Advertisement

ನಾಳೆಯಿಂದ ಎಸೆಸೆಲ್ಸಿ ಪರೀಕ್ಷೆ ; ಸಿದ್ಧತೆ ಪೂರ್ಣ

07:05 AM Mar 22, 2018 | |

ಕುಂದಾಪುರ: ವಿದ್ಯಾರ್ಥಿಗಳ ಭವಿಷ್ಯದ ಪ್ರಮುಖ ಘಟ್ಟವಾಗಿರುವ ಎಸೆಸೆಲ್ಸಿ ಪರೀಕ್ಷೆಗೆ ಈ ಬಾರಿ ಕುಂದಾಪುರ ಮತ್ತು ಬೈಂದೂರು ವಲಯಗಳಲ್ಲಿ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಪರೀಕ್ಷೆಗೆ ಕೊನೆ ಹಂತದ ತಯಾರಿಯಲ್ಲಿ ವಿದ್ಯಾರ್ಥಿಗಳಿದ್ದಾರೆ. 

Advertisement

ಮಾ. 23 ರಿದ ಎಸೆಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಎ.6 ರಂದು ಮುಕ್ತಾಯಗೊಳ್ಳಲಿದೆ. ಕಳೆದ ಬಾರಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದ ಉಡುಪಿ ಜಿಲ್ಲೆಯ 5 ವಲಯಗಳ ಪೈಕಿ ಕುಂದಾಪುರ ಪ್ರಥಮ ಸ್ಥಾನ ಪಡೆದಿತ್ತು. ಈ ಬಾರಿ ಅದನ್ನು ಉಳಿಸಿ ಕೊಳ್ಳುವುದರೊಂದಿಗೆ ಗುಣಮಟ್ಟದ ಫ‌ಲಿತಾಂಶಕ್ಕೆ ಹೆಚ್ಚಿನ ಒತ್ತು ಕೊಡುವ ನಿಟ್ಟಿನಲ್ಲಿ ತರಬೇತಿ, ಕಾರ್ಯಾಗಾರ, ಶಿಬಿರಗಳನ್ನು ನಡೆಸಲಾಗಿದೆ. ಬೈಂದೂರು ವಲಯ ಕೂಡ ಫಲಿತಾಂಶ ಹೆಚ್ಚಿಸುವತ್ತ ದೃಷ್ಟಿ ಹರಿಸಿದ್ದು, ಈ ಬಾರಿ “ಟಾರ್ಗೆಟ್‌-90′ ಫ‌ಲಿತಾಂಶ ಪಡೆಯುವತ್ತ ಪ್ರಯತ್ನ ನಡೆಸಲಾಗಿದೆ. 

ಪರೀಕ್ಷೆ ಬರೆಯಲಿರುವವರು 
ಕುಂದಾಪುರ ವಲಯದಲ್ಲಿ ಸರಕಾರಿ ಪ್ರೌಢಶಾಲೆಗಳ 1,408 ವಿದ್ಯಾರ್ಥಿಗಳು, ಅನುದಾನಿತ ಪ್ರೌಢಶಾಲೆಯ 275 ವಿದ್ಯಾರ್ಥಿಗಳು ಹಾಗೂ ಅನುದಾನ ರಹಿತ ಶಾಲೆಗಳ 756 ವಿದ್ಯಾರ್ಥಿಗಳಲ್ಲಿ 1,184 ಗಂಡು ಮಕ್ಕಳು, 1,255 ಹೆಣ್ಣು ಮಕ್ಕಳು ಸೇರಿ ಒಟ್ಟು 2,439 ವಿದ್ಯಾರ್ಥಿಗಳು, ಪುನರಾವರ್ತಿತರಲ್ಲಿ 89 ಗಂಡು ಮಕ್ಕಳು, 39 ಹೆಣ್ಣು ಮಕ್ಕಳು ಸೇರಿ ಒಟ್ಟು 128 ವಿದ್ಯಾರ್ಥಿಗಳು, ಖಾಸಗಿಯಲ್ಲಿ 70 ಗಂಡು ಮಕ್ಕಳು, 19 ಹೆಣ್ಣು ಮಕ್ಕಳು ಸೇರಿ ಒಟ್ಟು 89 ವಿದ್ಯಾರ್ಥಿಗಳು, ಖಾಸಗಿ ಪುನರಾವರ್ತಿತರಲ್ಲಿ 45 ಗಂಡು, 13 ಹೆಣ್ಣು ಸೇರಿ ಒಟ್ಟು 58 ವಿದ್ಯಾರ್ಥಿಗಳು ಒಟ್ಟಾರೆಯಾಗಿ 1,388 ಗಂಡು ಮಕ್ಕಳು, 1,326 ಹೆಣ್ಣು ಮಕ್ಕಳು ಸೇರಿ ಒಟ್ಟು 42 ಶಾಲೆಗಳ 2,714 ಮಂದಿ ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ. 

