ಟೆಸ್ಟ್ ಕ್ರಿಕೆಟ್… ‘ದಿ ರಿಯಲ್ ಕ್ರಿಕೆಟ್’ ಗೆ ಇನ್ನೆಷ್ಟು ಭವಿಷ್ಯವಿದೆ? ಈ ಪ್ರಶ್ನೆ ಕ್ರಿಕೆಟ್ ಪಂಡಿತರನ್ನು ಕಾಡಲು ಆರಂಭಿಸಿ ಕೆಲವು ವರ್ಷಗಳೇ ಕಳೆಯಿತು. ಕ್ರಿಕೆಟ್ ನ ಜನಪ್ರೀಯತೆಯನ್ನು ಹೆಚ್ಚಿಸಲು ಐಸಿಸಿ ಚುಟುಕು ಮಾದರಿಯ ಟಿ20 ಕ್ರಿಕೆಟ್ ನ್ನು ಆರಂಭಿಸಿತು. ಯಾವಾಗ ಟಿ 20 ಕ್ರಿಕೆಟ್ ಆರಂಭವಾಯಿತೋ ಆಗ ಟೆಸ್ಟ್ ಕ್ರಿಕೆಟ್ ಮಂಕಾಗತೊಡಗಿತು. ಸಿಕ್ಸರ್ – ಬೌಂಡರಿಗಳ ಮೇಲಾಟದಲ್ಲಿ ಟೆಸ್ಟ್ ಕ್ರಿಕೆಟ್ ಪ್ರಭಾವ ಕಡಿಮೆಯಾಗತೊಡಗಿತು.
ಟೆಸ್ಟ್ ಗೆ ರಿಯಲ್ ‘ಟೆಸ್ಟ್’
ಅಂತಾರಾಷ್ಟ್ರೀಯ ಟಿ20 ಪಂದ್ಯಗಳ ಜೊತೆಗೆ ಆರಂಭವಾದ ಐಪಿಎಲ್, ಬಿಬಿಎಲ್, ಸಿಪಿಎಲ್ ನಂತಹ ಕೂಟಗಳು ಚುಟುಕು ಮಾದರಿ ಗುಂಗನ್ನು ಮತ್ತಷ್ಟು ಹೆಚ್ಚಿಸಿದವು. ಅವುಗಳಿಗೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾದ ಹೋದಂತೆ ಐದು ದಿನ ನಡೆಯುವ ಪಂದ್ಯಕ್ಕೆ ಕಡಿಮೆಯಾಗಲು ಆರಂಭವಾಯಿತು. ಸ್ಟೇಡಿಯಂನ ಖಾಲಿ ಕುರ್ಚಿಗಳ ಸಮ್ಮುಖದಲ್ಲಿ ಅದೆಷ್ಟೋ ಟೆಸ್ಟ್ ಪಂದ್ಯಗಳು ನಡೆದಿವೆ. ಆಟಗಾರರು ಕೂಡಾ ಟಿ20 ಮೂಡ್ ನಲ್ಲೇ ಇದ್ದರು. ಇದೇ ಕಾರಣದಿಂದ ಹಲವಾರು ದೇಶಗಳ ಟೆಸ್ಟ್ ಕ್ರಿಕೆಟ್ ಪ್ರದರ್ಶನವೂ ಕೆಳ ಹಂತ ತಲುಪಿತು.
