Advertisement

ಗದಗ: ಜಿಲ್ಲೆಯಲ್ಲಿ 522 ಶಾಲಾ ಕೊಠಡಿಗಳು ಶಿಥಿಲ ದುರಸ್ತಿ ಭಾಗ್ಯ ಎಂದು?

06:50 PM Jul 26, 2023 | Team Udayavani |

ಗದಗ: ಸರ್ಕಾರದ ನಿರ್ಲಕ್ಷé, ಸಂಬಂಧಿ ಸಿದ ಇಲಾಖೆ ನಿರಾಸಕ್ತಿ, ಅಸಮರ್ಪಕ ನಿರ್ವಹಣೆ ಪರಿಣಾಮ ಜಿಲ್ಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಒಟ್ಟಾರೆ 5,099 ಕೊಠಡಿಗಳ ಪೈಕಿ 4,077 ಕೊಠಡಿಗಳು ಸಮರ್ಪಕವಾಗಿದ್ದು, 522 ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದರೆ, 383 ಕೊಠಡಿಗಳ ಮರು ನಿರ್ಮಾಣ ಮಾಡಬೇಕಿದೆ.

Advertisement

ಜಿಲ್ಲಾದ್ಯಂತ ಕಳೆದ 20 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಬಿರುಕು ಬಿಟ್ಟಿರುವ ಶಾಲಾ ಕಟ್ಟಡಗಳಿಂದ ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಆತಂಕ ಮನೆ ಮಾಡಿದೆ. ಯಾವ ಸಂದರ್ಭದಲ್ಲಿ ಜವರಾಯನ ರೂಪದಲ್ಲಿ ಕಟ್ಟಡ ಮೇಲೆ ಬೀಳುತ್ತದೋ ಎಂಬ ಭಯದಲ್ಲೇ ವಿದ್ಯಾರ್ಥಿಗಳು ವ್ಯಾಸಂಗ ಮಾಡಬೇಕಿದೆ. ಸಣ್ಣ ಮಳೆಗೂ ಶಿಕ್ಷಕರು ಕಂಗಾಲಾಗುವ ಪರಿಸ್ಥಿತಿ ಎದುರಾಗಿದೆ.

ಕಳೆದ ಮೂರ್‍ನಾಲ್ಕು ವರ್ಷಗಳಲ್ಲಿ ಸುರಿದ ಮಳೆ ಹಾಗೂ ಬಿರುಗಾಳಿಗೆ ನಾಲ್ಕೈದು ದಶಕಗಳ ಹಳೆಯ ಕಟ್ಟಡಗಳ ಗೋಡೆ ಬಿರುಕು ಬಿಟ್ಟಿರುವುದು, ಛಾವಣಿ ಶಿಥಿಲಗೊಂಡಿರುವುದು, ಹೆಂಚುಗಳು ಒಡೆದು ಹೋಗಿರುವುದು, ಸ್ಲ್ಯಾಬ್‌ ಉದುರುತ್ತಿರುವುದು, ಯಾವುದೇ ಕ್ಷಣದಲ್ಲಿ ತಳಪಾಯ ಕುಸಿಯುವ ಹಂತದಲ್ಲಿರುವ ಶಾಲೆಗಳು ಪಾಲಕರು, ಶಿಕ್ಷಕರ ಆತಂಕಕ್ಕೆ ಕಾರಣವಾಗಿವೆ.

ಶಿಕ್ಷಣ ಇಲಾಖೆಯೇ ಪಟ್ಟಿ ಮಾಡಿದಂತೆ ತಕ್ಷಣಕ್ಕೆ ಪುನರ್‌ ನಿರ್ಮಾಣಗೊಳ್ಳಬೇಕಾದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳ ಕೊಠಡಿಗಳ ಸಂಖ್ಯೆಯೇ 383ರಷ್ಟಿದೆ. ಅಪಾಯಕ್ಕೆ ಆಸ್ಪದವಾಗದಂತೆ ಶಿಥಿಲಗೊಂಡ ಕಟ್ಟಡಗಳಲ್ಲಿ ತರಗತಿ ನಡೆಸದೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಎರಡು ವಿಭಾಗದ ಶಾಲೆಗಳಲ್ಲಿ 212 ಹೆಚ್ಚುವರಿ ಕೊಠಡಿಗಳು ಲಭ್ಯವಿವೆ. ಅವುಗಳಲ್ಲಿಯೇ ತರಗತಿ ನಡೆಸಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ದುರಸ್ತಿಯಾಗಬೇಕಿವೆ 502 ಶಾಲೆ: ಜಿಲ್ಲೆಯ 184 ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳು, 432 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, 115 ಸರಕಾರಿ ಪ್ರೌಢಶಾಲೆಗಳ ಪೈಕಿ 522 ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳಿದ್ದರೆ ಅವುಗಳಲ್ಲಿ 502 ಕೊಠಡಿಗಳನ್ನು ತಕ್ಷಣಕ್ಕೆ ದುರಸ್ತಿ ಕಾಮಗಾರಿ ನಡೆಸಲೇಬೇಕಿದೆ.

