Advertisement

ಫ‌ಂಡ್‌ ಕತ್ತರಿ ಪ್ರಸ್ತಾಪಕ್ಕೆ ಶಾಸಕರ ಕೆಂಗಣ್ಣು

11:50 AM Dec 16, 2017 | Team Udayavani |

ಬೆಂಗಳೂರು: ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗದೇ ಇರುವುದರಿಂದ ಪ್ರಸ್ತುತ ನೀಡುತ್ತಿರುವ 2 ಕೋಟಿ ರೂ. ಮೊತ್ತವನ್ನು 1.5 ಕೋಟಿ ರೂ.ಗೆ ಇಳಿಸುವ ಯೋಜನಾ ಸಚಿವ ಎಂ.ಆರ್‌. ಸೀತಾರಾಂ ಅವರ ಚಿಂತನೆಗೆ ಬಹುತೇಕ ಶಾಸಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. 

Advertisement

ನಮ್ಮ ಕ್ಷೇತ್ರದಲ್ಲಿ ಸರ್ಕಾರದ ಕಡೆಯಿಂದ ನೂರಾರು ಕೋಟಿ ರೂ. ವೆಚ್ಚ ಮಾಡಿಸುತ್ತಿರುವ ಶಾಸಕರಿಗೆ ಪ್ರದೇಶಾಭಿವೃದ್ಧಿ ನಿಧಿಯ 2 ಕೋಟಿ ರೂ. ವೆಚ್ಚ ಮಾಡಿಸುವುದು ಕಷ್ಟವೇ ಎಂದು ಪ್ರಶ್ನಿಸುವ ಶಾಸಕರು, ಈ ನಿಧಿ ಬಳಸಲು ಇರುವ ನೂರೆಂಟು ನಿಬಂಧನೆಗಳು, ಸಮಯಕ್ಕೆ ಸರಿಯಾಗಿ ಹಣ ಬಿಡುಗಡೆಯಾಗದೇ ಇರುವುದು, ಅನುದಾನ ಬಿಡುಗಡೆಯ ಜವಾಬ್ದಾರಿ ಜಿಲ್ಲಾಧಿಕಾರಿಗಳೇ ಹೊಂದಿರುವುದರಿಂದ ಆಗುತ್ತಿರುವ ವಿಳಂಬವೇ ಆಯಾ ವರ್ಷದ ಶಾಸಕರ ನಿಧಿ ಪೂರ್ಣ ಪ್ರಮಾಣದಲ್ಲಿ ಬಳಕೆ ಯಾಗದಿರಲು ಕಾರಣ ಎಂದು ಹೇಳುತ್ತಾರೆ. ಆದ್ದರಿಂದ ಸರ್ಕಾರ ಶಾಸಕರ ನಿಧಿ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ ಎಂದು ಮೊತ್ತ
ಕಡಿಮೆಗೊಳಿಸುವ ಬದಲು ಇರುವ ಲೋಪಗಳನ್ನು ಸರಿಪಡಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ 2 ಕೋಟಿ ರೂ. ಒಂದೇ ಕಂತಿನಲ್ಲಿ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು. ಈ ರೀತಿ ಮಾಡಿದರೆ ಅನುದಾನ ಪೂರ್ಣಪ್ರಮಾಣ ದಲ್ಲಿ ಬಳಕೆಯಾಗಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಡುತ್ತಾರೆ.

