆಗಳ ವಿವಿಧ ತಳಿಗಳ ಬಗ್ಗೆ ಜಿಲ್ಲೆಯಾದ್ಯಂತ ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗುತ್ತಿದೆ. ಕ್ಷೇತ್ರೋತ್ಸವದಲ್ಲಿ ಭಾಗವಹಿಸಿದ ರೈತರು ಹಾಗೂ ಕೃಷಿ ಪರಿಕರ ಡೀಲರ್‌ಗಳು ಇಲ್ಲಿನ ಪ್ರಗತಿ ಬಗ್ಗೆ ಇನ್ನಿತರೆ ರೈತರಿಗೆ ಮಾಹಿತಿ ನೀಡಿ ಜಾಗೃತರನ್ನಾಗಿಸಬೇಕು. ಅದರೊಂದಿಗೆ ಇಡೀ ರೈತ ಸಮುದಾಯ ಅಭಿವೃದ್ಧಿ ಪಥದಲ್ಲಿ ಸಾಗಬೇಕು ಎಂದು ತಿಳಿಸಿದರು.
ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಸಹ ವಿಸ್ತರಣಾ ನಿರ್ದೇಶಕ ಡಾ| ಆರ್.ಎ. ಬೂದಿಹಾಳ ಮಾತನಾಡಿ, ಹೊಸ ಜೋಳದ ತಳಿಯ ಈ ಬೀಜಗಳನ್ನು ರೈತರು ಸಂಗ್ರಹಿಸಿ ಮುಂದಿನ ವರ್ಷ ಬಳಸಬೇಕು. ಇಂತಹ ಕ್ಷೇತ್ರೋತ್ಸವಗಳಲ್ಲಿ ರೈತರು, ವಿಜ್ಞಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳ ಬೇಕು. ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಏನೇ ಸಮಸ್ಯೆ, ಸಂದೇಹಗಳಿದ್ದರೂ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಹಾಯಕ ಕೃಷಿ ಅಧಿಕಾರಿ ಜನಗಾರ ಅವರು ಕೃಷಿ ಇಲಾಖೆ ಸೌಲಭ್ಯಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಡಾ| ಎಸ್.ಡಿ. ಕೊಳ್ಳೋಳಗಿ, ಡಾ| ಎಂ. ಗೋಪಾಲ, ಡಾ| ಅಮರೇಶ ನಾಶಿ, ಡಾ| ಎಸ್.ವಿ. ಹಳಕಟ್ಟಿ, ಶ್ರೀನಿವಾಸ ನೀಲಗುಂದ, ಶಿವಾನಂದ ಜಲರಡ್ಡಿ, ನಾರಾಯಣಗೌಡ ಮೇಟಿ, ವೆಂಕಪ್ಪ ಭಂಡಿ, ಈಶ್ವರಗೌಡ ಹಂಚಿನಾಳ, ಮುತ್ತು ಹಡಪದ, ಫಕ್ಕೀರಗೌಡ ನೀಲಗುಂದ ಹಾಗೂ ಸುಮಾರು 150ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.