ಶಿರಹಟ್ಟಿ: ಪಟ್ಟಣದಲ್ಲಿ ದಸರಾ ಆಚರಣೆ ಅಂಗವಾಗಿ ಬೃಹತ್ ಮೆರವಣಿಗೆ ನಡೆಸಲಾಯಿತು.ಪಟ್ಟಣದಲ್ಲಿ ಶ್ರೀ ಮಠದಿಂದ ಶ್ರೀಗಳು ಮೆರವಣಿಗೆ ಮೂಲಕ ಗದಗ ರೋಡ್‌ಗೆ ಹೊಂದಿರುವ ಕೆಳಗೇರಿಯಲ್ಲಿರುವ ಗರಿಬನ್‌ನವಾಜ ದರ್ಗಾಕ್ಕೆ ಬಂದು ಜ.ಫ. ಸಿದ್ದರಾಮ ಸ್ವಾಮಿಗಳು ಬನ್ನಿ ಮಂಟಪಕ್ಕೆ ಬಂದು ಹಿಂದೂ-ಮುಸ್ಲಿಂ ಸಾಂಪ್ರದಾಯಿಕ ಆಚರಣೆ ಆಚರಿಸಿ, ಬನ್ನಿ ಮುಡಿಯುವುದರೊಂದಿಗೆ ಬನ್ನಿ ವಿನಿಮಯಕ್ಕೆ ಚಾಲನೆ ನೀಡಿದರು.
ಈ ಪದ್ಧತಿ ಹಿಂದಿನಿಂದ ಬಂದ ಸಾಂಪ್ರದಾಯಿಕ ಆಚರಣೆಯ ವೈಶಿಷ್ಟ್ಯವಾಗಿದೆ. ಶ್ರೀಗಳನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಮೆರವಣಿಗೆಯಲ್ಲಿ ಆನೆಯ ಸ್ವಾಗತ, ನಗಾರಿಯ ನಿನಾದ, ಜಾಂಜ್ ಮೇಳ, ಡೊಳ್ಳು ಕುಣಿತ, ಹೆಜ್ಜೆ ಮೇಳ, ವಾದ್ಯ ಮೇಳ ಜತೆಗೆ ಸಾರ್ವಜನಿಕರು ಸಂಭ್ರಮಿಸುವುದಕ್ಕಾಗಿ ವಿಧ ವಿಧವಾದ ಪಟಾಕಿ ಸಿಡಿಸುವುದು. ಮುಂತಾದವುಗಳ ಮಧ್ಯೆ ಫಕ್ಕೀರ ಸಿದ್ದರಾಮ ಸ್ವಾಮಿಗಳನ್ನು ಮೆರವಣಿಗೆಯಲ್ಲಿ ಕರೆ ತರಲಾಯಿತು.
ಹಬ್ಬದ ವೈಶಿಷ್ಟ್ಯತೆ ಎಂದರೆ ಪಟ್ಟಣದಲ್ಲಿ ಶ್ರೀಗಳು ಬನ್ನಿ ಮುಡಿಯುವವರೆಗೂ ಯಾರೊಬ್ಬರೂ ಬನ್ನಿ ವಿನಿಮಯ ಮಾಡಿಕೊಳ್ಳುವುದಿಲ್ಲ. ಈ ಸಂಪ್ರದಾಯಕ್ಕೆ ಅನೇಕ ದಶಕಗಳ ಇತಿಹಾಸವೇ ಇದೆ. ಜ.ಫ.ಸಿದ್ದರಾಮ ಸ್ವಾಮೀಜಿ ಮಾತನಾಡಿ, ನಾಡಿನಲ್ಲಿ ಸಂಪೂರ್ಣವಾಗಿ ಮುಂಗಾರು ಕೈ ಕೊಟ್ಟು ರೈತರನ್ನು ಸಂಕಷ್ಟಕ್ಕೆ ನೂಕಿದೆ. ಹಿಂಗಾರು ಮಳೆ ತುಸು ಆಶಾ ಭಾವನೆ ಮೂಡಿಸಿದೆ. ನಾಡಿನಾದ್ಯಂತ ಮಳೆ ಬರುತ್ತಿದ್ದು, ಹಿಂಗಾರು ಬೆಳೆ ಬೆಳೆಯಲು ಅನುಕೂಲವಾಗಿದೆ. ರೈತನೇ ದೇಶದ ಬೆನ್ನೆಲೆಬು ಮತ್ತು ದೇಶದ ಶಕ್ತಿ. ರೈತರು ಸುಖವಾಗಿದ್ದರೆ ದೇಶ ಸುಖಿಯಾಗಿರುತ್ತದೆ. ಇಂತಹ ರೈತರಿಗೆ ದಸರಾ ಹಬ್ಬ ಮಳೆ ಬರುವ ಮೂಲಕ ಸಂತೋಷವನ್ನುಂಟು ಮಾಡಿದೆ. ದೇಶದಲ್ಲಿ ಚೆನ್ನಾಗಿ ಮಳೆ ಆಗಿ ಉತ್ತಮ ಫಸಲು ಬೆಳೆಯುವಂತಾಗಲಿ ಎಂದರು.