ಕೆಲವು ರೋಮಾಂಚಕ ಪಂದ್ಯಗಳು
ಟೆಸ್ಟ್ ಕ್ರಿಕೆಟ್ ಬೋರು ಎನ್ನುವ ಯುವ ಜನಾಂಗಕ್ಕೂ ರೋಮಾಂಚನ ಉಂಟು ಮಾಡಿತ್ತು ಕೆಲವು ಪಂದ್ಯಗಳು. 2013ರ ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಭಾರತ- ದಕ್ಷಿಣ ಆಫ್ರಿಕಾ ಪಂದ್ಯ, 2014ರಲ್ಲಿ ಲೀಡ್ಸ್ ನಲ್ಲಿ ನಡೆದ ಇಂಗ್ಲೆಂಡ್- ಶ್ರೀಲಂಕಾ ಪಂದ್ಯ, 2014ರ ಪಾಕ್- ಲಂಕಾ ನಡುವಿನ ಶಾರ್ಜಾ ಪಂದ್ಯ, 2020ರ ವೆಸ್ಟ್ಇಂಡೀಸ್- ಇಂಗ್ಲೆಂಡ್ ಪಂದ್ಯ, 2021ರ ಭಾರತ- ಆಸ್ಟ್ರೇಲಿಯಾ ನಡುವಿನ ಗಾಬಾ ಪಂದ್ಯ…ಹೀಗೆ ಕೆಲವು ಪಂದ್ಯಗಳು ಪ್ರೇಕ್ಷಕರನ್ನು ರೋಮಾಂಚನದ ತುತ್ತ ತುದಿಗೆ ಕೊಂಡೊಯ್ದಿದೆ. ಟೆಸ್ಟ್ ಪಂದ್ಯಗಳು ಬೋರಿಂಗ್ ಅಲ್ಲ, ಅದೂ ಟಿ20 ಯಂತೆ ಕುತೂಹಲ ಕೆರಳಿಸುತ್ತದೆ ಎಂದು ಯುವ ಜನಾಂಗಕ್ಕೆ ತೋರಿಸಿಕೊಟ್ಟಿದೆ. ಆದರೆ ಇಂತಹ ಅನುಭವ ನೀಡಿದ್ದು ಕೆಲವೇ ಕೆಲವು ಪಂದ್ಯಗಳು ಮಾತ್ರ. ಹೀಗಾಗಿ ಪ್ರೇಕ್ಷಕರು ಟೆಸ್ಟ್ ಕ್ರಿಕೆಟ್ ನತ್ತ ಸತತವಾಗಿ ತಿರುಗಿ ನೋಡಲಿಲ್ಲ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್
ಟೆಸ್ಟ್ ಕ್ರಿಕೆಟ್ ಗೆ ಪ್ರೇಕ್ಷಕರನ್ನು ಮತ್ತೆ ಕರೆತರಬೇಕು ಎಂಬ ಕಾರಣಕ್ಕೆ ಐಸಿಸಿ ಆರಂಭಿಸಿದ್ದು ‘ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್’. ಸುಮಾರು ಎರಡು ವರ್ಷಗಳ ಕಾಲ ನಡೆಯವ ದ್ವಿಪಕ್ಷೀಯ ಸರಣಿಗಳಿಗೆ ಅಂಕ ನೀಡುತ್ತಾ, ಅಂತಿಮವಾಗಿ ಅತೀ ಹೆಚ್ಚು ಅಂಕ ಸಂಪಾದಿಸುವ ಎರಡು ತಂಡಗಳ ನಡುವೆ ಫೈನಲ್ ಪಂದ್ಯ ಏರ್ಪಡಿಸಲಾಗುತ್ತದೆ. ದ್ವಿಪಕ್ಷೀಯ ಟೆಸ್ಟ್ ಸರಣಿಗಳಲ್ಲಿ ಆಟಗಾರರು ಇನ್ನಷ್ಟು ಹುರುಪಿನಲ್ಲಿ ಆಡುವಂತಾಗಬೇಕು ಎಂಬ ಕಾಳಜಿಯೂ ಇದರ ಹಿಂದಿತ್ತು. ಸದ್ಯ ನಡೆಯುತ್ತಿರುವ ಮೊದಲ ಚಾಂಪಿಯನ್ ಶಿಪ್ ಕೋವಿಡ್ ಕಾರಣದಿಂದ ಸಮರ್ಪಕವಾಗಿ ನಡೆಯದೇ ಇದ್ದರೂ, ಫೈನಲ್ ಪಂದ್ಯಕ್ಕೆ ಅಣಿಯಾಗಿದೆ. ಜೂ.18ರಂದು ಇಂಗ್ಲೆಂಡ್ ನ ಸೌಥಂಪ್ಟನ್ ನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಇಲ್ಲಿ ಮುಖಾಮುಖಿಯಾಗಲಿದೆ.
ಫಲಿತಾಂಶ?
