ಚಿತ್ರದುರ್ಗ: ವೀಕೆಂಡ್ ಲಾಕ್‌ಡೌನ್‌ಗೆ ದುರ್ಗದ ಜನತೆ ಸಂಪೂರ್ಣ ಬೆಂಬಲ ನೀಡಿದರು. ಈಗಾಗಲೇ ತಿಂಗಳ ಕಾಲ ಮನೆಯಲ್ಲೇ ಇದ್ದು ಅಭ್ಯಾಸವಾಗಿರುವ ಜನತೆ ಭಾನುವಾರವೂ ಹೊರ ಬಾರದೆ ಸಹಕಾರ ನೀಡಿದರು. ನಗರದ ಬಹುತೇಕ ಎಲ್ಲಾ ರಸ್ತೆಗಳೂ ಬಿಕೋ ಎನ್ನುತ್ತಿದ್ದವು.
ಒಂದು ವಾರದಿಂದ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕೂಡ ಸಂಪೂರ್ಣ ಖಾಲಿಯಾಗಿತ್ತು. ಈ ಹಿಂದೆ ಸರ್ಕಾರ ಲಾಕ್‌ಡೌನ್ ಮಾಡಿ ಮನೆಯಲ್ಲೇ ಇರಿ ಎಂದರೂ ಜನ ಕುತೂಹಲಕ್ಕಾಗಿಯಾದರೂ ಮನೆಯಿಂದ ಹೊರಗೆ ಬರುತ್ತಿದ್ದರು. ಆದರೆ ಈಗ ಜನರಿಗೆ ಲಾಕ್‌ಡೌನ್ ಅಭ್ಯಾಸವಾಗಿದೆ ಎನ್ನುವುದು ಭಾನುವಾರದ ಲಾಕ್‌ಡೌನ್ ನಿಂದ ಗೊತ್ತಾಗುತ್ತಿತ್ತು. ಖುದ್ದು ಪೊಲೀಸರೇ ಬೀದಿಗಳಿದು ಅಂಗಡಿ ಮುಂಗಟ್ಟುಗಳ ಬಾಗಿಲು ಹಾಕಿಸುವುದು, ಜನರನ್ನು ಮನೆಗೆ ಕಳುಹಿಸುವುದು ಮಾಡಬೇಕಿತ್ತು. ಆದರೆ ಈಗ ಜನರು ಸ್ವಯಂಪ್ರೇರಿತರಾಗಿ ಸರ್ಕಾರದ ಆದೇಶವನ್ನು ಪಾಲಿಸುತ್ತಿದ್ದಾರೆ.
ಕೋವಿಡ್-19 ನಿಯಂತ್ರಣದ ಹಿನ್ನಲೆಯಲ್ಲಿ ಸರ್ಕಾರ ಪ್ರತಿ ಭಾನುವಾರ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದ್ದು, ಮೇ 24 ಮತ್ತು 31 ರಂದು ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ಸಂಪೂರ್ಣ ಲಾಕ್‌ಡೌನ್ ಇರುತ್ತದೆ. ತುರ್ತು ಆರೋಗ್ಯ ಸೇವೆಗಳಾದ ಮೆಡಿಕಲ್ ಸ್ಟೋರ್, ಆಸ್ಪತ್ರೆ, ಅಗ್ನಿಶಾಮಕದಳ ಸೇವೆ ಇರಲಿದ್ದು, ಶವಸಂಸ್ಕಾರಕ್ಕೆ ಮಾತ್ರ ವಿನಾಯಿತಿ ನೀಡಿ ಸಂಪೂರ್ಣವಾಗಿ ಸಾರ್ವಜನಿಕ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಮೇ 23 ರಂದು ರಾತ್ರಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಆನಂತರ ತರಕಾರಿ, ಮಾಂಸ, ಬೇಕರಿ ವ್ಯಾಪಾರಕ್ಕೆ ಅವಕಾಶ ನೀಡಿ ಮತ್ತೂಂದು ಪರಿಸ್ಕೃತ ಆದೇಶ ಹೊರಡಿಸಿದರು. ಇದು ಕೆಲ ವ್ಯಾಪಾರಿಗಳಿಗೆ ಗೊಂದಲ ಮೂಡಿಸಿತು.
ವಾಕಿಂಗ್ ಮಾಡಿದ್ರು! : ಲಾಕ್‌ಡೌನ್ ಆದೇಶವಿದ್ದರೂ ನಗರದ ಹಲವು ಪಾರ್ಕ್ ಹಾಗೂ ಹೊರವಲಯದ ರಸ್ತೆಗಳಲ್ಲಿ ಬಹುತೇಕರು ಎಂದಿನಂತೆ ವಾಕಿಂಗ್, ಜಾಗಿಂಗ್ ಮಾಡಲು ಬಂದಿದ್ದರು. ಜಿಲ್ಲಾಡಳಿತ ಸಂಪೂರ್ಣ ಲಾಕ್‌ಡೌನ್ ಎಂದು ಸೂಚಿಸಿದ್ದರೂ ವಾಕ್ ಮಾಡುವವರು ಮಾತ್ರ ಇದಕ್ಕೆ ತಲೆಕೆಡಿಸಿಕೊಂಡಂತೆ ಕಾಣಲಿಲ್ಲ.
ಬೈಕ್ ಸವಾರರಿಗೆ ಎಚ್ಚರಿಕೆ : ನಗರದ ಗಾಂಧಿ ವೃತ್ತದಲ್ಲಿ ಬೈಕ್ ಸವಾರರು ಅನಗತ್ಯವಾಗಿ ಸಂಚರಿಸುವ ಒಂದಿಷ್ಟು ಪ್ರಕರಣಗಳು ಕಂಡು ಬಂದವು. ಈ ವೇಳೆ ಪೊಲೀಸರು ಬೈಕ್‌ನಲ್ಲಿ ಓಡಾಡುತ್ತಿದ್ದವರನ್ನು ತಡೆದು ಮತ್ತೆ ಬರಬಾರದೆಂದು ಎಚ್ಚರಿಕೆ ನೀಡಿದರು. ನಗರವನ್ನು ಸಂಪರ್ಕಿಸುವ ಎಲ್ಲ ಪ್ರಮುಖ ರಸ್ತೆಗಳಲ್ಲೂ ಬ್ಯಾರಿಕೇಡ್ ಹಾಕಲಾಗಿತ್ತು. ಹೊರಗಿನಿಂದ ಯಾರೂ ಒಳಗೆ ಬರುವುದಾಗಲೀ ಅಥವಾ ಒಳಗಿನಿಂದ ಹೊರಗೆ ಬರುವುದಾಗಲೀ ಬೇಡ ಎಂಬ ಕಾರಣಕ್ಕೆ ಪೊಲೀಸರು ಕಟ್ಟುನಿಟ್ಟಿನ ಬಂದೋಬಸ್ತ್ ಮಾಡಿದ್ದರು.