Advertisement
ಆಧುನಿಕ ಕಾಲದಲ್ಲೂ ಇಷ್ಟೊಂದು ಕಟ್ಟುನಿಟ್ಟಿನ ನಿಯಮಾವಳಿಗಳೊಂದಿಗೆ ದೇವರ ಆರಾಧನೆ ನಡೆಯುವುದು ಪಡುಬಿದ್ರಿಯ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ.
ಕೇವಲ ಪ್ರಾಕೃತಿಕ ಸೊಬಗಿನ ನಡುವೆ ಇರುವ ಈ ಬಯಲು ಆಲಯದಲ್ಲಿ ಮಹಾಶಕ್ತಿಯು ಶಕ್ತಿರೂಪಿಣಿ ಖಡ್ಗೇಶ್ವರಿಯಾಗಿ ಅಸಾಮಾನ್ಯ ಬೃಹತ್ “ಬ್ರಹ್ಮ’ ರೂಪದಲ್ಲಿ ಮಣ್ಣಿನ ಜಿಡ್ಡೆಯ ಗುಡಿಯೊಳಗೆ ಕಾಣಿಸಿಕೊಳ್ಳುತ್ತಾಳೆ. ಅದರ ನೈಋತ್ಯ ಭಾಗದಲ್ಲಿ ನಾಗರಾಜನ ವಿಶೇಷ ಸನ್ನಿಧಾನವಿದೆ. ಉಳಿದಂತೆ ಕ್ಷೇತ್ರಪಾಲ, ನಂದಿ, ರಕ್ತೇಶ್ವರೀ ಮುಂತಾದ ಪಂಚದೈವೀಕ ಸ್ಥಾನವಾಗಿ ಮೆರೆಯುತ್ತಿದೆ.
Related Articles
ಕಾಡಿನ ಈ ಪ್ರದೇಶವನ್ನು ಮಲ್ಲಿಗೆ, ಜಾಜಿ, ಸೇವಂತಿಗೆ ಸಹಿತ ಎಲ್ಲ ಬಗೆಯ ಹೂ, ಹಿಂಗಾರ, ಬಾಳೆದಿಂಡು, ಎಳೆಯ ತೆಂಗಿನ ಸೋಗೆಗಳು, ಬಾಳೆಹಣ್ಣು, ಲಿಂಬೆ, ಸೀಯಾಳ, ಮೂಸಂಬಿ, ಕಿತ್ತಳೆ, ಅನಾನಾಸು, ಸೇಬು, ಇನ್ನಿತರ ಹಣ್ಣು ಹಂಪಲುಗಳು, ತೆಂಗಿನ ಕಾಯಿ ಮುಂತಾದ ಪ್ರಕೃತಿದತ್ತ ಸಾಧನಗಳಿಂದಲೇ ಅಲಂಕರಿಸಲಾಗುತ್ತದೆ. ರಾತ್ರಿ 10 ಗಂಟೆಯ ಹೊತ್ತಿಗೆ ಬ್ರಹ್ಮಸ್ಥಾನದ ಅಲಂಕಾರ ಮುಗಿಯುತ್ತದೆ. ಆದರೆ, ಈ ಅಲಂಕಾರದ ಛಾಯಾಚಿತ್ರಗ್ರಹಣ, ವೀಡಿಯೋಗ್ರಫಿ ಮಾಡುವಂತಿಲ್ಲ. ಹೀಗಾಗಿ ಇಷ್ಟು ವರ್ಷವಾದರೂ ಆ ಅಲಂಕಾರ ಮತ್ತು ಪ್ರಕ್ರಿಯೆಗಳ ಒಂದೇ ಒಂದು ಚಿತ್ರ ದಾಖಲೆಯಲ್ಲಿ ಇಲ್ಲ. ಕಲಾವಿದ ದಾಮೋದರ ರಾಯರು ತಾವು ಕಂಡಂತೆ ಚಿತ್ರಿಸಿದ ಕಲಾಕೃತಿಯೊಂದು ಆ ಸೌಂದರ್ಯಕ್ಕೆ ಸಾಕ್ಷೀರೂಪ!
Advertisement
ತುಪ್ಪ, ಎಳ್ಳಿನ ಎಣ್ಣೆ, ಕರ್ಪೂರ, ಅಗರಬತ್ತಿಗಳೂ ಸೇವಾ ದಿನದಂದು ಸಮರ್ಪಿಸಲ್ಪಡುತ್ತದೆ. ಸಂಜೆಯ ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಇವುಗಳನ್ನೆಲ್ಲಾ ಸನ್ನಿಧಾನಕ್ಕೆ ಒಪ್ಪಿಸಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಬಳಿಕ ಇಲ್ಲಿನ ಬ್ರಾಹ್ಮಣ ಯುವಕರಿಂದ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದ ಅಲಂಕಾರವು ನಡೆಯುತ್ತದೆ. ರಾತ್ರಿಯ ಸುಮಾರು 10ಗಂಟೆಗೆ ಮುಗಿವ ಈ ಅಲಂಕಾರದ ಬಳಿಕ ಇಲ್ಲಿನ ಸೊಬಗನ್ನು ವರ್ಣಿಸಲಾಗದು. ಇದನ್ನು ಇಲ್ಲಿನ ಏಕಮೇವ ಕಲಾವಿದ ದಾಮೋದರ ರಾಯರು ತಮ್ಮ ಕುಂಚದ ಮೂಲಕ ಚಿತ್ರಿಸಿದ ಚಿತ್ರಣವೇ ಅಲ್ಲಿನ ಸೊಬಗಿನ ಏಕೈಕ ಚಿತ್ರಣ.