ಬೈಂದೂರು ವಲಯದ 8 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 32 ಶಾಲೆಗಳಲ್ಲಿ ಸರಕಾರಿ ಶಾಲೆಗಳಲ್ಲಿ 1,263, ಅನುದಾನಿತ ಶಾಲೆಗಳಲ್ಲಿ 317, ಅನುದಾನ ರಹಿತ 258 ವಿದ್ಯಾರ್ಥಿಗಳು ಒಟ್ಟು 2,138 ವಿದ್ಯಾರ್ಥಿಗಳು ಹೊಸದಾಗಿ ಪರೀಕ್ಷೆ ಬರೆಯಲಿದ್ದರೆ, ಖಾಸಗಿಯಲ್ಲಿ 21 ಸೇರಿ ಒಟ್ಟು 2,159 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 

ಒಟ್ಟು 14,643 ವಿದ್ಯಾರ್ಥಿಗಳು
ಉಡುಪಿ ಜಿಲ್ಲೆಯಲ್ಲಿ ಒಟ್ಟು 55 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 261 ಶಾಲೆಗಳ 6,699 ಗಂಡು ಮಕ್ಕಳು, 6,641 ಹೆಣ್ಣು ಮಕ್ಕಳು ಸೇರಿ ಒಟ್ಟು 13,340 ವಿದ್ಯಾರ್ಥಿಗಳು ಹೊಸದಾಗಿ ಪರೀಕ್ಷೆ ಬರೆಯಲಿದ್ದರೆ, ಖಾಸಗಿ, ಪುನರಾವರ್ತಿತ, ಖಾಸಗಿ ಪುನರಾವರ್ತಿತ ಎಲ್ಲ ಸೇರಿ ಒಟ್ಟು ಜಿಲ್ಲೆಯಲ್ಲಿ 14,643 ವಿದ್ಯಾರ್ಥಿಗಳು ಈ ಬಾರಿ ಎಸೆಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ.

Advertisement

3 ವರ್ಷಗಳಲ್ಲಿ ವಲಯವಾರು ಫಲಿತಾಂಶ
ಕಳೆದ 3 ವರ್ಷಗಳಲ್ಲಿ ವಲಯವಾರು ಫಲಿತಾಂಶದ ಚಿತ್ರಣ ಇಲ್ಲಿದೆ. 2015 ರಲ್ಲಿ 15,929 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 14,873 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 93.37 ಫಲಿತಾಂಶ ಬಂದಿತ್ತು. ಕಾರ್ಕಳ ವಲಯ ಶೇ.94.55, ಬ್ರಹ್ಮಾವರ ಶೇ. 94.53, ಉಡುಪಿ ಶೇ. 93.01, ಕುಂದಾಪುರ ಶೇ. 92.40, ಬೈಂದೂರು ಶೇ.91.99, ಅದೇ ರೀತಿ 2016 ರಲ್ಲಿ ಪರೀಕ್ಷೆ ಬರೆದ 15,090 ವಿದ್ಯಾರ್ಥಿಗಳಲ್ಲಿ 13,527 ವಿದ್ಯಾರ್ಥಿಗಳು ಉತ್ತೀರ್ಣರಾಗಿ, ಶೇ. 89.64 ಫಲಿತಾಂಶ ಬಂದಿತ್ತು. ಬ್ರಹ್ಮಾವರ ವಲಯ ಶೇ. 90.73, ಕುಂದಾಪುರ ಶೇ. 90.43, ಉಡುಪಿ ಶೇ. 90.26, ಕಾರ್ಕಳ ಶೇ.88.33, ಬೈಂದೂರು ಶೇ.87.91, ಇನ್ನು 2017 ರಲ್ಲಿ ಪರೀಕ್ಷೆ ಬರೆದ 14,266 ವಿದ್ಯಾರ್ಥಿಗಳಲ್ಲಿ 12,016 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 84.23 ಫಲಿತಾಂಶ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿತ್ತು. ಕುಂದಾಪುರ ವಲಯ ಶೇ. 86.13, ಬ್ರಹ್ಮಾವರ ಶೇ. 85.99. ಕಾರ್ಕಳ ಶೇ. 85.24, ಉಡುಪಿ ಶೇ. 84.13, ಬೈಂದೂರು ಶೇ.78.58 ಫಲಿತಾಂಶ ಪಡೆದಿದೆ.

