Advertisement

ನಗರಗಳಿಂದ ಹಳ್ಳಿಗಳಿಗೆ “ಗುಳೆ’ಹೋಗುವ ಕಾಲ!

03:35 PM Apr 18, 2017 | |

ಉಡುಪಿ: ಬಡವರು, ಕೂಲಿಕಾರ್ಮಿಕರು ಬರದ ಪರಿಣಾಮವಾಗಿ ಒಂದೂರಿನಿಂದ ಒಂದೂರಿಗೆ ವಲಸೆ ಹೋದರೆ ಅದನ್ನು ನಾವು “ಗುಳೆ ಹೋದರು’ ಎಂದು ಬರೆಯುತ್ತೇವೆ. ಈಗ ಇದೇ ಸಿರಿವಂತರ ಪಾಲಿಗೆ ಆಗಿದೆ. ನಂಬಿ ನಗರಕ್ಕೆ ಬಂದಿದ್ದಾರೆ…!

Advertisement

ಹಳ್ಳಿಗಳಲ್ಲಿ ಸಾಕಷ್ಟು ನೆಲ – ಜಲವನ್ನು ಹೊಂದಿಯೂ ಕೆಲವು ಕೊರತೆಗಳ ನೆಪದಲ್ಲಿ ನಗರಕ್ಕೆ ವಲಸೆ ಬಂದವರ ಪಾಡಿದು. ಇವರಲ್ಲಿ ಆ ನೆಲವನ್ನು ಮಾರಿ ಬಂದವರಿದ್ದಾರೆ, ಮಕ್ಕಳು ಹಣ ಕೊಟ್ಟರು ಎಂಬ ಕಾರಣಕ್ಕೆ ನಗರಕ್ಕೆ ಬಂದವರಿದ್ದಾರೆ. ನಗರದ ಜೀವನವನ್ನು “ಐಶಾರಾಮಿ’ ಎಂದು ತಾವೇ ಕಲ್ಪಿಸಿಕೊಂಡು ಬಂದವರು ಇದ್ದಾರೆ. ಒಂದು ಕಾರಣವಂತೂ ಸ್ಪಷ್ಟ. ಕರೆನ್ಸಿ ನೋಟುಗಳು ಬೇರೆ ಬೇರೆ ಕಾರಣಗಳಿಂದ ಹೆಚ್ಚು ಹೆಚ್ಚು ಉತ್ಪತ್ತಿಯಾಗಿ ಅದರಿಂದಲೇ ಎಲ್ಲವನ್ನೂ ಸಾಧಿಸಲು ಸಾಧ್ಯ ಎಂದು ನಂಬಿ ನಗರಕ್ಕೆ ಬಂದಿದ್ದಾರೆ. 

ಹವಾಮಾನ ಅಧೋಗತಿಗೆ
ಈಗ ಬೇಸಗೆ ಕಾಲ. ನಗರದ ಅಪಾರ್ಟ್‌ಮೆಂಟ್‌ಗಳಿಗೂ ನೀರಿನ ಬರ ಅಪ್ಪಳಿಸಿದೆ. ಅಪಾರ್ಟ್‌ಮೆಂಟುಗಳಿಗೆ ಸ್ಥಳೀಯ ಸಂಸ್ಥೆಗಳು ನೀರು ಪೂರೈಸುವುದಿಲ್ಲ. ಅಪಾರ್ಟ್‌ಮೆಂಟುಗಳ ಸ್ವಂತ ಜಲಮೂಲವನ್ನು ಹೊಂದಿರಬೇಕು ಎನ್ನುವ ಕಾನೂನೇ ಇದಕ್ಕೆ ಕಾರಣ. ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟುವಾಗ ಸಾಕಷ್ಟು ಜಲಮೂಲವನ್ನು ಸೃಷ್ಟಿಸುತ್ತಾರಾದರೂ ವರ್ಷದಿಂದ ವರ್ಷಕ್ಕೆ ಹವಾಮಾನ ಒಂದೇ ರೀತಿ ಇರುವುದಿಲ್ಲ ಎನ್ನುವುದಕ್ಕಿಂತ ವರ್ಷದಿಂದ ವರ್ಷಕ್ಕೆ ಹವಾಮಾನ ಅಧೋಗತಿಗೆ ಸಿಲುಕುತ್ತಿದೆ ಎಂದು ಹೇಳುವುದು ಸೂಕ್ತ. 