Advertisement

21.88 ಕೋಟಿಯಲ್ಲಿ 484 ಕಾಮಗಾರಿ ಪೂರ್ಣ: ಕಳೆದ 2019-20ರಿಂದ 2022-23ನೇ ಸಾಲಿನಲ್ಲಿ ಈವರೆಗೆ 504 ಕಾಮಗಾರಿ ಪೂರ್ಣಗೊಳಿಸಲು 51.88 ಕೋಟಿ ರೂ. ಮಂಜೂರಾಗಿದ್ದು, ಅದರಲ್ಲಿ 21.14 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಆ ಪೈಕಿ 19.75 ಕೋಟಿ ರೂ. ಅನುದಾನದಲ್ಲಿ 484 ಕಾಮಗಾರಿ ಪೂರ್ಣಗೊಳಿಸಲಾಗಿದೆ. 131 ಕೊಠಡಿಗಳನ್ನು ಆಯಾ ಶಾಲಾ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಲಾಗಿದೆ. ಇನ್ನು 8 ಕಾಮಗಾರಿಗಳು ಪ್ರಗತಿಯಲ್ಲಿದ್ದು, 1 ಕಾಮಗಾರಿ ಆರಂಭಿಸಬೇಕಿದೆ.

ಜಿಲ್ಲೆಯಲ್ಲಿ ಶಿಥಿಲಗೊಂಡ ಬಹುತೇಕ ಕೊಠಡಿಗಳಲ್ಲಿ ಮಳೆ ಬಂದರೆ ಸೋರುವುದು ಸಾಮಾನ್ಯವಾಗಿದೆ. ಕಳೆದ 20 ದಿನಗಳಿಂದ ನಿರಂತರ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಶಿಥಿಲಗೊಂಡ ಕೊಠಡಿಗಳು ಸೋರುತ್ತಿವೆ. ಅಲ್ಲದೇ ಶಾಲಾ ಕೊಠಡಿಗಳ ಗೋಡೆಗಳು ತಂಪು ಹಿಡಿದಿವೆ. ಹೆಂಚುಗಳು ಕಿತ್ತು ಹೋಗಿವೆ. ಶಾಲಾ ಮಕ್ಕಳು ಭಯದಲ್ಲೇ ಮಕ್ಕಳು ಪಾಠ ಮಾಡಬೇಕಾದ ಅನಿವಾರ್ಯತೆ
ಎದುರಾಗಿದೆ. ಕೆಲ ಶಾಲೆಗಳಲ್ಲಿ ಒಂದೇ ಕೊಠಡಿಯಲ್ಲಿ 2 ರಿಂದ 3 ತರಗತಿಗಳ ಪಾಠ ಮಾಡಲಾಗುತ್ತಿದೆ.

ಅತಿ ತುರ್ತು ರಿಪೇರಿ
ಅಗತ್ಯವಿರುವ ಕೊಠಡಿಗಳು 502 ಜಿಲ್ಲೆಯ ಗದಗ ನಗರ ವಲಯದಲ್ಲಿ 64, ಗದಗ ಗ್ರಾಮೀಣದಲ್ಲಿ 24, ಮುಂಡರಗಿಯಲ್ಲಿ 54, ನರಗುಂದದಲ್ಲಿ 41, ರೋಣದಲ್ಲಿ 203 ಹಾಗೂ ಶಿರಹಟ್ಟಿಯಲ್ಲಿ 86 ಸೇರಿ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಒಟ್ಟು 502 ಕೊಠಡಿಗಳನ್ನು ಅತಿ ತುರ್ತಾಗಿ ರಿಪೇರಿ ಮಾಡುವ ಅಗತ್ಯವಿದೆ ಎಂದು ಶಿಕ್ಷಣ ಇಲಾಖೆ ವರದಿಯಲ್ಲಿ ನಮೂದಿಸಿದೆ.

ಜುಲೈ ಆರಂಭದಿಂದಲೂ ಜಿಲ್ಲಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಶಿಥಿಲಗೊಂಡ ಶಾಲಾ ಕೊಠಡಿಗಳಲ್ಲಿ ಪಾಠ
ನಡೆಸದಂತೆ ಆಯಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ನಿರ್ದೇಶನ ನೀಡಲಾಗಿದೆ. ಜಿಲ್ಲೆಯಲ್ಲಿ ದುರಸ್ತಿ ಹಾಗೂ ಪುನರ್‌ ನಿರ್ಮಾಣ
ಕಾಮಗಾರಿ ನಡೆಯಬೇಕಾದ ಶಾಲಾ ಕಟ್ಟಡಗಳ ಪಟ್ಟಿಯ ವರದಿ ಸಚಿವರಿಗೆ ನೀಡಲಾಗುತ್ತಿದ್ದು, ಸರಕಾರದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಬಸವಲಿಂಗಪ್ಪ ಜಿ.ಎಂ.,
ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ

ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next