ಸಮಸ್ಯೆಗಳೇನು?: ಶಾಸಕರ ನಿಧಿ ಬಳಸುವಾಗ ಇಂತಹ ಇಲಾಖೆಗೆ ಇಂತಿಷ್ಟು ಹಣ ನೀಡಬೇಕು ಎಂಬ ನಿಯಮವಿದೆ. ಅದರಂತೆ ಶಿಕ್ಷಣ ಇಲಾಖೆಯ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ 30 ಲಕ್ಷ ಬಳಸಲು ಅವಕಾಶವಿದ್ದರೆ ಅದನ್ನು ಕ್ಷೇತ್ರದಲ್ಲಿರುವ ಸಾಕಷ್ಟು ಶಾಲೆಗಳಿಗೆ ಹಂಚಿಕೆ ಮಾಡಬೇಕು. ಉದಾಹರಣೆಗೆ ಆರು ಶಾಲೆಗಳಲ್ಲಿ ಹೊಸ ಕೊಠಡಿ ನಿರ್ಮಾಣಕ್ಕೆ ಬೇಡಿಕೆ ಇದೆ ಎಂದಾದರೆ ಶಾಸಕರ ನಿಧಿಯಿಂದ ಒಂದು ಕೊಠಡಿಗೆ 5 ಲಕ್ಷ ರೂ. ನೀಡಲು ಸಾಧ್ಯವಾಗುತ್ತದೆ. ಅದರಂತೆ ಒಂದು ಕೊಠಡಿಗೆ 5 ಲಕ್ಷ ರೂ.ನಂತೆ ಐದು ಶಾಲಾ ಕೊಠಡಿಗಳಿಗೆ ಹಣ ಹಂಚಿಕೆ ಮಾಡಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಆದರೆ, ಒಂದು ಕೊಠಡಿ ನಿರ್ಮಾಣಕ್ಕೆ 15 ಲಕ್ಷ ರೂ. ಬೇಕು ಎಂದಾದರೆ ಆ ಪ್ರಸ್ತಾವನೆಯನ್ನು ವಾಪಸ್‌ ಕಳುಹಿಸಿ, ಉಳಿದ 10 ಲಕ್ಷವನ್ನು ಎಲ್ಲಿಂದ
ಹೊಂದಾಣಿಕೆ ಮಾಡುತ್ತೀರಿ ಎಂಬ ಬಗ್ಗೆ ತಿಳಿಸಿ ಎನ್ನುತ್ತಾರೆ. ಈ 10 ಲಕ್ಷ ರೂ. ನಾವು ಹೊಂದಾಣಿಕೆ ಮಾಡದೇ ಇದ್ದಲ್ಲಿ ಉಳಿದ 5 ಲಕ್ಷ
ಬಿಡುಗಡೆಯಾಗುವುದಿಲ್ಲ. ಇಂತಹ ಸಮಸ್ಯೆಗಳಿರುವಾಗ ಅನುದಾನ ಬಳಕೆ ಹೇಗೆ ಎನ್ನುವುದು ಬಿಜೆಪಿ ಶಾಸಕ ಸುನೀಲ್‌ಕುಮಾರ್‌
ಅವರ ಪ್ರಶ್ನೆ. 

ಕಾಂಗ್ರೆಸ್‌ ಶಾಸಕ ಶಿವರಾಮ ಹೆಬ್ಟಾರ್‌ ಮತ್ತು ಜೆಡಿಎಸ್‌ನ ಶಿವಲಿಂಗೇಗೌಡ ಅವರು ಮತ್ತೂಂದು ಸಮಸ್ಯೆ ಬಿಚ್ಚಿಡುತ್ತಾರೆ. ಯಾವುದೇ ಕಾಮಗಾರಿ ನಡೆಸಲು ಆ ಕುರಿತು ಶಾಸಕರು ಡಿಸಿಗಳಿಗೆ ಪತ್ರ ಬರೆಯಬೇಕು. ಪತ್ರ ಆಧರಿಸಿ ಜಿಲ್ಲಾಧಿಕಾರಿಗಳು ಪರಿಶೀಲನಾ ಪಟ್ಟಿ ಕಳುಹಿಸುವಂತೆ ಸೂಚಿಸುತ್ತಾರೆ. ಪರಿಶೀಲನಾ ಪಟ್ಟಿ ಜಿಲ್ಲಾಧಿಕಾರಿಗೆ ಒಪ್ಪಿಗೆಯಾದರೆ ಅಂದಾಜು ಪಟ್ಟಿ ಕೇಳುತ್ತಾರೆ. ಅದನ್ನು ಕಳುಹಿಸಿದ ಮೇಲೆ ಮಾರ್ಗಸೂಚಿಯಂತೆ ಇದ್ದರೆ ನಂತರ ಟೆಂಡರ್‌ ಪ್ರಕ್ರಿಯೆ ಆರಂಭವಾಗುತ್ತದೆ. ಟೆಂಡರ್‌ ಒಪ್ಪಿಗೆಯಾಗಿ ಕಾಮಗಾರಿ ಆರಂಭವಾದಾಗ ಕಾಮಗಾರಿಯ ಒಟ್ಟು ಮೊತ್ತದ ಶೇ.75ರಷ್ಟು ಹಣ ಬಿಡುಗಡೆ ಮಾಡಲಾಗುತ್ತದೆ. ಕೆಲಸ ಮುಗಿದು ಬಳಕೆ ಪ್ರಮಾಣ ಸಲ್ಲಿಸಿದ ಬಳಿಕ ಉಳಿದ ಶೇ. 25ರಷ್ಟು ಮೊತ್ತ ಬಿಡುಗಡೆಯಾಗುತ್ತದೆ. ಹೀಗಾಗಿ ಬಹುತೇಕ ಕಟ್ಟಡ ಕಾಮಗಾರಿಗಳು ಆಯಾ ವರ್ಷ
ಮುಗಿಯುವುದಿಲ್ಲ. ಮುಗಿದರೂ ಅಂತಿಮ ಬಿಲ್‌ ಪಾವತಿ ಆಗದ ಕಾರಣ ಹಣ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಉಳಿದಿರುತ್ತದೆ. ಹೀಗಿರುವಾಗ ಶಾಸಕರ ನಿಧಿ ಆಯಾ ವರ್ಷ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ ಎಂದು ಹೇಳಿದರೆ ಹೇಗೆ ಎಂದು ಪ್ರಶ್ನಿಸುತ್ತಾರೆ.