ಶ್ರೀಗಳು ಗರಿಬನ್ ನವಾಜ್ ದರ್ಗಾದ ಬಳಿ ಬನ್ನಿ ಮುಡಿದ ನಂತರ ಪಟ್ಟಣದಲ್ಲಿ ಪ್ರತಿಯೊಬ್ಬರೂ ಬನ್ನಿ ವಿನಿಮಯ ಮಾಡಿಕೊಂಡು ಬಂಗಾರದಂತೆ ಬಾಳ್ಳೋಣ ಎಂಬ ಶುಭಾಶಯಗಳನ್ನು ಕೋರುತ್ತಾರೆ. ದರ್ಗಾದಿಂದ ಹೊರಟ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಮಠಕ್ಕೆ ಬಂದು ತಲುಪಿತು. ಸಿ.ಸಿ.ನೂರಶೆಟ್ಟರ, ಶಿವರಾಯಗೌಡ (ಅಜ್ಜು) ಪಾಟೀಲ, ಬುಡನಶ್ಯಾ ಮಕಾನದಾರ, ಮುತ್ತಣ್ಣ ಮಜ್ಜಗಿ, ದೀಪು ಕಪ್ಪತ್ತನವರ, ಉಮೇಶ ತೇಲಿ, ಜಗದೀಶ ತೇಲಿ, ಬಸವಣ್ಣೆಪ್ಪ ತುಳಿ, ಬಿ.ಎಸ್ .ಹಿರೇಮಠ, ಪರಮೇಶ ಪರಬ ಇದ್ದರು.
ಶಿರಹಟ್ಟಿ: ಪಟ್ಟಣದ ಮರಾಠಾ ಗಲ್ಲಿಯ ಅಂಬಾ ಭವಾನಿ ದೇವಸ್ಥಾನದಲ್ಲಿ ದಸರಾ ನಿಮಿತ್ತ 10 ದಿನಗಳ ಕಾಲ ಪುರಾಣ ಕಾರ್ಯಕ್ರಮ ಏರ್ಪಡಿಲಾಗಿತ್ತು. ಕಾರಣ ಇಂದು ವಿಜಯದಶಮಿ ದಿನ ಪುರಾಣ ಮಂಗಲವಾಗಿದ್ದರಿಂದ ಶ್ರೀದೇವಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಪಟ್ಟಣದ ಗೌಡರಾದ ವೈ.ಎಸ್. ಪಾಟೀಲ ಮನೆಯಲ್ಲಿನ ಬನ್ನಿಗಿಡಕ್ಕೆ ಪೂಜೆ ಸಲ್ಲಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭಕ್ತರಿಗೆ ದರ್ಶನ ಭಾಗ್ಯ ಮತ್ತು ಬನ್ನಿ ವಿನಿಮಯ ಮಾಡಿಕೊಳ್ಳಲಾಯಿತು. ಕೆ.ಎ.ಬಳಿಗೇರ, ಪರಮೇಶ ಪರಬ, ಪವಾರ ಸರ್, ಮಹೇಶ ಪರಬತ್, ರಾಜಣ್ಣ ಕದಂ, ಬಸವರಾಜ ತೋಡೇಕರ, ರಾಮಚಂದ್ರ ಪರಬತ್, ನಾಗರಾಜ ಲಕ್ಕುಂಡಿ, ಪ್ರಭಾಕರ ಗಾಯಕವಾಡ, ವಿಠಲ್ ಬಿಡವೇ, ತಾನಾಜಿ ಪರಬತ್, ಅನಿಲ ಮಾನೆ, ಸಂತೋಷ ತೋಡೆಕರ ಮುಂತಾದವರು ಇದ್ದರು.