ಈ ಬಾರಿ ಶಿಲ್ಪಾ ಶೆಟ್ಟಿ ಸೇವೆ ವಿಶೇಷ– ಉತ್ತಮ ಸಂಗಾತಿ ಪ್ರಾಪ್ತಿ, ವ್ಯಾಪಾರ, ಉದ್ಯೋಗ, ನೆಮ್ಮದಿಯನ್ನು ಬಯಸಿ ಢಕ್ಕೆ ಬಲಿ ಸೇವೆ ನೀಡಲಾಗುತ್ತದೆ. ಈ ವರ್ಷದ ವಿಶೇಷವೆಂದರೆ, ಸಿನಿಮಾ ತಾರೆ ಶಿಲ್ಪಾ ಶೆಟ್ಟಿ ಅವರ ಸೇವೆ ಫೆ. 28ರಂದು ನಡೆಯಲಿದೆ.
– ಮುಂಬಯಿನಲ್ಲಿ ಸೆಕ್ಯೂರಿಟಿ ಪ್ರಿಂಟಿಂಗ್ ಉದ್ಯಮ ನಡೆಸುತ್ತಿರುವ ಗುಜರಾತ್‌ನ ಉದ್ಯಮಿ ಪ್ರಜ್ಞಾತ್ ಶೇಷಶಾಯಿ ಅವರು 2007ರಿಂದಲೂ ನಿರಂತರವಾಗಿ (ಈ ಬಾರಿ 9ನೇ) ಸೇವೆಯನ್ನು ನೀಡುತ್ತಿದ್ದಾರೆ.
– ಢಕ್ಕೆ ಬಲಿ ನಡೆಯುವ ಅವಧಿಯಲ್ಲಿ ಪಡುಬಿದ್ರಿ ವ್ಯಾಪ್ತಿಯಲ್ಲಿ ಯಾವುದೇ ಶುಭ ಸಮಾರಂಭ ನಡೆಯುವಂತಿಲ್ಲ.
– ಯಾವುದಾದರೂ ಸಾವು ಸಂಭವಿಸಿದರೂ ಊರಿನ ಹೊರಗೆ ಸಂಸ್ಕಾರ ನಡೆಸುವುದು ಈಗಲ ರೂಢಿಯಲ್ಲಿದೆ. ಇಲ್ಲಿ ಮರಳೇ ಮಹಾಪ್ರಸಾದ!
ಆಧುನಿಕ ಕಾಲದಲ್ಲೂ ಇಲ್ಲಿ ವಿದ್ಯುತ್ ದೀಪಗಳ ಬಳಕೆ ಇಲ್ಲ. ದೊಂದಿ, ಗ್ಯಾಸ್ ಲೈಟ್‌ನಲ್ಲೇ ಬೆಳಗಬೇಕು. ನಾಡ್ಪಾಲು ಬೀಡಿನರಸರು, ಉಡುಪಿ ಅಷ್ಟ ಮಠದ ಯತಿಗಳು ಮಾತ್ರವೇ ಇಲ್ಲಿ ಚಾಪೆ ಮತ್ತು ಕೃಷ್ಣಾಜಿನದ ಹಾಸಿನಲ್ಲಿ ಕುಳಿತುಕೊಳ್ಳಬಹುದು. ಉಳಿದಂತೆ ಯಾರೇ ಬಂದರೂ ಮರಳಿನಲ್ಲೇ ಕುಳಿತುಕೊಳ್ಳಬೇಕು. ಬರುವ ಎಲ್ಲರಿಗೂ ಇಲ್ಲಿ ಮರಳೇ ಮಹಾಪ್ರಸಾದ. ಢಕ್ಕೆಬಲಿ ಹೀಗೆ ನಡೆಯುತ್ತದೆ
– ಢಕ್ಕೆಬಲಿ ಸೇವೆಯು ರಾತ್ರಿ ತಂಬಿಲ ಮತ್ತು ಬ್ರಹ್ಮ ಮಂಡಲ ಸೇವೆಗಳನ್ನು ಒಳಗೊಂಡಿರುತ್ತವೆ. ಪ್ರಕೃತಿದತ್ತ, ಹೂವು ಹಣ್ಣುಗಳು, ತುಪ್ಪ, ಎಳ್ಳಿನ ಎಣ್ಣೆ, ಕರ್ಪೂರ, ಅಗರಬತ್ತಿಗಳನ್ನು ಒಳಗೊಂಡ ಹೊರೆ ಕಾಣಿಕೆ ಬರುವುದರೊಂದಿಗೆ ಪ್ರಕ್ರಿಯೆ ಆರಂಭ. ಇಲ್ಲಿನ ಬ್ರಾಹ್ಮಣ ಯುವಕರಿಂದ ಬ್ರಹ್ಮಸ್ಥಾನದ ಅಲಂಕಾರವು ನಡೆಯುತ್ತದೆ.
