Advertisement

ಗದಗ: ಬಿಪಿಸಿಎಲ್‌ ಕಾಮಗಾರಿ ಬಗ್ಗೆ ಹಲವು ದೂರು

03:53 PM Jul 18, 2024 | Team Udayavani |

ಉದಯವಾಣಿ ಸಮಾಚಾರ
ಗದಗ: ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಪೈಪ್‌ಲೈನ್‌ ಮೂಲಕ ಮನೆ-ಮನೆಗಳಿಗೆ ಅಡುಗೆ ಅನಿಲ ಪೂರೈಕೆ ಯೋಜನೆಯ ಕಾಮಗಾರಿಯನ್ನು ಬಿಪಿಸಿಎಲ್‌ ಆರಂಭಿಸುವ ಮುನ್ನ ಕೇಂದ್ರ ಸರಕಾರದ ಯೋಜನೆಯನ್ನು ಆರಂಭಿಸುವ ಕುರಿತು ಜನಪ್ರತಿನಿಧಿಗಳ ಗಮನಕ್ಕೆ ಏಕೆ ತರಲಿಲ್ಲ.

Advertisement

ಸ್ವತಃ ತಮಗೂ ಈ ಬಗ್ಗೆ ಮಾಹಿತಿಯೇ ಇಲ್ಲ. ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ನಗರದ ರಸ್ತೆಗಳನ್ನು ಪುನರ್‌ ನಿರ್ಮಾಣದ  ಜವಾಬ್ದಾರಿ ಯಾರದು? ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಪ್ರಶ್ನಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೋಟ್ಯಾಂತರ ರೂ. ಮೌಲ್ಯದ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯೊಂದು ನಗರಸಭೆ ಅಧ್ಯಕ್ಷರು, ಸದಸ್ಯರು, ಅಷ್ಟೇ ಏಕೆ, ಗದಗ ಶಾಸಕರು, ವಿಧಾನಪರಿಷತ್‌ ಸದಸ್ಯರು, ಲೋಕಸಭೆಯ ಸದಸ್ಯರ ಗಮನಕ್ಕೆ ತಾರದೇ ಗದಗ-ಬೆಟಗೇರಿ ನಗರಸಭೆಯ ಪ್ರಭಾರ ಪೌರಾಯುಕ್ತರೊಬ್ಬರು ಕಾಮಗಾರಿಗೆ ಅನುಮತಿ ನೀಡಿದ್ದು, ಪೌರಾಡಳಿತ ಇಲಾಖೆ ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಿದೆ ಎಂದು ವಿಧಾನಪರಿಷತ್‌ ಕಲಾಪದಲ್ಲಿ ಪ್ರಶ್ನಿಸಿದ್ದಾರೆ.

ಕ್ರಮಕ್ಕೆ ಒತ್ತಾಯ: ಭಾರತ ಪೆಟ್ರೋಲಿಯಂ  ಕಾರ್ಪೋರೇಶನ್‌ ಲಿಮಿಟೆಡ್‌ ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಪೈಪ್‌ಲೈನ್‌ ಮೂಲಕ ಮನೆ-ಮನೆಗಳಿಗೆ ಅಡುಗೆ ಅನಿಲ ಪೂರೈಕೆ ಕಾಮಗಾರಿಯನ್ನು ಆರಂಭಿಸಿದ್ದು, ನಗರ ಪ್ರದೇಶದಲ್ಲಿ ಪೈಪ್‌ಲೈನ್‌ ಅಳವಡಿಕೆಗೆ ತೆಗೆದ ತೆಗ್ಗುಗಳು, ರಸ್ತೆ ಹಾನಿಯಿಂದಾಗಿ ಸಾರ್ವಜನಿಕರು ತೀವ್ರ ತೊಂದರೆ ಎದುರಿಸುವಂತಾಗಿದೆ. ಸಾರ್ವಜನಿಕರು ತಮಗೆ ದೂರು ನೀಡುತ್ತಿದ್ದಾರೆ.

ಗದಗ-ಬೆಟಗೇರಿ ನಗರಸಭೆಯ ಅಂದಿನ ಪ್ರಭಾರ ಪೌರಾಯುಕ್ತರು ಯೋಜನೆ ಕುರಿತು ನಗರಸಭೆ ಆಡಳಿತ ಮಂಡಳಿ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಾರದೇ ದಿನಾಂಕ 7-11-2023ರಂದು ಯೋಜನೆಯ ಅನುಷ್ಠಾನಕ್ಕೆ ಅನುಮತಿ ಕೊಟ್ಟಿದ್ದಾರೆ. ಭಾರತ ಪೆಟ್ರೋಲಿಯಂ ಕಾರ್ಪೋರೇಶನ್‌ ಲಿಮಿಟೆಡ್‌ ಅವರಿಗೆ ಒಟ್ಟು 216 ಕಿಮೀ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿಯಲ್ಲಿ ಮೊದಲ ಹಂತದಲ್ಲಿ 61.32 ಕಿಮೀ. ಪೈಪ್‌ಲೈನ್‌ ಅಳವಡಿಕೆ ಕಾಮಗಾರಿಯನ್ನು ನಡೆಸಲು ಒಪ್ಪಿಗೆ ನೀಡಿದ್ದಾರೆ. ಅದು ನಗರದ ಯಾವ ಭಾಗದಲ್ಲಿ ಎಂಬುದನ್ನೂ ವಿವರಿಸಿಲ್ಲ ಎಂದು ತಿಳಿಸಿದ್ದಾರೆ.

Advertisement

ನಗರಸಭೆ ಪ್ರಭಾರ ಪೌರಾಯುಕ್ತರ ವಿರುದ್ಧಸರಕಾರ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಅವರ ಪ್ರಶ್ನೆಗೆ ಪೌರಾಡಳಿತ ಹಾಗೂ ಹಜ್‌ ವ ರಹೀಂಖಾನ್‌ ಮಾತನಾಡಿ, ಶೀಘ್ರದಲ್ಲಿಯೇ ಪೌರಾಡಳಿತ ಇಲಾಖೆ ಹಾಗೂ ಗದಗ-ಬೆಟಗೇರಿ ನಗರಸಭೆ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು. ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಇಂಜಿನಿಯರ್ ಸೇರಿದಂತೆ ಆ ಭಾಗದ ಜನಪ್ರತಿನಿಧಿಗಳ ಸಭೆ ನಡೆಸಿ ಯೋಜನೆ ವಿವರಗಳನ್ನು ಹಾಗೂ ಯೋಜನೆ ಅನುಷ್ಠಾನ ಕುರಿತು ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next