ನೀರಿನಲ್ಲಿ ಜಿಪುಣರಾಗಬೇಕು
ಹತ್ತು ವರ್ಷದ ಹಿಂದೆ ಸೃಷ್ಟಿಸಿದ ಜಲಮೂಲದ ಪ್ರಮಾಣ ಈಗ ಮತ್ತೆ ಮತ್ತೆ ಪಾತಾಳಕ್ಕೆ ಹೋಗುತ್ತಿದೆ. ವರ್ಷ ವರ್ಷವೂ ಜಲಮೂಲವನ್ನು ಬೇರೆ ಕೆಲವು ಕ್ಷೇತ್ರಗಳಲ್ಲಿ ಮಾಡಿದಂತೆ ಅಪ್‌ಗ್ರೇಡ್‌ ಮಾಡಲು ಅಸಾಧ್ಯ. ಇನ್ನೊಂದು ಸಮಸ್ಯೆ ಎಂದರೆ ಈಗ ಓನರ್‌ಶಿಪ್‌ ಮಾರಾಟ ಇರುವುದರಿಂದ ಅಪಾರ್ಟ್‌ಮೆಂಟ್‌ ಕಟ್ಟಿದವರು ನೀರಿನ ಸಮಸ್ಯೆಗೆ ಬಾಧ್ಯಸ್ಥರಲ್ಲ ಎಂಬ ವಾದವೂ ಹರಿಯುತ್ತಿದೆ. ಅಪಾರ್ಟ್‌ ಮೆಂಟುಗಳಲ್ಲಿರುವ ಮನೆಯವರು ಸೊಸೈಟಿ ಮಾಡಿಕೊಂಡು ತಮ್ಮ ಅಗತ್ಯಗಳನ್ನು ತಾವೇ ಪೂರೈಸಿಕೊಳ್ಳಬೇಕಾಗುತ್ತಿದೆ. ಇವರು ಹೊರ ಮೂಲಗಳಿಂದ ಹಣ ಕೊಟ್ಟು ಟ್ಯಾಂಕರ್‌ಗಳಲ್ಲಿ ನೀರು ತರಿಸಿಕೊಳ್ಳಬೇಕು. ಎಷ್ಟು ನೀರು ತಂದರೂ “ರಾವಣನ ಹೊಟ್ಟೆಗೆ ಕಾಸಿನ ಮಜ್ಜಿಗೆ’ ಎಂಬ ಸ್ಥಿತಿ ಇದೆ. ಇವರೋ ಐಶಾರಾಮಿ ಬದುಕಿನಲ್ಲಿ ಬದುಕುವವರು/ ಬದುಕಿದವರು. ಇವರಿಗೆ “ನೀರಿನಲ್ಲಿ ಜಿಪುಣರಾಗಬೇಕು’ ಎಂದು ಪಾಠ ಮಾಡಿದರೆ ಅರ್ಥವೇ ಆಗುವುದಿಲ್ಲ. ಒಂದು ಅಪಾರ್ಟ್‌ಮೆಂಟ್‌ನಲ್ಲಿ ಹಲವು ಮನೆಯವರು ಇರುವುದರಿಂದ ಒಬ್ಬರು ಜಿಪುಣರಾದರೆ ಸಾಕೆ? “ನಾವು ಮಾತ್ರ ಏಕೆ ನೀರನ್ನು ಕಡಿಮೆ ಖರ್ಚು ಮಾಡಬೇಕು’ ಎಂದು ಪ್ರಶ್ನಿಸಿ ಎಲ್ಲರೂ ಧಾರಾಳ ಖರ್ಚು ಮಾಡುತ್ತಾರೆ. 

ತಪ್ಪಾಗಿದ್ದರೆ ಒಪ್ಪಿಕೊಳ್ಳುವುದಿಲ್ಲ
ಇತ್ತೀಚಿಗೆ ಎಸೆಸೆಲ್ಸಿ, ಪಿಯುಸಿ ಪರೀಕ್ಷೆ ನಡೆಯುತ್ತಿದ್ದ ಕಾರಣ ಮಕ್ಕಳ ನಿರ್ವಹಣೆಗಾಗಿ ಫ್ಲ್ಯಾಟಿನವರು ಪರದಾಡಿದ್ದೇ ಪರದಾಡಿದ್ದು. ತಮ್ಮಿಂದಲೇ ತಪ್ಪಾಗಿದ್ದರೆ ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ಹೀಗಾಗಿ ನಿಜವನ್ನು ಬಹಿರಂಗಪಡಿಸದೆ ಒಬ್ಬೊಬ್ಬರು ಒಂದೊಂದು ಕಾರಣ ಹೇಳಿ ಅಪಾರ್ಟ್‌ಮೆಂಟ್‌ ಖಾಲಿ ಮಾಡಿ ಬೇರೆಡೆ ಹೋಗುತ್ತಿದ್ದಾರೆ. 

