ಗುಳೇದಗುಡ್ಡ: ಪಟ್ಟಣದಲ್ಲಿ ನೇಕಾರರ ಗುಳೆ ತಪ್ಪಿಸಲು, ಉದ್ಯೋಗ ಸೃಷ್ಟಿಸಲು ಬಜೆಟ್ ನಲ್ಲಿ ಜವಳಿ ಪಾರ್ಕ್ ಹಾಗೂ ಗಾರ್ಮೆಂಟ್ಸ್ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಮುಖಂಡರಾದ ಹನುಮಂತ ಮಾವಿನಮರದ ಹಾಗೂ ನೇಕಾರ ನಿಯೋಗದ ಮುಖಂಡರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ನೇಕಾರರ ಸಂಪೂರ್ಣ ಸಾಲಮನ್ನಾ, ನೇಕಾರ ವೃತ್ತಿ ಮಾಡುವವರನ್ನು ಅಸಂಘಟಿತ ವಲಯದ ಕಾರ್ಮಿಕರೆಂದು ಘೋಷಿಸಬೇಕು, ಪಿಂಚಣಿ ಯೋಜನೆ ಜಾರಿ, ವಸ್ತ್ರ ಬ್ಯಾಂಕ್ ಸ್ಥಾಪನೆ, ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ನೇಕಾರ ಅಭಿವೃದ್ಧಿ ನಿಗಮ ಸ್ಥಾಪಿಸಿ ಅದಕ್ಕೆ ಆದ್ಯ ವಚನಕಾರ ದೇವರದಾಸಿಮಯ್ಯ ನೇಕಾರ ಅಭಿವೃದ್ಧಿ ನಿಗಮ ಎಂದು ನಾಮಕರಣ ಮಾಡಿ ಸುಮಾರು 100 ಕೋಟಿ ರೂ. ಅನುದಾನ ನೀಡುವ ಕುರಿತು 14 ಬೇಡಿಕೆ ಮುಂದಿಟ್ಟು ಮನವಿ ಸಲ್ಲಿಸಿದರು.
ನಿಯೋಗದ ಮನವಿ ಸ್ವೀಕರಿಸಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಜು.5 ರಂದು ರಾಜ್ಯ ಬಜೆಟ್ ದಲ್ಲಿ ಗುಳೇದಗುಡ್ಡಕ್ಕೆ ನೇಕಾರರ ಉದ್ಯೋಗ ಸೃಷ್ಟಿಗೆ ಜವಳಿಪಾರ್ಕ್ ಅಥವಾ ಜವಳಿ ಉದ್ದಿಮೆ ಕಾರ್ಯಕ್ರಮವನ್ನು ರೂಪಿಸುವ ಭರವಸೆ ನೀಡಿದರು. ನೇಕಾರರ ಸಮಸ್ಯೆಗಳ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇದೆ. ಬಜೆಟ್‌ದಲ್ಲಿ ನೇಕಾರರಿಗೆ ಸೂಕ್ತ ಅವಕಾಶ ಕಲ್ಪಿಸಲು ಯೋಜನೆ ಮಾಡುತ್ತೇನೆ. ಬಜೆಟ್ ಮುಗಿದ ಬಳಿಕ ಗುಳೇದಗುಡ್ಡ ನೇಕಾರ ಮುಖಂಡರನ್ನು ಕರೆಯಿಸಿ, ಅವರೊಂದಿಗೆ ಚರ್ಚಿಸಿ ಗುಳೇದಗುಡ್ಡ ನೇಕಾರರಿಗೆ ಉದ್ಯೋಗ ಸೃಷ್ಟಿಸುವ ಹಾಗೂ ಪೂರಕ ವೃತ್ತಿ ಯೋಜನೆ ಅನುಷ್ಠಾನಗೊಳಿಸುವ ಯೋಜನೆ ರೂಪಿಸುತ್ತೇನೆ ಎಂದರು.
ಮುಖಂಡರಾದ ಚಂದ್ರಕಾಂತ ಶೇಖಾ, ಶ್ರೀಕಾಂತ ಹುನಗುಂದ, ವಾಸಪ್ಪ ಕಾಳಿ, ಮೋಹನ ಮಲಜಿ, ಸಿದ್ದಬಸಪ್ಪ ಹೆಗಡಿ, ನಿಜಗುಣೆಪ್ಪ ಕೊಳ್ಳಿ, ರೇವಣಸಿದ್ದಪ್ಪ ರಂಜಣಗಿ, ಕೃಷ್ಣಾ ಹಾಸಿಲಕರ್, ವಿರೂಪಾಕ್ಷಪ್ಪ ಕೆಲೂಡಿ, ಸಿದ್ದಬಸಪ್ಪ ಕೆಲೂಡಿ, ಮಾಗುಂಡಪ್ಪ ಹಾನಾಪೂರ, ಪ್ರಕಾಶ ಕೋಟಿ, ಆನಂದ ಕೆರೂರ, ಮಂಜುನಾಥ ಕಲ್ಮಠ, ರಘು ಪತ್ತಾರ, ಮಂಜು ಪಾಟೀಲ, ಜಿ.ಟಿ. ಪಾಟೀಲ, ಆರ್.ಜಿ. ಕೊಣ್ಣೂರ, ಲಿಂಗರಾಜ ಕೊಣ್ಣೂರ, ರವಿ ಹಿರೇಮಠ, ಶಂಕರ ಲಕ್ಕುಂಡಿ, ಸಂಗಮೇಶ ತಿಪ್ಪಾ, ಎಸ್.ಟಿ. ಶಿರೂರ ಸೇರಿದಂತೆ ಕೆರೂರ, ಬಾದಾಮಿ ಹಾಗೂ ಗುಳೇದಗುಡ್ಡ ನೇಕಾರ ಮುಖಂಡರು ಪಾಲ್ಗೊಂಡಿದ್ದರು.