ಫಲಿತಾಂಶ ಹೆಚ್ಚಳಕ್ಕೆ ಕೈಗೊಂಡ ಕ್ರಮಗಳು
ಕಳೆದ ಬಾರಿ ಪ್ರಥಮ ಸ್ಥಾನ ಪಡೆದಿದ್ದ ಉಡುಪಿ ಜಿಲ್ಲೆ ಈ ಬಾರಿಯೂ ಅದನ್ನು ಉಳಿಸಿಕೊಳ್ಳುವತ್ತ ಹೆಚ್ಚಿನ ಮುತುವರ್ಜಿ ವಹಿಸಿದೆ. ಅದಕ್ಕೆ ಬೇಕಾದ ಪೂರ್ವ ತಯಾರಿಗಳನ್ನು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯು ಈಗಾಗಲೇ ಪೂರ್ಣಗೊಳಿಸಿದೆ. 

–  ಪ್ರತಿ ತಿಂಗಳು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆ ಕರೆದು ಎಸೆಸೆಲ್ಸಿ ಫಲಿತಾಂಶದ ಕುರಿತು ಪ್ರಗತಿ ಪರಿಶೀಲನೆ.
–  ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ.
– ಪೂರ್ವ ಸಿದ್ಧತಾ ಪರೀಕ್ಷೆ, ಮಧ್ಯವಾರ್ಷಿಕ ಪರೀಕ್ಷೆಗಳನ್ನು ಆಧರಿಸಿ ವಿಶೇಷ ಬೋಧನೆ.
-  ಕೆಲವು ಶಾಲೆಗಳಲ್ಲಿ ಸಂಜೆ ಹಾಗೂ ರವಿವಾರ ವಿಶೇಷ ತರಗತಿ. 
-  ವಿಷಯವಾರು ಶಿಕ್ಷಕರಿಗೆ ವಿಶೇಷ ತರಬೇತಿ.  
-  ಕಲಿಕೆಯಲ್ಲಿ ಉತ್ತಮವಾಗಿರುವ ವಿದ್ಯಾರ್ಥಿಗಳಿಗೆ ಡಿಸ್ಟಿಂಕ್ಷನ್‌ ಪಡೆಯಲು ಸಹಕಾರಿಯಾಗುವಂತೆ  1 ದಿನದ ಕಾರ್ಯಾಗಾರ. -  ಎಸೆಸೆಲ್ಸಿ ವಿದ್ಯಾರ್ಥಿಗಳ ಪೋಷಕರನ್ನು ಶಾಲೆಗೆ ಕರೆದು ಅವರಿಗೂ ಮಾರ್ಗದರ್ಶನ.

ಸುಗಮ ಪರೀಕ್ಷೆಗೆ ಕ್ರಮಗಳು
–  ಪರೀಕ್ಷಾ ಕೇಂದ್ರಗಳ ಪ್ರಶ್ನೆ ಪತ್ರಿಕೆ ತೆರೆಯುವ ಕೊಠಡಿ ಹಾಗೂ ಕಾರಿಡಾರ್‌ಗಳಲ್ಲಿ ಸಿಸಿಟಿವಿ.
–  ಸ್ಥಾನೀಯ ಜಾಗೃತ ದಳ ರಚನೆ.
-  ವಲಯವಾರು ಜಾಗೃತ ದಳ ರಚನೆ.
-  ಜಿಲ್ಲೆಯ ಒಟ್ಟು ಇರುವ 55 ಪರೀಕ್ಷಾ ಕೇಂದ್ರಗಳಿಗೂ ತಲಾ ಒಬ್ಬರಂತೆ ವೀಕ್ಷಕರನ್ನು ಜಿಲ್ಲಾಧಿಕಾರಿಗಳಿಂದ ಆಯ್ಕೆ. 
-  ಉತ್ತರ ಪತ್ರಿಕೆಗಳನ್ನು ಎಲ್ಲ ಪರೀಕ್ಷಾ ಕೇಂದ್ರಗಳಿಗೆ ರವಾನಿಸಲಾಗಿದ್ದು, ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷೆ ನಡೆಯುವ ದಿನ ಬೆಳಗ್ಗೆ ರವಾನೆಗೆ ಕ್ರಮ.

Advertisement

Udayavani is now on Telegram. Click here to join our channel and stay updated with the latest news.

Next