Advertisement

ನಾಳೆಯಿಂದ ಗದಗ ಉತ್ಸವ ಕೈಗಾರಿಕಾ ವಸ್ತು ಪ್ರದರ್ಶನ

04:04 PM Sep 19, 2018 | Team Udayavani |

ಗದಗ: ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಪಂ ಹಾಗೂ ನಬಾರ್ಡ್‌ ಆಶ್ರಯದಲ್ಲಿ ಸೆ.20ರಿಂದ 24 ರವರೆಗೆ ಐದು ದಿನಗಳ ಕಾಲ ನಗರದಲ್ಲಿ ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ‘ಗದಗ ಉತ್ಸವ-2018’ ಆಯೋಜಿಸಲಾಗಿದೆ ಎಂದು ಕೈಗಾರಿಕಾ ವಸ್ತು ಪ್ರದರ್ಶನ ಸಮಿತಿ ಚೇರಮನ್‌ ಆನಂದ ಎಲ್‌. ಪೊತ್ನೀಸ್‌ ಹಾಗೂ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಬಾಬಣ್ಣ ಶಾಬಾದಿಮಠ ತಿಳಿಸಿದರು.

Advertisement

ನಗರದಲ್ಲಿ ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಐದು ದಿನಗಳ ಕಾಲ ಕೈಗಾರಿಕಾ ವಸ್ತು ಪ್ರದರ್ಶನದ ‘ಗದಗ ಉತ್ಸವ’ ಆಯೋಜಿಸಲಾಗಿದೆ. ಸೆ.20ರಂದು ಸಂಜೆ 5.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಮಹೇಶ ಉದ್ಘಾಟಿಸುವರು. ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಬಾಬಣ್ಣ ಶಾಬಾದಿಮಠ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ಶಾಸಕರು, ಸಂಸದರು, ಚುನಾಯಿತ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.

100 ಮಳಿಗೆ ನಿರ್ಮಾಣ: ಗುಡಿ ಹಾಗೂ ಮಧ್ಯಮ ಕೈಗಾರಿಕೆ ಉತ್ಪನ್ನಗಳಿಗೆ ವೇದಿಕೆ ಕಲ್ಪಿಸುವುದು ಹಾಗೂ ಉತ್ಪನ್ನಗಳನ್ನು ಜನರಿಗೆ ಪರಿಚಯಿಸುವುದು ‘ಗದಗ ಉತ್ಸವ’ದ ಮೂಲ ಉದ್ದೇಶವಾಗಿದೆ. ಈ ಉತ್ಸವದಲ್ಲ 100 ಮಳಿಗೆ ನಿರ್ಮಿಸಲಾಗಿದ್ದು, ಶೇ.50ರಷ್ಟು ಮಳಿಗೆಗಳನ್ನು ಗುಡಿ ಕೈಗಾರಿಕೆ, ಜಿಲ್ಲಾ ಕೈಗಾರಿಕಾ ಕೇಂದ್ರ, ನಬಾರ್ಡ್‌ ಹಾಗೂ ಜಿಪಂ ಮಳಿಗೆಗಳಿಗೆ ಉಚಿತವಾಗಿ ನೀಡಲಾಗುವುದು. ಇನ್ನುಳಿದವುಗಳನ್ನು ಇತರೆ ಕೈಗಾರಿಕೆ ಉತ್ಪನ್ನಗಳಿಗೆ ಬಾಡಿಗೆ ದರದಲ್ಲಿ ನೀಡಲಾಗುವುದು.

ಉತ್ಸವದಲ್ಲಿ ರಾಮನಗರ, ಮೈಸೂರು, ಚೆನ್ನಪಟ್ಟಣ, ಚಿಕ್ಕಮಗಳೂರು ಸೇರಿ ಹಲವು ಜಿಲ್ಲೆಗಳ ಉತ್ಪನ್ನಗಳು ಪ್ರದರ್ಶನ ಹಾಗೂ ಮಾರಾಟಕ್ಕೆ ಸಿಗಲಿದ್ದು, ಸುಮಾರು 25 ಸಾವಿರ ಜನ ಬರುವ ನಿರೀಕ್ಷೆ ಇದೆ. ಇದರೊಂದಿಗೆ ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿದಿನ ಆಹ್ವಾನಿತ ಕಲಾವಿದರ ಜೊತೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

