ಬೆಂಗಳೂರು: ಬಿಬಿಎಂಪಿಗೆ ತನ್ನ ಆದಾಯ ಮೂಲಗಳನ್ನು ಹೆಚ್ಚಿಸಿಕೊಳ್ಳಲು ಸಂಪೂರ್ಣ ಬೆಂಬಲ ನೀಡಿದ್ದು, ಯಾವುದೇ ಉಪಕರ ಸಂಗ್ರಹಿಸುವ ಮೊದಲು ಅದರ ಸಾಧಕ-ಬಾಧಕ ಪರಿಶೀಲಿಸಿ ಪಾಲಿಕೆ ಅಗತ್ಯ ಕ್ರಮಕೈಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿಯೂ ಆದ ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಬಿಬಿಎಂಪಿ ವತಿಯಿಂದ ಪಶ್ವಮ ಕಾರ್ಡ್ ರಸ್ತೆ ಮಂಜುನಾಥ ನಗರ ಜಂಕ್ಷನ್‌ನಲ್ಲಿ ನಿರ್ಮಿಸಿರುವ ಮೇಲ್ಸೇತುವೆ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆಗೆ ತನ್ನ ಆದಾಯ ಹೆಚ್ಚಿಸಿಕೊಳ್ಳಲು ಅಗತ್ಯವಾದ ಎಲ್ಲ ಸಹಕಾರ ಸಿದ್ದವಿದ್ದು, ಕಾನೂನಿಗೆ ವಿರುದ್ಧವಾದ ತೀರ್ಮಾನಗಳನ್ನು ಕೈಗೊಂಡಾಗ ಸರ್ಕಾರ ಮಧ್ಯ ಪ್ರವೇಶ ಮಾಡಲಿದೆ ಎಂದರು.
ಇದರೊಂದಿಗೆ ನ್ಯಾಯಾಲಯದ ನಿರ್ದೇಶನದಂತೆ ನಗರದಲ್ಲಿ ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಲಾಗಿದ್ದು, ವ್ಯವಸ್ಥಿತ ಜಾಹೀರಾತು ಪ್ರದರ್ಶನಕ್ಕಾಗಿ “ನೂತನ ಜಾಹೀರಾತು ನೀತಿ’ ಅನುಷ್ಠಾನಗೊಳಿಸಲಾಗುತ್ತಿದೆ. ಜತೆಗೆ ಅನಧಿಕೃತವಾಗಿ ಎಲ್ಲೆಂದರಲ್ಲಿ ಹಾಕಲಾಗಿದ್ದ ಒಎಫ್ಸಿ ಕೇಬಲ್‌ಗಳನ್ನು ತೆರವುಗೊಳಿಸಿದ್ದು, ತ್ಯಾಜ್ಯ ಗುತ್ತಿಗೆದಾರರ ಸಮಸ್ಯೆ ನಿವಾರಣೆ ಮಾಡಲಾಗಿದೆ ಎಂದು ಹೇಳಿದರು.
ಬಿಬಿಎಂಪಿ ಟೆಂಡರ್ ಕರೆಯುವ ವೇಳೆ ಕಾಮಗಾರಿ ಪೂರ್ಣಗೊಳಿಸಲು ದಿನಾಂಕ ನಿಗದಿ ಪಡಿಸುತ್ತದೆ. ಒಂದೊಮ್ಮೆ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಗುತ್ತಿಗೆದಾರರಿಗೆ ದಂಡ ಹಾಕಬಹುದಾಗಿದೆ. ಹೀಗಾಗಿ ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಕಳೆದ ಐದು ವರ್ಷದಲ್ಲಿ ಸರ್ಕಾರದಿಂದ ಬಿಬಿಎಂಪಿಗೆ 15 ಸಾವಿರ ಕೋಟಿ ರೂ. ಅನುದಾನ ನೀಡಲಾಗಿದೆ. ಆದರೂ ಸಾಕಷ್ಟು ಸಿಗ್ನಲ್ ಫ್ರಿ ಕಾರಿಡಾರ್, ಕೆಳ ಸೇತುವೆ ನಿರ್ಮಾಣ ಬಾಕಿಯಿವೆ ಎಂದು ಹೇಳಿದರು. ಈ ವೇಳೆ ಮೇಯರ್ ಸಂಪತ್ ರಾಜ್, ಶಾಸಕ ಸುರೇಶ್ ಕುಮಾರ್, ಆಯುಕ್ತ ಮಂಜುನಾಥ್ ಪ್ರಸಾದ್, ಮಾಜಿ ಮೇಯರ್ ಜಿ.ಪದ್ಮಾವತಿ ಸೇರಿದಂತೆ ಪ್ರಮುಖರು ಹಾಜರಿದ್ದರು.