Advertisement

ಗದಗ: ದಾಂಪತ್ಯ ಜೀವನಕ್ಕೆ ಕಾಲಿಟ್ಟ 42 ಜೋಡಿ

05:47 PM Feb 17, 2024 | Team Udayavani |

ಉದಯವಾಣಿ ಸಮಾಚಾರ
ಗದಗ: ಮದುವೆ ಎನ್ನುವುದು ಗಂಡು-ಹೆಣ್ಣನ್ನು ಕೂಡಿಸುವುದು ಮಾತ್ರವಲ್ಲ. ಎರಡು ಮನಸ್ಸು ಒಂದುಗೂಡಿಸುವುದಾಗಿದೆ. ಮನಸ್ಸುಗಳು ಒಂದುಗೂಡಿದಾಗ ಮಾತ್ರ ಮದುವೆಗೆ ಅರ್ಥ ಬರುತ್ತದೆ ಎಂದು ಶಿರಹಟ್ಟಿ-ಬಾಲೆಹೊಸೂರ ಸಂಸ್ಥಾನಮಠದ ಫಕ್ಕೀರ ದಿಂಗಾಲೇಶ್ವರ ಶ್ರೀಗಳು ಹೇಳಿದರು.

Advertisement

ಬಳಗಾನೂರಿನಲ್ಲಿ ಮೌನಯೋಗಿ ಚಿಕೇನಕೊಪ್ಪ ಚನ್ನವೀರ ಶರಣರ 29ನೇ ಪುಣ್ಯಸ್ಮರಣೋತ್ಸವ, ಸಾಮೂಹಿಕ ವಿವಾಹ ಹಾಗೂ ಜಾತ್ರಾಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಯಾವ ಮದುವೆಗಳು ದೇಹದಿಂದ ಕೂಡಿರುತ್ತವೆ, ಅಂತಹ ಮದುವೆಗಳು ವಿಚ್ಛೇದನದಲ್ಲಿ ಅಂತ್ಯಗೊಳ್ಳುತ್ತವೆ. ಎರಡು ಮನಸ್ಸುಗಳು ಕೂಡಿ ಮದುವೆಯಾದ ಜೋಡಿ ಬ್ರಹ್ಮನಿಂದಲೂ ಅಗಲಿಸಲು ಸಾಧ್ಯವಿಲ್ಲ. ಅದುವೇ ನಿಜವಾದ ಸಂಸಾರ ಎಂದು ಹೇಳಿದರು.

ಮದುವೆಗಳಲ್ಲಿ ವರದಕ್ಷಿಣೆ ಎನ್ನುವುದು ಅತ್ಯಂತ ಕೆಟ್ಟ, ದೌರ್ಜನ್ಯ ಹಾಗೂ ದೌರ್ಬಲ್ಯದ ಪದ್ಧತಿ. ವರದಕ್ಷಿಣೆ ತೆಗೆದುಕೊಂಡು ಮದುವೆಯಾದವನು, ಮದುವೆಯಾದ ನಂತರ ಹೆಂಡತಿ ಅಥವಾ ಪರರ ಮಾತು ಕೇಳಿ ತಂದೆ-ತಾಯಿ ಬಳಿ ಆಸ್ತಿ ಪಾಲು ಕೇಳುವವನು ನಿಜವಾದ ಪುರುಷನಲ್ಲ. ವ್ಯಕ್ತಿಯು ಊಟಕ್ಕೆ ಕುಳಿತ ಸಂದರ್ಭ ಅಡುಗೆ ಬಡಿಸಿದ ಕೂಡಲೇ ತುತ್ತನ್ನು ಕೈಯಲ್ಲಿಟ್ಟುಕೊಂಡು ಇದು ತಾನು ದುಡಿದು ತಿನ್ನುತ್ತಿರುವ ತುತ್ತಾ ಎಂದು ಪ್ರಶ್ನಿಸುವವನು ನಿಜವಾದ ಪುರುಷ ಎಂದು ಹೇಳಿದರು.

