ದಾವಣಗೆರೆ: ನೌಕರರ ಮೂಲಭೂತ ಹಕ್ಕಾಗಿರುವಂತಹ ಪಿಂಚಣಿಯನ್ನು ನೀಡಲೇಬೇಕು ಎಂದು ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಅಧ್ಯಕ್ಷ ಜಿ. ಹನುಮಂತಪ್ಪ ಸರ್ಕಾರವನ್ನು ಒತ್ತಾಯಿಸಿದರು.
ಸೋಮವಾರ ಜಿಲ್ಲಾ ಗುರುಭವನದಲ್ಲಿ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ಏರ್ಪಡಿಸಿದ್ದ ಪಿಂಚಣಿ ಹೋರಾಟದ ಕುರಿತು ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು. ಪಿಂಚಣಿ ಎಲ್ಲ ನೌಕರರ ಮೂಲಭೂತ ಹಕ್ಕು. ಸರ್ಕಾರ ನೌಕರರ ಮುಂದಿನ ಜೀವನ ಭವಿಷ್ಯದ ದೃಷ್ಟಿಯಿಂದ ಪಿಂಚಣಿ ನೀಡಬೇಕು ಎಂದರು.
ಪಿಂಚಣಿ ವ್ಯವಸ್ಥೆ ಜಾರಿಗಾಗಿ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ನೇತೃತ್ವದಲ್ಲಿ ಕಳೆದ 10 ವರ್ಷದಿಂದ ನಿರಂತರವಾಗಿ ಮನವಿ ಸಲ್ಲಿಕೆ, ವಿವಿಧ ಹಂತದ ಹೋರಾಟ ನಡೆಸಲಾಗುತ್ತಿದೆ. ಆದರೂ ಸರ್ಕಾರ ನಮ್ಮ ಬೇಡಿಕೆ ಈಡೇರಿಸಿಲ್ಲ. ಸರ್ಕಾರ ಶೀಘ್ರವೇ ಪಿಂಚಣಿ ವ್ಯವಸ್ಥೆ ಮಾಡಬೇಕು. ಪಿಂಚಣಿ ನೀಡುವುದರಿಂದ ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊರೆ ಮತ್ತು ಕಾನೂನು ತೊಡಕು ಆಗುವುದೇ ಇಲ್ಲ. ಖಾಸಗಿ ಶಾಲಾ-ಕಾಲೇಜುಗಳಿಗೆ ಅನುದಾನ ನೀಡುವ ಮೂಲಕ ವೇತನ ನೀಡುತ್ತಿರುವ ಸರ್ಕಾರ ನೌಕರರಿಗೆ ಪಿಂಚಣಿ ಸಹ ಕೊಡಬೇಕು. ಪಿಂಚಣಿಗಾಗಿ ಅನುದಾನ ರಹಿತ ಅವಧಿಯ ಸೇವೆಯನ್ನೂ ಪರಿಗಣಿಸಬೇಕು ಎಂದರು.
ಸಂಘದ ಕಾರ್ಯದರ್ಶಿ ಮುತ್ತುರಾಜ್ ಮತ್ತಿಕೊಪ್ಪ ಮಾತನಾಡಿ, ನಿವೃ ತ್ತಿಯ ನಂತರ ಪಿಂಚಣಿ ಇಲ್ಲದೇ ಹೋದರೆ ನೌಕರರು ಜೀವನ ನಡೆಸುವುದೇ ಬಹಳ ಕಷ್ಟವಾಗುತ್ತದೆ. ಇಂದಿನ ಬೆಲೆ ಏರಿಕೆ ದಿನಮಾನಗಳಲ್ಲಿ ಇನ್ನೂ ಸಮಸ್ಯೆ ಆಗಲಿದೆ. ಈಗಾಗಲೇ ನಿವೃತ್ತರಾದಂತಹವರು ಪಿಂಚಣಿ ಇಲ್ಲದೆ ಅನುಭವಿಸುತ್ತಿರುವ ಸಮಸ್ಯೆ, ನೋವು ನಮ್ಮ ಕಣ್ಣ ಮುಂದೆಯೇ ಇವೆ. ನಾವು ಸಹ ಅವರಂತೆ ಆಗಬಾರದು. ಪಿಂಚಣಿ ಸೌಲಭ್ಯವಿಲ್ಲದೆ ತೊಂದರೆಗೆ ಒಳಗಾಗುವುದನ್ನ ತಪ್ಪಿಸಲು ಸರ್ಕಾರ ಪಿಂಚಣಿ ವ್ಯವಸ್ಥೆ ಮಾಡಬೇಕು ಎನ್ನುವುದು ಎಲ್ಲ ನೌಕರರ ಒತ್ತಾಯ ಎಂದು ತಿಳಿಸಿದರು.
ಪಿಂಚಣಿಗಾಗಿ ಸಂಘದ ನೇತೃತ್ವದಲ್ಲಿ ನಿರಂತರವಾಗಿ ಸಂಬಂಧಪಟ್ಟವರಿಗೆ ಮನವಿಗಳನ್ನು ಸಲ್ಲಿಸುವುದು, ಪತ್ರ ಚಳವಳಿ, ಸತ್ಯಾಗ್ರಹ, ಹತ್ತಾರು ಸಭೆಗಳು ಆಗಿವೆ. ಆದರೂ ಕಲ್ಲು ಹೃದಯದ ಜನಪ್ರತಿನಿಧಿ ಗಳು ಮತ್ತು ಅಧಿ ಕಾರಿಗಳು ಸ್ಪಂದಿಸಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪಿಂಚಣಿಗಾಗಿ ಇರುವಂತಹ ಸಮಸ್ಯೆ ಏನು ಎಂಬುದು ತಿಳಿದಿದೆ, ಪರಿಹಾರದ ಮಾರ್ಗ ಹುಡುಕಬೇಕಿದೆ. ಇನ್ನೂ ಹೆಚ್ಚಿನ ಮಟ್ಟದಲ್ಲಿ ಹೋರಾಟವನ್ನ ಬೆಳೆಸಬೇಕಿದೆ, ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕಿದೆ. ಹಾಗಾಗಿ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಾಲಮಂಗಲ ನಾಗರಾಜ್ ಮಾತನಾಡಿ, ಪಿಂಚಣಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕಾದರೆ ನೌಕರರು ಸಂಘಟಿತ ಹೋರಾಟ ಮಾಡಬೇಕು. ಸಾವಿರಾರು ಸಂಖ್ಯೆಯಲ್ಲಿ ಸೇರುವ ಮೂಲಕ ಸಂಘಟನೆಯ ಶಕ್ತಿಯನ್ನು ಪ್ರದರ್ಶಿಸಬೇಕು ಎಂದ ದರು. ಸಂಘದ ಮುಖಂಡರಾದ ಅರುಣ್ ಕುಮಾರ್, ಮಂಜಾ ನಾಯ್ಕ, ಕೆ. ಈಶಾ ನಾಯ್ಕ, ಎಸ್.ಎಂ. ಮಡಿವಾಳರ, ಎಸ್.ಎಚ್. ಮಲ್ಲಮ್ಮ, ಕೆ.ಸಿ. ಶ್ರೀನಿವಾಸ ಮೂರ್ತಿ, ಆರ್. ನಾಗೇಂದ್ರಪ್ಪ, ಸೌಭಾಗ್ಯ ಇತರರು ಇದ್ದರು.