ಗದಗ: ಹರಿದು ಹಂಚಿ ಹೋಗಿದ್ದ ಕನ್ನಡ ನೆಲವನ್ನು ಒಂದುಗೂಡಿಸಲು ಅವಿರತವಾಗಿ ಶ್ರಮಿಸಿದರು ಕನ್ನಡ ಕುಲಪುರೋಹಿತರೆಂದು ಖ್ಯಾತರಾಗಿದ್ದ ಆಲೂರ ವೆಂಕಟರಾಯರು. ಕನ್ನಡಿಗರಲ್ಲಿ ಕೆಚ್ಚನ್ನು ಮೂಡಿಸಿ ಏಕೀಕರಣ ಹೋರಾಟಕ್ಕೆ ಹೊಸ ರೂಪವನ್ನು ನೀಡಿದರು. ಲೇಖನ, ನಾಟಕ, ಕೀರ್ತನಗಳ ಮೂಲಕ ಜಾಗೃತಿ ಮೂಡಿಸಿದರು ಎಂದು ಬರಹಗಾರ ಬಿ.ಎಲ್. ಪತ್ತಾರ ಹೇಳಿದರು.
Advertisement
ನಗರದ ತೋಂಟದ ಶ್ರೀಗಳ ಕನ್ನಡ ಭವನದಲ್ಲಿ ಜಿಲ್ಲಾ ಕಸಾಪ ವತಿಯಿಂದ ಜರುಗಿದ ಸಾಹಿತ್ಯ ಸಿಂಚನ ಮಾಲಿಕೆಯಲ್ಲಿ “ಕನ್ನಡಕ್ಕೆ ಆಲೂರು ವೆಂಕಟರಾಯರ ಕೊಡುಗೆ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಧರ್ಮ, ಸ್ವದೇಶಿ, ಸ್ವಭಾಷೆ ಹಾಗೂ ಸ್ವರಾಜ್ಯ ಇವುಗಳ ಹುಚ್ಚು ಹಿಡಿಸಿಕೊಂಡ ಆಲೂರರು ವಕೀಲಿ ವೃತ್ತಿಯನ್ನು ಬಿಟ್ಟು ಕರ್ನಾಟಕ ಏಕೀಕರಣಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಮುಖವಾಣಿಯಾಗಿದ್ದ ವಾಗ್ಭೂಷಣ ಹಾಗೂ ಜಯಕರ್ನಾಟಕ ಪತ್ರಿಕೆಯ ಮೂಲಕ ಕನ್ನಡಿಗರ ಸ್ವಾಭಿಮಾನ ಬಡಿದೆಬ್ಬಿಸುವಂತಹ ಲೇಖನ ಬರೆದು ಪ್ರಕಟಿಸಿದರು. 1915ರಲ್ಲಿ ಕಸಾಪ ಸ್ಥಾಪಿಸಲು ಕಾರಣಿಭೂತರಾದರು ಎಂದರು. ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಲೂರು ವೆಂಕಟರಾಯರು ಮುಂಬೈದಲ್ಲಿ ವ್ಯಾಸಂಗ ಮಾಡುತ್ತಿರುವ ಸಂದರ್ಭದಲ್ಲಿ ಕನ್ನಡ ನಾಡು ನುಡಿಗೆ ಪಣತೊಟ್ಟರು. ನಂತರ ಕನ್ನಡಿಗರಿಗೆ ಇತಿಹಾಸದ ಪ್ರಜ್ಞೆಯನ್ನು ತಮ್ಮ ಕೃತಿ ಮತ್ತು ಲೇಖನಗಳ ಮೂಲಕ ಮಾಡಿಕೊಟ್ಟು ಹೋರಾಟಕ್ಕೆ ಮಾನಸಿಕ ಸಿದ್ಧತೆ ಮಾಡಿದರು. ಭಾಷಾಭಿಮಾನ ಮತ್ತು ದೇಶಾಭಿಮಾನವನ್ನು ಜೊತೆಯಾಗಿ ಮುನ್ನಡೆಸಿದರು ಎಂದರು.
Related Articles
Advertisement