Advertisement

Udupi:ಚೌತಿಗೆ ಸ್ವತ್ಛತೆ ಸಂಕಲ್ಪ;ಉದಯವಾಣಿ, ನಗರಸಭೆ, ಕಾಪು ಪುರಸಭೆ,ಸಾಲಿಗ್ರಾಮ ಪ.ಪಂ.ಅಭಿಯಾನ

04:22 PM Sep 04, 2024 | Team Udayavani |

ಉಡುಪಿ: ಗಣೇಶನ ಆರಾಧನೆಗೆ ಎಲ್ಲೆಡೆ ಸಕಲ ಸಿದ್ಧತೆ ನಡೆಯುತ್ತಿದ್ದು, ಮನೆ, ಮನೆಗಳಲ್ಲಿ ಗೌರಿ ಗಣೇಶನ ಆರಾಧನೆ ಸಂಭ್ರಮ ಮೇಳೈಸಲಿದೆ. ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸಲು ಎಲ್ಲೆಡೆ ತಯಾರಿ ನಡೆಯುತ್ತಿದೆ. ಗಣಪತಿ ಹಬ್ಬವನ್ನು ಆಚರಿಸುವಾಗ ಭಕ್ತಿಯ ಜತೆಗೆ ಸ್ವತ್ಛತೆಗೂ ಸಂಕಲ್ಪ ಮಾಡಬೇಕಿದೆ.

Advertisement

ಇತ್ತೀಚೆಗೆ ಸ್ವತ್ಛ ನಾಗರಪಂಚಮಿ ಅಭಿಯಾನ ಯಶಸ್ವಿಯಾಗಲು ಜನರು ಸಂಪೂರ್ಣ ಸಹಕಾರ ನೀಡಿದ್ದರು. ಅದೇ ಮಾದರಿಯಲ್ಲಿ ಸ್ವತ್ಛತೆ ಉದ್ದೇಶದಿಂದ ಗಣೇಶ ಚತುರ್ಥಿ ಅಭಿಯಾನವನ್ನು ಕೈಗೊಳ್ಳಲಾಗಿದೆ.

ಡೆಂಗ್ಯೂ, ಮಲೇರಿಯಾ, ಇನ್ನಿತರ ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಬ್ಬಹರಿದಿನಗಳ ವೇಳೆ ನಮ್ಮ ಪರಿಸರದಲ್ಲಿ ಸ್ವತ್ಛತೆ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಮುಖ ಸಾರ್ವಜನಿಕ ಗಣೇಶೋತ್ಸವ ಕೇಂದ್ರಗಳಲ್ಲಿ ಹಸಿ ಮತ್ತು ಒಣ ತ್ಯಾಜ್ಯ ಸಂಗ್ರಹಕ್ಕೆ ಸ್ಥಳೀಯಾಡಳಿತ ಸಂಸ್ಥೆ ವತಿಯಿಂದಲೇ ಸೂಕ್ತ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಭಕ್ತರು ಪೂಜೆ ಸಲ್ಲಿಸಲು ಬರುವಾಗ ಸಾಧ್ಯವಾದಷ್ಟು ಪ್ಲಾಸ್ಟಿಕ್‌ ತೊಟ್ಟೆಗಳನ್ನು ತರದೆ, ಚೀಲ, ಪೇಪರುಗಳಲ್ಲಿ ಅಗತ್ಯ ವಸ್ತುಗಳನ್ನು ಕೊಂಡೊಯ್ಯಬಹುದು.

ಈಗಾಗಲೆ ಅನುಮತಿ ಕೋರಿ ಕೆಲವು ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ನಗರಸಭೆಗೆ ಅರ್ಜಿ ಸಲ್ಲಿಸಿವೆ. ಕೆಲವು ಗಣೇಶೋತ್ಸವ ಕೇಂದ್ರಗಳನ್ನು ನಗರಸಭೆಯಿಂದಲೇ ಗುರುತಿಸಲಾಗುತ್ತಿದ್ದು, ಉಳಿದವರು ಅಭಿಯಾನಕ್ಕಾಗಿ ಸಂಪರ್ಕಿಸಿ ನೋಂದಾಯಿಸಬಹುದು ಎಂದು ನಗರಸಭೆ ಪರಿಸರ ಎಂಜಿನಿಯರ್‌ ಸ್ನೇಹಾ ಮಾಹಿತಿ ತಿಳಿಸಿದ್ದಾರೆ. ಕಾಪು ಪುರಸಭೆ ಮತ್ತು ಸಾಲಿಗ್ರಾಮ ಪ.ಪಂ. ಆಡಳಿತಗಳೂ ಈ ಅಭಿಯಾನಕ್ಕೆ ಕೈಜೋಡಿಸಿವೆ.