– ಅಲಂಕಾರದ ಬಳಿಕ ಮೊದಲರ್ಧದ ತಂಬಿಲ ಸೇವೆಯು ಢಕ್ಕೆಯವರ ಢಕ್ಕೆ ನಿನಾದದ ನಡುವೆ ಪಾತ್ರಿಗಳಿಗೆ ಸನ್ನಿಧಾನದ ಆಕರ್ಷಣೆ, ಆವೇಶಗಳೊಂದಿಗೆ ನಡೆಯುತ್ತದೆ.
– ಒಂದೆರಡು ತಾಸು ವಿಶ್ರಾಂತಿಯ ಬಳಿಕ ಬ್ರಹ್ಮ ಮಂಡಲ ಸೇವೆಗಾಗಿ ಮರು ಆವೇಶ, ಬ್ರಹ್ಮ ಮಂಡಲದತ್ತ ಪಾತ್ರಿ (ಕೊರಡು)ಗಳ ಗಮನ, ನಾಗಕನ್ನಿಕೆ ಜತೆಗೂಡಿ ನಾಗಮಂಡಲ ಅಥವಾ ಬ್ರಹ್ಮ ಮಂಡಲ ಸೇವೆಗಳು, ಹಿಂಗಾರ ಸ್ನಾನ, ಸಾಮೂಹಿಕ ಪ್ರಸಾದ, ಕರ್ತೃ ಪ್ರಸಾದ ವಿತರಣೆ, ಸಮಾಪನಗಳು ನಡೆಯುತ್ತವೆ.
– ಅಲ್ಲಿ ಕಟ್ಟಿದ ಅಷ್ಟೂ ಹೂವು, ಹಣ್ಣುಗಳನ್ನು ಪ್ರಸಾದ ರೂಪದಲ್ಲಿ ಬಂದವರಿಗೆ ಹಂಚಲಾಗುತ್ತದೆ. ಮರುದಿನ ಬೆಳಗ್ಗೆ ನೋಡಿದಾಗ ಇಲ್ಲಿ ನಿನ್ನೆ ಇಷ್ಟು ವೈಭವದ ಘಟನೆ ನಡೆದಿತ್ತೇ ಎಂದು ಸಂಶಯ ಬರುವಷ್ಟು ಸ್ವತ್ಛ!
– ಇಲ್ಲಿ ಬಳಸುವ ಭಾಷೆಗಳು ಕರ್ತೃ(ಸೇವಾಕರ್ತ), ಸ್ಥಾನಿ, ಮಾನಿ(ಗುರಿಕಾರರು, ಮಾನ್ಯ ಸ್ಥಾನದವರು), ಕೊರಡು (ಪಾತ್ರಿ), ದಳ್ಯ (ಪಾತ್ರಿಗಳು ಉಡುವ ದಿನಂಪ್ರತಿ ಮಡಿವಾಳರು ಒಗೆದು ಕೊಡುವ ಬಟ್ಟೆ), ದೊಂದಿ (ಬಟ್ಟೆ ಮಡಚಿ ತಯಾರಿಸಲಾಗುವ ದೀಪ ಉರಿಸುವ ಬತ್ತಿ) ಮತ್ತು ಧೂಪಕ್ಕಾಗಿ ಬಟ್ಟೆ ತುಂಡನ್ನು ಸುಟ್ಟು ಮಾಡುವ ಕ್ರಮ, ಸ್ವಸ್ತಿಕೆ, ಬಲಿಗೆ ಉಪಯೋಗಿಸುವ ಕುಚ್ಚಿಗೆ ಅಕ್ಕಿ, ಪಂಚವಾದ್ಯ, ದಿಡುಂಬು, ದೋಲಂಟೆಗಳು ತೌಳವ ಆರಾಧನೆಗೆ ಪುಷ್ಟಿ ನೀಡಿದರೆ, ಹತ್ತು ಸಮಸ್ತರನ್ನು ಮುಂದಿರಿಸಿ ಪಾತ್ರಿಗಳು ಜಳಕಕ್ಕೆ ಹೊರಡುವ ಮತ್ತು ಮಿಂದು ಆಗಮಿಸುವ ಅವರಿಗೆ ದಳ್ಯ ನೀಡುವ ಆಚರಣೆಗಳು ಇಂದಿಗೂ ಕೇರಳಿಯ ತಂತ್ರಾಗಮ ಬದ್ಧವಾಗಿ ಪ್ರಚಲಿತದಲ್ಲಿದೆ.