“ಈ ಚಿತ್ರವನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡ್ಕೊಬೇಡಿ…’
– ಹೀಗೆ ವಿಶ್ವಾಸದಿಂದ ಹೇಳಿದ್ದು ನಿರ್ದೇಶಕ ಕಿರಣ್‌ಗೋವಿ. ಅವರು ಹೇಳಿಕೊಂಡಿದ್ದು ತಮ್ಮ ನಿರ್ದೇಶನದ “ಯಾರಿಗೆ ಯಾರುಂಟು’ ಚಿತ್ರದ ಬಗ್ಗೆ. ಈ ವಾರ ರಾಜ್ಯಾದ್ಯಂತ ಚಿತ್ರ ತೆರೆಗೆ ಬರುತ್ತಿದೆ. ಬಿಡುಗಡೆ ಮುನ್ನ ಚಿತ್ರದ ಬಗ್ಗೆ ಮಾಹಿತಿ ಕೊಡಲು ಚಿತ್ರತಂಡದೊಂದಿಗೆ ಆಗಮಿಸಿದ್ದ ಕಿರಣ್‌ಗೋವಿ, ಹೇಳಿದ್ದಿಷ್ಟು. “ಕಥೆ ಒಳಗೆ ಶೀರ್ಷಿಕೆಗೊಂದು ಅರ್ಥವಿದೆ. ಚಿತ್ರ ನೋಡಿದವರಿಗೆ ಇಲ್ಲೊಂದು ಹೊಸ ಫೀಲ್ ಆಗುತ್ತೆ. ಇದು ನಮ್ಮ ನಡುವಿನ ಅಥವಾ ನಮ್ಮದೇ ಕಥೆಯೇನೋ ಎಂಬಂತೆ ಭಾಸವಾಗುತ್ತೆ. ಅಷ್ಟರಮಟ್ಟಿಗೆ ಚಿತ್ರ ಮೂಡಿಬಂದಿದೆ. ಒಂದು ಗಂಭೀರ ವಿಷಯ ಇಲ್ಲಿದ್ದರೂ, ಅದು ಮನರಂಜನೆ ಮೂಲಕ ಹೇಳಲಾಗಿದೆ. ಒಂದು ಆಸ್ಪತ್ರೆಯ ಕಥೆ ಇಲ್ಲಿದೆ. ಆಸ್ಪತ್ರೆ ಅಂದರೆ, ಬಿಲ್ ಕಟ್ಟಲು ಪರದಾಡುವ ಜನರು, ಔಷಧಿ ಖರೀದಿಗೆ ಒದ್ದಾಡುವ ಅದೆಷ್ಟೋ ಜನರ ಸಮಸ್ಯೆ ಸಹಜ. ಅಂತಹ ಮನಕಲಕುವ ಸನ್ನಿವೇಶಗಳ ಜೊತೆ ಚಿತ್ರ ಮೂಡಿಬಂದಿದೆ. ಒಬ್ಬ ಡಾಕ್ಟರ್ ಮೂವರು ಹುಡುಗಿಯರ ಹಿಂದೆ ಯಾಕೆ ಬೀಳುತ್ತಾನೆ ಎಂಬುದೇ ಇಲ್ಲಿ ಸಸ್ಪೆನ್ಸ್’ ಎಂದು ವಿವರಿಸುವ ಕಿರಣ್‌ಗೋವಿ, “ಚಿತ್ರದ ಹಾಡುಗಳು ಈಗಾಗಲೇ ಸುದ್ದಿಯಾಗಿವೆ. ಟ್ರೇಲರ್‌ಗೆ ಮೆಚ್ಚುಗೆ ಸಿಕ್ಕಿದೆ. ಚಿತ್ರದಲ್ಲಿ ಭಾವನಾತ್ಮಕ ವಿಷಯಗಳಿಗೆ ಜಾಗ ಕಲ್ಪಿಸಲಾಗಿದೆ’ ಅಂದರು ಕಿರಣ್‌ಗೋವಿ.