ಟೆಸ್ಟ್ ಕ್ರಿಕೆಟ್ ಗೆ ಮರಳಿ ಹುರುಪು ನೀಡಲು ಐಸಿಸಿ ಏನೋ ವಿಶ್ವ ಕ್ರಿಕೆಟ್ ಚಾಂಪಿಯನ್ ಶಿಪ್ ನಡೆಸುತ್ತಿದೆ. ಸದ್ಯ ಫೈನಲ್ ಹಂತಕ್ಕೆ ಕೂಟ ಬಂದಿರುವ ಕಾರಣ ಈ ಯೋಜನೆಯ ಪ್ರತಿಫಲದ ಬಗ್ಗೆ ಅಂದಾಜಿಸಬಹುದು. ಐಸಿಸಿ ಯೋಚಿಸಿದಂತೆ ಟೆಸ್ಟ್ ಕ್ರಿಕೆಟ್ ಮತ್ತೆ ತನ್ನ ಗತವೈಭವಕ್ಕೆ ಮರಳಿತೇ ಎಂದರೆ ಬಹುತೇಕ ಉತ್ತರ ಇಲ್ಲ ಎನ್ನಬಹುದು. ಕಾರಣ ಹಲವು. ಈ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪಂದ್ಯಾವಳಿ ರೂಪುರೇಷೆಯ ಬಗ್ಗೆಯೇ ಹಲವಾರು ಅಸಮಾಧಾನಗಳು ಆರಂಭದಲ್ಲಿ ಕೇಳಿಬಂದಿದ್ದವು. ಯಾಕೆಂದರೆ ಈ ಅವಧಿಯಲ್ಲಿ ಎಲ್ಲಾ ತಂಡಗಳು ಎಲ್ಲಾ ತಂಡಗಳ ವಿರುದ್ಧ ಸರಣಿ ಆಡಲಿಲ್ಲ. ಉದಾಹರಣೆಗೆ ಭಾರತ ಈ ಅವಧಿಯಲ್ಲಿ ಪಾಕಿಸ್ಥಾನ, ಶ್ರೀಲಂಕಾ ವಿರುದ್ಧ ಸರಣಿ ಆಡಿಯೇ ಇಲ್ಲ. ಹೀಗಾಗಿ ಇದು ಸರಿಯಿಲ್ಲ ಎಂಬ ವಾದವೂ ಇದೆ.
ಭಾರತ ಒಟ್ಟು ಆರು ಸರಣಿ ಆಡಿದೆ. ಆದರೆ ಅದರಲ್ಲಿ ರೋಮಾಂಚನ ಉಂಟು ಮಾಡಿದ್ದು ಎರಡು ಮಾತ್ರ ( ಆಸೀಸ್ ಮತ್ತು ಇಂಗ್ಲೆಂಡ್ ವಿರುದ್ಧ). ಸದ್ಯ ವಿಶ್ವ ಕ್ರಿಕೆಟ್ ನ ಪ್ರಮುಖ ತಂಡವಾದ ಭಾರತದ ಪಂದ್ಯಗಳೇ ಹೀಗಾದರೆ ಸದ್ಯ ತೀರಾ ಹೀನಾಯ ಸ್ಥಿತಿಯಲ್ಲಿರುವ ವೆಸ್ಟ್ ಇಂಡೀಸ್, ಲಂಕಾಗಳಲ್ಲಿ ಎಷ್ಟು ಜನಪ್ರೀಯತೆ ಪಡೆದೀತು!
ನಿಜವಾದ ಕ್ರಿಕೆಟ್ ಪ್ರೇಮಿಯಾದವನು ಟೆಸ್ಟ್ ಕ್ರಿಕೆಟ್ ನ ಅಭಿಮಾನಿಯಾಗದೇ ಇರಲಾರ ಎಂಬ ಮಾತಿದೆ. ಯುವ ಜನಾಂಗವನ್ನು ಮತ್ತಷ್ಟು ಸೆಳೆಯಬೇಕಾದರೆ ಟೆಸ್ಟ್ ಸರಣಿಗಳ ಸಂಖ್ಯೆ ಹೆಚ್ಚಾಗಬೇಕು. ಇನ್ನಷ್ಟು ಸ್ಪರ್ಧಾತ್ಮಕ ಪಿಚ್ ಗಳು ಬೇಕು. ಸಮಾನ ಸಾಮರ್ಥ್ಯದ ತಂಡಗಳ ನಡುವೆ ಹೆಚ್ಚು ಹೆಚ್ಚು ಪಂದ್ಯಗಳು ನಡೆಯಬೇಕು. ಆಗ ಮಾತ್ರ ಕ್ರಿಕೆಟ್ ನ ಪ್ರಾಚೀನ ಮಾದರಿ ಗತವೈಭವ ಪಡೆಯಲು ಸಾಧ್ಯ.F
ಕೀರ್ತನ್ ಶೆಟ್ಟಿ ಬೋಳ