Advertisement
ದೀಪಾವಳಿ ಹಬ್ಬದ ಆಚರಣೆಗಾಗಿ ಜಿಲ್ಲಾದ್ಯಂತ ಮಹಿಳೆಯರು ಬೆಳಗ್ಗೆಯಿಂದಲೇ ಸಿದ್ಧತೆಯಲ್ಲಿ ತೊಡಗಿದ್ದರು. ದೀಪಾವಳಿ ಬಲಿಪಾಡ್ಯಮಿ ಅಂಗವಾಗಿ ನಗರದ ವಿವಿಧ ದೇವಸ್ಥಾನಗಳಾದ ಪುಟ್ಟರಾಜ ಕವಿ ಗವಾಯಿಗಳ ಆಶ್ರಮ, ಸಾಯಿಬಾಬಾ ದೇವಸ್ಥಾನ, ರಾಚೋಟೇಶ್ವರ ದೇವಸ್ಥಾನ, ಜೋಡು ಮಾರುತಿ, ಗಂಗಾಪುರ ಪೇಟೆ ದುರ್ಗಾದೇವಿ, ಬೆಟಗೇರಿ ಬನಶಂಕರಿ ದೇವಸ್ಥಾನ ಸೇರಿದಂತೆ ಅವಳಿ ನಗರದ ಪ್ರಮುಖ ದೇವಸ್ಥಾನ ಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ದೀಪಾವಳಿ ಹಬ್ಬದಂದೇ ಹೊಸದಾಗಿ ವಾಹನಗಳ ಖರೀದಿಸಿದವರು ತಮ್ಮ ಇಷ್ಟ ದೇವರ ಸನ್ನಿಧಾನದಲ್ಲಿ ನೂತನ ಪೂಜೆ ನೆರವೇರಿಸಿದರು.
Related Articles
Advertisement
ಪೂಜೆಗೆ ನೆಂಟರಿಷ್ಟರು, ಸ್ನೇಹಿತರು ಹಾಗೂ ಅಕ್ಕ-ಪಕ್ಕದವರನ್ನು ಪೂಜೆಗೆ ಆಹ್ವಾನಿಸಿ ಬಾಳೆ ಹಣ್ಣು, ಎಲೆ ಅಡಿಕೆ ಹಾಗೂ ಉಪಹಾರ ನೀಡಿ ಸತ್ಕರಿಸಿದರು. ಸ್ಥಿತಿವಂತ ಉದ್ಯಮಿಗಳು ಹಬ್ಬದೂಟ ಬಡಿಸಿ ತಾಯಿ ಲಕ್ಷ್ಮೀದೇವಿ ಕೃಪೆಗೆ ಪಾತ್ರರಾದರು. ಇನ್ನುಳಿದಂತೆ ಮನೆಗಳಲ್ಲೂ ಮುತ್ತೈದೆಯರು ತಾಯಿ ಲಕ್ಷೀದೇವಿ, ಗೌವರಮ್ಮ ಪೂಜೆ ನೆರವೇರಿಸಿದರು. ಮನೆ ದೇವರ ಕೋಣಿಯಲ್ಲಿ ಕಳಶ ಹಾಗೂ ಮಡಿ ನೀರು ತುಂಬಿದ್ದ ಕಂಚಿನ ತಂಬಿಗೆಯಲ್ಲಿ ತೆಂಗಿನ ಕಾಯಿಗೆ ಸೀರೆ ಉಡಿಸಿ ವಿವಿಧ ಹೂವುಗಳಿಂದ ಲಕ್ಷ್ಮೀ ದೇವಿ ಪ್ರತಿಮೆ ತಯಾರಿಸಿ ಭಕ್ತಿಯಿಂದ ಪೂಜಿಸಿದರು.