ನಿರ್ಮಾಪಕ ರಘುನಾಥ್ ಅವರಿಗೆ ಇದು ಕನಸಿನ ಚಿತ್ರವಂತೆ. “ನನಗೆ ಆತಂಕ, ಖುಷಿ ಎರಡೂ ಇದೆ. ಜನರು ಹೇಗೆ ಸ್ವೀಕರಿಸುತ್ತಾರೆ ಎಂಬ ಭಯ ಒಂದು ಕಡೆ ಇದ್ದರೆ, ಇನ್ನೊಂದೆಡೆ ನಮ್ಮ ನಿರೀಕ್ಷೆಗೆ ತಕ್ಕಂತೆ ಚಿತ್ರ ಮೂಡಿಬಂದಿದೆ ಎಂಬ ಖುಷಿ ಇದೆ. ಒಳ್ಳೆಯ ತಂಡವಿದ್ದರೆ, ಒಳ್ಳೆಯ ಚಿತ್ರ ಬರುತ್ತೆ ಎಂಬುದಕ್ಕೆ “ಯಾರಿಗೆ ಯಾರುಂಟು’ ಸಾಕ್ಷಿ ಎನ್ನುತ್ತಾರೆ ರಘುನಾಥ್.
ನಾಯಕ ಪ್ರಶಾಂತ್‌ಗೆ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿದೆಯಂತೆ. “ನಾನಿಲ್ಲಿ ಡಾಕ್ಟರ್ ಆಗಿದ್ದು, ಮೂವರು ನಾಯಕಿಯರ ಜೊತೆಯೂ ಕಾಣಿಸಿಕೊಂಡಿದ್ದೇನೆ. ನಾನು ಮಾಡದೇ ಇರುವಂತಹ ಪಾತ್ರ ಇಲ್ಲಿ ಸಿಕ್ಕಿದೆ. ಇಷ್ಟು ದಿನ ಆ್ಯಕ್ಷನ್ ಚಿತ್ರಗಳಲ್ಲಿ ನೋಡಿದ್ದವರಿಗೆ ಇಲ್ಲಿ ಹೊಸ ಪ್ರಶಾಂತ್ ನೋಡಬಹುದು. ಇನ್ನೊಂದು ವಿಷಯ ಹೇಳಲೇಬೇಕು. ನಮ್ಮ ತಂದೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಮಗನನ್ನೂ ಅದೇ ರಂಗದಲ್ಲಿ ಇರುವಂತೆ ಮಾಡಬೇಕು ಅನ್ನುವ ಆಸೆ ಅವರಿಗಿತ್ತು. ಆದರೆ, ನಾನು ಸಿನಿಮಾಗೆ ಬಂದೆ. ಆದರೂ, ಈ ಚಿತ್ರದಲ್ಲಿ ಅದೆಲ್ಲೋ ಒಂದು ರೀತಿ ಕನೆಕ್ಟ್ ಆಗಿದೆ. ತಂದೆ ಕೆಲಸ ಮಾಡಿದ ಆಸ್ಪತ್ರೆಯಲ್ಲೇ ಚಿತ್ರೀಕರಿಸಿದ್ದು ಖುಷಿ ಕೊಟ್ಟಿದೆ’ ಎಂಬುದು ಪ್ರಶಾಂತ್ ಮಾತು.
ನಾಯಕಿ ಕೃತಿಕಾಗೆ ಇಲ್ಲಿ ವಿಶೇಷ ಪಾತ್ರ ಸಿಕ್ಕಿದೆಯಂತೆ. ಕಥೆ ಕೇಳಿದಾಗ, ಅವರಿಗೆ ಚೂಡಿದಾರ್ ಹಾಕ್ಕೊಂಡು ಮತ್ತೆ ಅದೇ ರೀತಿಯ ಪಾತ್ರ ಮಾಡಬೇಕಾ? ಎಂಬ ಪ್ರಶ್ನೆ ಬಂತಂತೆ, ಲೇಖಾ ಚಂದ್ರ ಅವರಿಗಾಗಿ ಇದ್ದ ಪಾತ್ರ ಆಯ್ಕೆ ಮಾಡಿದಾಗ, ನಿರ್ದೇಶಕರು, ನೀವು ಈ ಪಾತ್ರ ಮಾಡಿ ಅಂದರು. ಈಗ ಚಿತ್ರ ನೋಡಿದಾಗ, ಬೇರೆ ರೀತಿ ಚಿತ್ರ ಮೂಡಿಬಂದಿದೆ ಅನ್ನೋದು ಗೊತ್ತಾಯ್ತು ಅಂದರು ಕೃತಿಕಾ ಲೇಖಾಚಂದ್ರ ಅವರಿಗೆ ಇಲ್ಲಿ ಪ್ರಮುಖ ಪಾತ್ರ ಸಿಕ್ಕಿದೆಯಂತೆ. ಛಾಯಾಗ್ರಾಹಕ ರಾಕೇಶ್ ಸಿ.ತಿಲಕ್, ಸಂಕಲನಕಾರ ವಿಶ್ವ, ವಿತರಕ ಕುಮಾರ್ ಮಾತನಾಡಿದರು.