ಕಾಂಗ್ರೆಸ್‌ ಶಾಸಕ ಎನ್‌.ವೈ.ಗೋಪಾಲಕೃಷ್ಣ ಅವರು ಹೇಳುವುದು ಹೀಗೆ: ಜನರಿಂದ ಬರುವ ಬೇಡಿಕೆಗಳನ್ನು ಆಧರಿಸಿ ಶಾಸಕರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಇಂತಹ ಕಾಮಗಾರಿಗೆ ಇಂತಿಷ್ಟು ಹಣ ಬಿಡುಗಡೆ ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುತ್ತಾರೆ. ಮಾರ್ಗಸೂಚಿ ಅನ್ವಯ ಕೆಲವು ಕಾಮಗಾರಿಗಳಿಗೆ ಅವಕಾಶ ಇಲ್ಲ. ಇಂತಹ ಪ್ರಸ್ತಾವನೆಗಳು ತಿರಸ್ಕೃತವಾಗುತ್ತವೆ. ಶಾಸಕರು ಅದನ್ನು ಗಮನಿಸಿ ಬೇರೆ ಯೋಜನೆ ರೂಪಿಸದಿದ್ದರೆ ಹಣ ಜಿಲ್ಲಾಧಿಕಾರಿಗಳ ಬಳಿಯೇ ಉಳಿಯುತ್ತದೆ. ಇದಲ್ಲದೆ ನಿಧಾನಗತಿಯಲ್ಲಿ ನಡೆಯುವ ಕೆಲವು ಕಾಮಗಾರಿಗಳ ವೆಚ್ಚ ಮುಂದಿನ ವರ್ಷಕ್ಕೆ ಏರಿಕೆಯಾಗಿರುತ್ತದೆ. ಆದರೆ, ಮೊದಲೇ ದರ ನಿಗದಿಪಡಿಸಿ ಶೇ. 75ರಷ್ಟು ಹಣ ನೀಡಿದ್ದರಿಂದ ಏರಿಕೆಯಾದ ನಿರ್ಮಾಣ ವೆಚ್ಚಕ್ಕೆ ತಕ್ಕಂತೆ ಯೋಜನಾ ವೆಚ್ಚ ಹೆಚ್ಚಿಸಲು ಅವಕಾಶವಿಲ್ಲ. ಇದರಿಂದ ಗುತ್ತಿಗೆದಾರರು ಬಿಡುಗಡೆಯಾದ ಹಣಕ್ಕಷ್ಟೇ ಕೆಲಸ ಮಾಡುತ್ತಾರೆ. ಇದರಿಂದ ಕಾಮಗಾರಿ ಅರೆಬರೆಯಾಗಿ ಬಳಕೆ ಪ್ರಮಾಣ ಪತ್ರ ನೀಡಲು ಸಾಧ್ಯವಾಗುವುದಿಲ್ಲ. ಈ ಪತ್ರ ನೀಡದೆ ಜಿಲ್ಲಾಧಿಕಾರಿಗಳು ಹಣ ಬಿಡುಗಡೆ ಮಾಡದೆ ಆ ಮೊತ್ತ ಅಲ್ಲೇ ಉಳಿಯುತ್ತದೆ. 

Advertisement

ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಬೇಕು ಎಂದಾದರೆ ನಿಯಮಾವಳಿಗಳನ್ನು ಇನ್ನಷ್ಟು 
ಸರಳೀಕರಣಗೊಳಿಸಬೇಕು. ಅನಗತ್ಯ ನಿಬಂಧನೆಗಳನ್ನು ತೆಗೆದುಹಾಕಬೇಕು. ಜಿಲ್ಲಾಧಿಕಾರಿಗಳ ಬಳಿಯೇ ಕೇಂದ್ರೀಕೃತವಾಗಿರುವ ಹಣ ಬಿಡುಗಡೆ ಜವಾಬ್ದಾರಿಯನ್ನು ವಿಕೇಂದ್ರೀಕರಣಗೊಳಿಸಿ ತಹಸೀಲ್ದಾರ್‌ಗೆ ನೀಡಬೇಕು.