ಶ್ರೇಷ್ಠ ಉದ್ಯಮಿ, ವರ್ತಕ ಪ್ರಶಸ್ತಿ: ಸೆ.23ರಂದು ಸಂಜೆ 5:30ಕ್ಕೆ ನಡೆಯುವ ಸಮಾರಂಭದಲ್ಲಿ ಸೂಡಿ-ಗದಗ ಜುಕ್ತಿಹಿರೇಮಠದ ಡಾ| ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸ್ಥಳೀಯ ಉದ್ಯಮಿ ವಿಜಯಕುಮಾರ ಫ. ಗಡ್ಡಿ ಅವರಿಗೆ ಶ್ರೇಷ್ಠ ಉದ್ಯಮಿ, ಸಿದ್ದರಾಮಪ್ಪ ಉಮಚಗಿ (ಗದಗ), ಬಸಪ್ಪ ಶಂಕ್ರಪ್ಪ ಪಲ್ಲೇದ (ಗಜೇಂದ್ರಗಡ), ಮಂಜುನಾಥ ವೆಂಕಟೇಶ ಆನೆಗುಂದಿ (ನರಗುಂದ), ಅಂದಪ್ಪ ಬಸವಣ್ಣೆಪ್ಪ ಗೋಡಿ (ಮುಂಡರಗಿ) ಹಾಗೂ ಸುಲೇಮಾನಸಾಬ ನವಾಸಾಬ ಕಣಕೆ (ಲಕ್ಷ್ಮೇಶ್ವರ) ಅವರಿಗೆ ಶ್ರೇಷ್ಠ ವರ್ತಕ ಪ್ರಶಸ್ತಿ ಪ್ರದಾನ ಮಾಡಲಾಗುವುದು.

Advertisement

ಸೆ.24ರಂದು 5:30ಕ್ಕೆ ಶ್ರೇಷ್ಠ ಮಳಿಗೆ ಪ್ರಶಸ್ತಿ ವಿತರಣೆ ಹಾಗೂ ಸಮಾರೋಪ ನಡೆಯಲಿದೆ. ಚೇಂಬರ್‌ ಅಧ್ಯಕ್ಷ ಬಾಬಣ್ಣ ಶಾಬಾದಿಮಠ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಧಿಕಾರಿ ಎಂ.ಜಿ. ಹಿರೇಮಠ, ಜಿಪಂ ಸಿಇಒ ಮಂಜುನಾಥ ಚವ್ಹಾಣ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ಸಂತೋಷಬಾಬು, ಡಿಐಸಿ ಜಂಟಿ ನಿರ್ದೇಶಕ ಟಿ. ದಿನೇಶ, ಖಾಗ್ರಾ ಉಪನಿರ್ದೇಶಕ ಆರ್‌.ಜಿ. ಕುಲಕರ್ಣಿ, ನಬಾರ್ಡ್‌ನ ರಾಮನ್‌ ಜಗದೀಶನ್‌ ಉಪಸ್ಥಿತರಿರುವರು ಎಂದರು.

ಈ ಉತ್ಸವಕ್ಕೆ 15 ಲಕ್ಷ ರೂ. ವೆಚ್ಚವಾಗಲಿದ್ದು, ಜಿಲ್ಲಾ ಕೈಗಾರಿಕಾ ಕೇಂದ್ರ 5 ಲಕ್ಷ ರೂ., ಜಿಪಂ 2.5 ಲಕ್ಷ ರೂ. ಹಾಗೂ ನಬಾರ್ಡ್‌ 50 ಸಾವಿರ ರೂ. ಅನುದಾನ ದೊರೆಯಲಿದೆ. ಇನ್ನುಳಿದಂತೆ ಇತರೆ ಮಳಿಗೆಗಳ ಬಾಡಿಗೆಯಿಂದ ಹಣ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು. ಶರಣಪ್ಪ ಕುರಡಗಿ, ಶಕ ಟಿ. ದಿನೇಶ, ಎಂ.ಬಿ. ಸುರಕೋಡ, ವೀರಣ್ಣ ಬೇವಿನಮರದ, ಆರ್‌.ಬಿ. ದಾನಪ್ಪಗೌಡ್ರ, ಜಯದೇವ ಮೆಣಸಗಿ, ಟಿ.ಎಸ್‌. ಪಾಟೀಲ, ಮಧುಸೂಧನ ಪುಣೇಕರ, ಶರಣಬಸಪ್ಪ ಗುಡಿಮನಿ, ಬಸಣ್ಣ ಮಲ್ಲಾಡದ ಸುದ್ದಿಗೋಷ್ಠಿಯಲ್ಲಿದ್ದರು.

ಸ್ಮರಣ ಸಂಚಿಕೆ
ಕೈಗಾರಿಕಾ ವಸ್ತು ಪ್ರದರ್ಶನದ ‘ಗದಗ ಉತ್ಸವ-2018’ ಅಂಗವಾಗಿ ಈ ಬಾರಿಯೂ ಸ್ಮರಣ ಸಂಚಿಕೆ ಮತ್ತು ಜಿಲ್ಲೆಯ ಉದ್ದಿಮೆದಾರರ ಮಾಹಿತಿಯುಳ್ಳ ಇಂಡಸ್ಟ್ರಿಯಲ್‌ ಡೈರಿ ಬಿಡುಗಡೆ ಮಾಡಲಾಗುವುದು. ಈ ಮೂಲಕ ಜಿಲ್ಲೆಯ ಮಾಹಿತಿ ಹಂಚಿಕೆಗೆ ಇದು ಪೂರಕವಾಗಲಿದೆ.
. ಬಾಬಣ್ಣ ಶಾಬಾದಿಮಠ,
ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next