ಹುನಗುಂದ: ತೊಗರಿ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಪುನಾರಂಭಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ನಡೆಸುತ್ತಿರುವ ಧರಣಿ ಸತ್ಯಾಗ್ರಹದ 8ನೇ ದಿನವಾದ ಸೋಮವಾರ ಉರುಳು ಸೇವೆ ಮೂಲಕ ಸರ್ಕಾರದ ಕಣ್ಣು ತೆರೆಸಲು ವಿನೂತನ ಪ್ರತಿಭಟನೆ ನಡೆಯಿತು.
ರೈತರ ಹೋರಾಟಕ್ಕೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಬೆಂಬಲ ಸೂಚಿಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ಮಸೂದೆಗಳನ್ನು ಜಾರಿಗೆ ತರುವ ಮೂಲಕ ಅನ್ನದಾತನನ್ನು ಹತ್ತಿಕ್ಕುವ ಕಾರ್ಯವಾಗುತ್ತಿದೆ. ಫೆ. 14ರಿಂದ ರೈತರು ತೊಗರಿ ಬೆಂಬಲ ಬೆಲೆ ಖರೀದಿ ಕೇಂದ್ರ ಮರಳಿ ಪ್ರಾರಂಭಿಸುವಂತೆ ಹೋರಾಟ ಮಾಡುತ್ತಿದ್ದರೂ ಸದನದಲ್ಲಿ ಗಟ್ಟಿತನದಿಂದ ಮಾತನಾಡಿ ರೈತರಿಗಾಗಿ ತೊಗರಿ ಬೆಂಬಲ ಬೆಲೆ ಕೇಂದ್ರ
ಪುನಾರಂಭಿಸುವಂತೆ ಒತ್ತಡ ಹೇರುವುದಾಗಲಿ ಇಲ್ಲ.
ಸದನದ ಬಾವಿಗಿಳಿದು ಪ್ರತಿಭಟಿಸುವ ಶಕ್ತಿ ಸ್ಥಳೀಯ ಶಾಸಕರಾಗಲಿ ಮತ್ತು ಬಾಗಲಕೋಟೆ ಜಿಲ್ಲೆಯ ಸಚಿವರಾಗಲಿ ಮಾಡಿಲ್ಲ ಎಂದು ಆರೋಪಿಸಿದರು. ಬೆಂಬಲ ಬೆಲೆ ಕೇಂದ್ರದಲ್ಲಿ ಗ್ರೇಡಿಂಗ್ ನೆಪದಲ್ಲಿ ಅಧಿಕಾರಿಗಳ ಮೂಲಕ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದು, ಇದು ಬಿಜೆಪಿ ಸರ್ಕಾರದ ನೈಜತೆ. ರೈತರಿಗೆ ನ್ಯಾಯ ಸಿಗುವವರೆಗೂ ನಾನು ರೈತರಿಗೆ ಬೆಂಬಲ ನೀಡಲು ಸಿದ್ಧ ಎಂದ ಅವರು, ಸರ್ಕಾರ ತಕ್ಷಣ ತೊಗರಿ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸದಿದ್ದರೆ ರೈತರೊಂದಿಗೆ ಪಾದಯಾತ್ರೆ ನಡೆಸಲು ಸಿದ್ಧ ಎಂದರು.
ರೈತ ಮುಖಂಡ ಅಮರೇಶ ನಾಗೂರ ತೊಗರಿ ಬೆಂಬಲ ಬೆಲೆ ಖರೀದಿ ಕೇಂದ್ರ ಪುನಾರಂಭಿಸುವಂತೆ ಕೆಇಬಿ ಗಣೇಶ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿಯವರಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಾ ಉರುಳು ಸೇವೆ ನಡೆಸಿದರು. ನಂತರ ಮಾತನಾಡಿದ ಅವರು, ಸರ್ಕಾರ 5230 ರೂ. ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ಆರಂಭಿಸಲು ಸೂಚನೆ ನೀಡಿದರೂ ತಾಲೂಕಿನಲ್ಲಿ ಇಲ್ಲಿವರೆಗೆ ಕಡಲೆ ಖರೀದಿ ಕೇಂದ್ರ ಆರಂಭವಾಗಿಲ್ಲ ಎಂದರು. ಈ ವೇಳೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ವಿ.ಮ. ಸರ್ಕಲ್‌ದಿಂದ ಪ್ರತಿಭಟನೆ ರ್ಯಾಲಿಯ ಮೂಲಕ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಮುಖಂಡ ವಿಜಯಮಹಾಂತೇಶ ಗದ್ದನಕೇರಿ, ರೈತ ಸಂಘದ ಜಿಲ್ಲಾ ಉಪಾದ್ಯಕ್ಷ ಶಶಿಕಾಂತ ಬಂಡರಗಲ್ಲ, ಕಾರ್ಯಾಧ್ಯಕ್ಷ ಗುರು ಗಾಣಗೇರ, ತಾಲೂಕಾಧ್ಯಕ್ಷ ಬಸವರಾಜ ಪೈಲ, ರಮಜಾನ್ ನದಾಫ್, ಬಸವರಾಜ ಧರ್ಮಂತಿ, ತಾಲೂಕಾಧ್ಯಕ್ಷ ಈರಣ್ಣ ಬಡಿಗೇರ, ಜಗದೀಶ ಬಸರಿಗಿಡದ, ರಾಜು ಬಡಿಗೇರ, ರಸೂಲಸಾಬ ತಹಶೀಲ್ದಾರ್, ಬಸವರಾಜ ಹೊಸಮನಿ ಸೇರಿದಂತೆ ಅನೇಕರು ಇದ್ದರು.