 ● ಶಿವರಾಮ್‌ ಹೆಬ್ಟಾರ್‌, ಕಾಂಗ್ರೆಸ್‌ ಶಾಸಕ

ಕಾಮಗಾರಿ ಆರಂಭಿಸುವಾಗ ಶೇ.75ರಷ್ಟು ಹಣ ಬಿಡುಗಡೆ ಮಾಡಿ ಕೆಲಸ ಮುಗಿಸಿ ಹಣ ಬಳಕೆ ಪ್ರಮಾಣಪತ್ರ ನೀಡಿದ ಬಳಿಕ
ಉಳಿದ ಮೊತ್ತ ಬಿಡುಗಡೆ ಮಾಡಲಾಗುತ್ತದೆ. ಈ ಪ್ರಕ್ರಿಯೆ ವಿಳಂಬವಾಗುವುದರಿಂದ ಬಾಕಿ ಇದ್ದ ಶೇ. 25ರಷ್ಟನ್ನು ಬಳಸಿಕೊಂಡಿಲ್ಲ ಎನ್ನಲಾಗುತ್ತಿದೆ. ಇದು ಶಾಸಕರ ತಪ್ಪೇ?

 ● ಶಿವಲಿಂಗೇಗೌಡ, ಜೆಡಿಎಸ್‌ ಶಾಸಕ

ಸಣ್ಣಪುಟ್ಟ ಕಾನೂನು ತೊಡಕುಗಳನ್ನು ಅಧಿಕಾರಿಗಳು ದೊಡ್ಡ ಮಟ್ಟದಲ್ಲಿ ಪ್ರತಿಪಾದಿಸುತ್ತಿರುವುದು, ಬಿಲ್‌ ಪಾವತಿಗಿರುವ ನೂರೆಂಟು
ನಿಬಂಧನೆಗಳು ಮುಂತಾದ ಕಾರಣಗಳಿಂದ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಆಯಾ ವರ್ಷವೇ ಪೂರ್ಣ ಪ್ರಮಾಣದಲ್ಲಿ
ಬಳಕೆಯಾಗುತ್ತಿಲ್ಲ. ಇದರಲ್ಲಿ ಶಾಸಕರಿಂದ ಲೋಪವಿಲ್ಲ.

 ● ಸುನೀಲ್‌ ಕುಮಾರ್‌, ಬಿಜೆಪಿ ಶಾಸಕ

ಶಾಸಕರ ನಿಧಿ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ ಎನ್ನುವ ಮೊದಲು ಯಾವ  ಉದ್ದೇಶದಿಂದ ಅದು ಉಳಿದುಕೊಂಡಿದೆ ಎಂಬ ಬಗ್ಗೆ ಸರ್ಕಾರ ಜಿಲ್ಲಾಧಿಕಾರಿಗಳಿಂದ ಮಾಹಿತಿ ತರಿಸಿಕೊಳ್ಳಬೇಕು. ಇರುವ ಲೋಪ ಗಳನ್ನು ಸರಿಪಡಿಸಬೇಕು. ನಂತರವೂ ಬಳಕೆಯಾಗದಿದ್ದರೆ ಅದು ಶಾಸಕರ ತಪ್ಪು. 
 ● ಎನ್‌.ವೈ.ಗೋಪಾಲಕೃಷ್ಣ, ಕಾಂಗ್ರೆಸ್‌ ಶಾಸಕ

ಗ್ರಾಮೀಣ ಭಾಗದ ಬಹುತೇಕ ಶಾಸಕರು ಪ್ರದೇಶಾಭಿವೃದ್ಧಿ ನಿಧಿಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಾರೆ. ಬಿಲ್‌  ಮಾಡುವುದು ವಿಳಂಬವಾಗಿರಬಹುದಷ್ಟೆ. ನಗರ ಪ್ರದೇಶಗಳಲ್ಲಿ ಅಂತಹ ಸಮಸ್ಯೆ ಇರಬಹುದು. ಅದಕ್ಕೆ ಕಾರಣಗಳನ್ನು ಹುಡುಕಿ ಸರಿಪಡಿಸಬೇಕು. 
ವೈ.ಎಸ್‌.ವಿ.ದತ್ತ, ಜೆಡಿಎಸ್‌ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next