Advertisement

ಹತ್ತು ಬಾರಿ ಯೋಚಿಸಿ…!
ಹಳ್ಳಿಗಳಲ್ಲಿ ಸಾಕಷ್ಟು ಇರುವ ಜಾಗವನ್ನು ಕಡಿಮೆ ದರಕ್ಕೋ? ಬೇಡ ಎಂಬ ಕಾರಣಕ್ಕೋ ಮನಬಂದಂತೆ ಮಾರಿ ನಗರಕ್ಕೆ ವಲಸೆ ಬರುವವರು ಹತ್ತು ಬಾರಿ ಯೋಚಿಸಬೇಕಾಗಿದೆ. ಕೆಲವರು ಊರಿನ ಆಸ್ತಿಪಾಸ್ತಿಗಳನ್ನು ಮಾರದೆ ಅಲ್ಲಿ ಬರುವ ದ್ರವ್ಯವನ್ನು ಮಾತ್ರ ನಿರೀಕ್ಷಿಸುತ್ತ ನಗರದಲ್ಲಿ ಬಂದು ಕುಳಿತವರಿದ್ದಾರೆ. ಇನ್ನೂ ಕೆಲವು ಬುದ್ಧಿವಂತರು ಊರಿನಲ್ಲಿರುವ ತಮ್ಮ ಬಂಧು ಬಡವನಿಗೆ ತಮ್ಮ ಆಸ್ತಿಯನ್ನು ಬಿಟ್ಟುಕೊಡದೆ ಅದರ ಎಲ್ಲ ಮೌಲ್ಯವನ್ನೂ ಹೊತ್ತುಕೊಂಡು ನಗರದಲ್ಲಿ ಬೀಡುಬಿಟ್ಟವರಿದ್ದಾರೆ. ನಗರ ಜೀವನವೆಂದರೆ ಟಿವಿಗಳಲ್ಲಿ ಬರುವ  ಆಕರ್ಷಕ ಕಾಲ್ಪನಿಕ ಚಿತ್ರಣವನ್ನೇ ನಿಜ ಎಂದು ನಂಬಿ ಎಜುಕೇಟೆಡ್‌ಗಳೂ ಮೋಸಹೋಗುತ್ತಿದ್ದಾರೆ. ಆಧುನಿಕ ಸಮಾಜದಲ್ಲಿ ಪ್ರತಿಯೊಬ್ಬರೂ ಒಂದಲ್ಲೊಂದು ರೀತಿಯಲ್ಲಿ “ಗ್ರಾಹಕರೇ’. ಗ್ರಾಹಕ ವೇದಿಕೆಗಳು ಎಷ್ಟೇ ಹುಟ್ಟಿಕೊಂಡರೂ ಗ್ರಾಹಕರನ್ನು ಮೋಸ ಮಾಡಲು ಮಾರುಕಟ್ಟೆಗಳು ಸದೃಢರೇ. ಗೊತ್ತಿದ್ದೂ ಗೊತ್ತಿದ್ದೂ ಮೋಸ ಹೋಗುವುದನ್ನು ತಪ್ಪಿಸಿಕೊಂಡು ಬದುಕುವ ಜಾಣ್ಮೆ ನಮ್ಮದಾಗಬೇಕು. ನಮ್ಮ ಮಾರುಕಟ್ಟೆಗಳು ಎಷ್ಟು ಬುದ್ಧಿವಂತವೆಂದರೆ ಇಷ್ಟೆಲ್ಲಾ ಓದಿದ ಬಳಿಕ ಸ್ವಲ್ಪ ಬುದ್ಧಿ ಬಂದರೂ ಮಾರುಕಟ್ಟೆ ಒಂದು ಕ್ಷಣ ಬೀಸುವ ಬಲೆಗೆ ಎಲ್ಲಾ ಓದೂ ವ್ಯರ್ಥವಾಗುತ್ತದೆ. ಈ “ಜನಮರಳು ನೀತಿ’ ಮಾರುಕಟ್ಟೆ ಶಕ್ತಿಗಳಿಗೂ ಗೊತ್ತಿದೆ.

ಬಜೆ ಅಣೆಕಟ್ಟು ನೀರಿನ ಮಟ್ಟ  ಮತ್ತಷ್ಟು ಕುಸಿತ
ಸ್ವರ್ಣಾ ನದಿಯ ಬಜೆ ಅಣೆಕಟ್ಟಿನಲ್ಲಿ  ನೀರಿನ ಮಟ್ಟ  ದಿನೇ ದಿನೇ ಕುಸಿಯುತ್ತಿದ್ದು, 15-4-2017ರಂದು 2.67 ಮೀ. ಇತ್ತು. ಕಳೆದ ವರ್ಷ ಇದೇ ದಿನ ನೀರಿನ ಮಟ್ಟ 3.86  ಮೀ. ಇತ್ತು. 16-4-2017ರಂದು 2.63 ಮೀ. ಇತ್ತು. ಕಳೆದ ವರ್ಷ ಇದೇ ದಿನ ನೀರಿನ ಮಟ್ಟ 3.80 ಮೀ. ಇತ್ತು. ಅಂದರೆ ನೀರಿನ ಸಂಗ್ರಹ ಪ್ರಮಾಣ ಕಡಿಮೆಯಾಗಿದೆ. 

ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next