ಜನರ ಸಂಪೂರ್ಣ ಸಹಕಾರದ ಅಗತ್ಯ
ನಗರಸಭೆ-ಉದಯವಾಣಿ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಸ್ವತ್ಛತಾ ಅಭಿಯಾನಕ್ಕೆ ಜನರ ಸಂಪೂರ್ಣ ಸಹಕಾರದ ಅಗತ್ಯವಿದೆ. ಸಾರ್ವಜನಿಕ ಗಣೇಶೋತ್ವವ ಸಮಿತಿ ಆಚರಣೆ ಕೇಂದ್ರಗಳಿಗೆ ನಗರಸಭೆ ವತಿಯಿಂದ ಡಸ್ಟ್ ಬಿನ್‌, ಚೀಲಗಳನ್ನು ವ್ಯವಸ್ಥೆ ಮಾಡಿಕೊಟ್ಟು ವ್ಯವಸ್ಥಿತವಾಗಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತದೆ. ಅನ್ನ ಸಂತರ್ಪಣೆ ದಿನ ಎಲ್ಲಿಯೂ ತ್ಯಾಜ್ಯ ಎಸೆಯಬಾರದು. ಆಹಾರ ತ್ಯಾಜ್ಯ ವಿಲೇವಾರಿಗೆ ನಗರಸಭೆ ವತಿಯಿಂದಲೇ ವಾಹನ ವ್ಯವಸ್ಥೆ ಮಾಡಲಾಗುತ್ತದೆ. ಈ ಕುರಿತು ನಗರಸಭೆ ಸಿಬಂದಿಗೆ ನಿರ್ದೇಶನ ನೀಡಲಾಗಿದೆ.
– ಪ್ರಭಾಕರ ಪೂಜಾರಿ, ಅಧ್ಯಕ್ಷರು, ರಾಯಪ್ಪ, ಪೌರಾಯುಕ್ತರು, ಉಡುಪಿ ನಗರಸಭೆ

Advertisement

ಜನಜಾಗೃತಿಯನ್ನೂ ರೂಪಿಸಲಿದ್ದೇವೆ
ನಾಗರಪಂಚಮಿ ಹಬ್ಬದಂದು ಸ್ವತ್ಛತೆಗೆ ಆದ್ಯತೆ ನೀಡಿದಂತೆ ಗಣೇಶೋತ್ಸವ ಸಂದರ್ಭದಲ್ಲಿಯೂ ಸ್ವತ್ಛ ಪುರಸಭೆಯಾಗಿ ರೂಪುಗೊಳ್ಳಲು ಆದ್ಯತೆ ನೀಡುತ್ತೇವೆ. ಸಮಿತಿಗಳು ಸಂಪರ್ಕಿಸಿದಲ್ಲಿ ಹಸಿ ಕಸ, ಒಣ ಕಸ ವಿಲೇವಾರಿಗೆ ಉಪಕರಣಗಳನ್ನು ಪೂರೈಸುವುದರ ಜತೆ ಜನಜಾಗೃತಿಯನ್ನೂ ರೂಪಿಸಲಿದ್ದೇವೆ.
– ಹರಿಣಾಕ್ಷಿ ದೇವಾಡಿಗ, ಅಧ್ಯಕ್ಷರು, ನಾಗರಾಜ್‌ ಸಿ., ಮುಖ್ಯಾಧಿಕಾರಿಗಳು, ಕಾಪು ಪುರಸಭೆ

ಪ.ಪಂ. ಕಚೇರಿಯನ್ನು ಸಂಪರ್ಕಿಸಬಹುದು
ಸಾಲಿಗ್ರಾಮ ಪಟ್ಟಣ ಪಂಚಾಯತ್‌ ಕೆಲವು ವರ್ಷಗಳಿಂದ ತ್ಯಾಜ್ಯ ವಿಲೇವಾರಿಗೆ ವಿಶೇಷ ಗಮನ ಕೊಡುತ್ತಿದೆ. ಈ ವರ್ಷವೂ ಗಣೇಶೋತ್ಸವ ಸಮಿತಿಗಳಿಗೆ ಡಸ್ಟ್‌ಬಿನ್‌, ಚೀಲಗಳನ್ನು ಪೂರೈಸುತ್ತೇವೆ. ಈ ಕುರಿತು ಸಮಿತಿಗಳು ಪ.ಪಂ. ಕಚೇರಿಯನ್ನು ಸಂಪರ್ಕಿಸಬಹುದು.
– ಸುಕನ್ಯಾ ಶೆಟ್ಟಿ, ಅಧ್ಯಕ್ಷರು, ಶಿವ ನಾಯ್ಕ, ಮುಖ್ಯಾಧಿಕಾರಿಗಳು, ಸಾಲಿಗ್ರಾಮ ಪ.ಪಂ.

Advertisement

Udayavani is now on Telegram. Click here to join our channel and stay updated with the latest news.