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮಠಗಳು ಸಾಕಷ್ಟಿವೆ. ಆದರೆ, ತಮ್ಮದೆ ದಾರಿಯಲ್ಲಿ ಮಠಗಳನ್ನು ಕಟ್ಟಿ ಶಿಕ್ಷಣ, ದಾಸೋಹ ಹಾಗೂ ಸಾಮೂಹಿಕ ವಿವಾಹ ಮಾಡುವ ಮೂಲಕ ಅಂದಿನ ಹಾಗೂ ಇಂದಿನ ಸ್ವಾಮೀಜಿಗಳು ಮಠದ ಅಭಿವೃದ್ಧಿಗೆ
ಶ್ರಮಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.

Advertisement

ಚಿಕ್ಕಮಲ್ಲಿಗವಾಡದ ಆಶ್ರಮದ ಎ.ಪಿ. ಪಾಟೀಲ ಗುರೂಜಿ ಮಾತನಾಡಿ, ಗೃಹಸ್ಥಾಶ್ರಮ ಬಹಳ ಸೂಕ್ಷ್ಮ ಜೀವನವಾಗಿದೆ. ಪೂಜ್ಯರ ನುಡಿಯೊಳಗೆ ಶಬ್ದದ ಅರ್ಥವಿರುತ್ತದೆ. ಅದನ್ನು ಬರಿ ಕಿವಿಯಿಂದ ಕೇಳಿದರೆ ಸಾಲದು. ಸತ್ಸಂಗದ ಅನುಭವ ಪಡೆದು, ಅನುಷ್ಟಾನಕ್ಕೆ ತರಬೇಕೆಂದರು.

ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಮಾತನಾಡಿ, ಕಲ್ಲಿಗೆ ಸಂಸ್ಕಾರ ಕೊಟ್ಟು ನೀರು ಹಾಕಿದಾಗ ಹೂವಾಗಿ ಅರಳುವಂತೆ ಚನ್ನವೀರ ಶರಣರು ಭಕ್ತರಿಗೆ ಜೀವನದ ಮಾರ್ಗದರ್ಶನ ಮಾಡಿದ್ದಾರೆ. ದಾನಿಗಳು ಕೊಟ್ಟ ದೇಣಿಗೆಯಿಂದ ಶಿಕ್ಷಣ,
ದಾಸೋಹ ಹಾಗೂ ಸಾಮೂಹಿಕ ಮದುವೆ ಮಾಡಿ ಸಮಾಜದ ಹಣ ಸಮಾಜಕ್ಕೆ ನೀಡುತ್ತಿದ್ದಾರೆ ಎಂದು ಹೇಳಿದರು.

ವೇದಿಕೆ ಮೇಲೆ ಬಳಗಾನೂರಿನ ಶಿವಶಾಂತವೀರ ಶರಣರು, ಹೊಸಳ್ಳಿ ಅಭಿನವ ಬೂದೀಶ್ವರ ಶ್ರೀಗಳು, ಕುಂದಗೋಳ ಕಲ್ಯಾಣಮಠದ ಅಭಿನವ ಬಸವಣ್ಣನವರು, ಬಿಜೆಪಿ ಯುವ ಮುಖಂಡ ಉಮೇಶಗೌಡ ಪಾಟೀಲ ಸೇರಿ ಮುಂತಾದವರು ಇದ್ದರು.

ಈ ಸಂದರ್ಭ 42 ಜೋಡಿಗಳು ನವ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಾರಟಗಿ ಸಂಜಯ ಜೆ.ಸಿ. ಹಾಗೂ ಬಳ್ಳಾರಿ ದಿ. ಎಸ್‌.ಕೆ.ಆರ್‌. ಜಿಲಾನಿ ಭಾಷಾ ಅವರಿಗೆ ಶರಣಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಂತರ ಭಕ್ತರಿಂದ ಶಿವಶಾಂತವೀರ ಶರಣರಿಗೆ ತುಲಾಬಾರ ಸೇವೆ, ರಕ್ತದಾನ ಶಿಬಿರ ಜರುಗಿದವು. ಬೆಂಗಳೂರಿನ ಮಹೇಶಕುಮಾರ ಹೇರೂರ ಸಂಗೀತ ಕಾರ್ಯಕ್ರಮ ನೀಡಿದರು. ಶಿವಲಿಂಗಯ್ಯಶಾಸ್ತ್ರಿ ಹಿರೇಮಠ ಸಿದ್ದಾಪೂರ ಕಾರ್ಯಕ್ರಮ ನಿರೂಪಿಸಿದರು. ಬಿ.ವೈ. ಡೊಳ್ಳಿನ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next