ಉಡುಪಿ: ಉಡುಪಿಯಲ್ಲಿ ಜಿಟಿಜಿಟಿ ಮಳೆ ಮುಂದುವರಿದಿದೆ. ಗುರುವಾರ ದಿನವಿಡೀ ನೀರಧಾರೆ ಇಳಿಯುತ್ತಲೇ ಇತ್ತು. ಅಪರಾಹ್ನ ಮಳೆ ಸ್ವಲ್ಪ ಇಳಿಮುಖಗೊಂಡಿತ್ತು. ಉಡುಪಿ ಮತ್ತು ಸುತ್ತಮುತ್ತ ಹದವಾಗಿ ಸುರಿದ ಮಳೆ ಚಳಿಯ ವಾತಾವರಣ ಸೃಷ್ಟಿಸಿದೆ. ವಿಂಡೋ ಗ್ಲಾಸ್ ಗಳನ್ನು ಹೊಂದದ ಸಿಟಿಬಸ್ ಗಳು ಟಾರ್ಪಾಲ್ ಗಳನ್ನು ಬಿಡಿಸಿಕೊಳ್ಳುವುದು, ರೈನ್ ಕೋಟ್ ಗಳನ್ನು ಇನ್ನೂ ಕೂಡ ಖರೀದಿ ಮಾಡದ ಸವಾರರು ಬೇರೆ ದಾರಿ ಕಾಣದೆ ರೈನಕೋಟ್ ಗಳ ಖರೀದಿಯಲ್ಲಿ ತೊಡಗಿದ ಸನ್ನಿವೇಶಗಳು ಕಂಡುಬಂದವು. ನಗರದಲ್ಲಿ ಜನರ ಓಡಾಟ ಕಡಿಮೆಯಾದ ಪರಿಣಾಮ ಆಟೋ, ಟ್ಯಾಕ್ಸಿ ಚಾಲಕರು ಬಾಡಿಗೆದಾರರ ಕೊರತೆ ಅನುಭವಿಸಿದರು. ಉಡುಪಿ ಸಿಟಿ ಬಸ್ ನಿಲ್ದಾಣದ ಎದುರು ಕಾರ್ಕಳ, ಹೆಬ್ರಿ ಕಡೆಗೆ ಹೋಗುವ ಬಸ್‌ಗಳು ನಿಲ್ಲುವ ಸ್ಥಳದಲ್ಲಿ ಹಲವಾರು ಮಂದಿ ಕೊಡೆ ಹಿಡಿದುಕೊಂಡು ಬಸ್‌ಗಾಗಿ ನಿಲ್ಲುವ ಸ್ಥಿತಿ ಈ ಬಾರಿಯೂ ಉಂಟಾಗಿದೆ. ಇದು ಅಧಿಕೃತ ನಿಲುಗಡೆ ಸ್ಥಳವಲ್ಲ. ಆದರೂ ಇದು ಪ್ರಯಾಣಿಕರಿಗೆ ‘ಅನಿವಾರ್ಯ’ ಎನ್ನುವಂತಾಗಿದೆ. ಇಲ್ಲವೆಂದಾದರೆ ಇಲ್ಲಿನ ಪ್ರಯಾಣಿಕರು ಸರ್ವೀಸ್ ಬಸ್ ನಿಲ್ದಾಣಕ್ಕೆ ತೆರಳಿ ಬಸ್ ಹತ್ತಬೇಕಾಗುತ್ತದೆ. ಪ್ರಯಾಣಿಕರ ಬೇಡಿಕೆಯಂತೆ ಬಸ್ ಗಳನ್ನು ನಿಲ್ಲಿಸಲಾಗುತ್ತದೆ. ಆದರೆ ಮಳೆಗಾಲಕ್ಕೆ ಇಲ್ಲಿ ಬಸ್ ಗಾಗಿ ಕಾಯುವುದು ಪ್ರಯಾಣಿಕರ ಪಾಲಿನ ಕಷ್ಟ. ಬಸ್ ಗಳನ್ನು ನಿಲ್ಲಿಸಿದರೆ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ. ಬ್ರಹ್ಮಗಿರಿ – ಕಿನ್ನಿಮೂಲ್ಕಿ ರಸ್ತೆಯ ಅಜ್ಜರಕಾಡು ಅಬಕಾರಿ ಭವನದ ಎದುರು ಅಸಮರ್ಪಕ ಚರಂಡಿಯಿಂದಾಗಿ ಗುರುವಾರ ಮಳೆನೀರು ರಸ್ತೆಯಲ್ಲಿ ತುಂಬಿ ಹೋಯಿತು. ಕಿನ್ನಿಮೂಲ್ಕಿ ಜೋಡುಕಟ್ಟೆ ಬಳಿ ರಸ್ತೆಗೆ ಮಳೆನೀರು ನುಗ್ಗುವ ಸ್ಥಳದಲ್ಲಿ ಎಚ್ಚರಿಕಾ ಕ್ರಮವಾಗಿ ಬ್ಯಾರಿಕೇಡ್ ಅಳವಡಿಸಲಾಗಿದೆ.
ಶುಭ ಸಮಾರಂಭಗಳಿಗೂ ನಿರುತ್ಸಾಹ !
ನಗರ ಮತ್ತು ಆಸುಪಾಸಿನ ವಿವಿಧ ಸಭಾಂಗಣಗಳಲ್ಲಿ ಮದುವೆ ಮತ್ತಿತರ ಶುಭಸಮಾರಂಭಗಳು ಗುರುವಾರ ಹೆಚ್ಚಿನ ಪ್ರಮಾಣದಲ್ಲಿ ನಿಗದಿಯಾಗಿದ್ದವು. ನಿಗದಿಯಂತೆಯೇ ಸಮಾರಂಭಗಳು ನಡೆದಿವೆಯಾದರೂ ಹಾಜರಾತಿ ನಿರೀಕ್ಷಿತ ಪ್ರಮಾಣದಲ್ಲಿರಲಿಲ್ಲ. ಸಮಾರಂಭಕ್ಕೆ ಆಗಮಿಸಿದ ಜನತೆಯೂ ಮಳೆಯಿಂದ ಪರದಾಡುವಂತಾಯಿತು. ಕೆಲವು ರಸ್ತೆ ಗಳಲ್ಲಿ ವಾಹನಗಳ ದಟ್ಟಣೆ ಉಂಟಾಗಿ ಪಾದಚಾರಿಗಳಿಗೂ ತಡೆಯಾಯಿತು.
ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ತಾಸುಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 77.43 ಮಿ.ಮೀ ಮಳೆಯಾಗಿದೆ.