Advertisement
ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಒಂದೂವರೆ ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದ ಮೇಲೆ ಕರಿಛಾಯೆ ಬಿದ್ದಿತ್ತು. ಆದರೆ, ಅಗಸ್ಟ್ ತಿಂಗಳಿಂದ ಮಹಾಮಾರಿ ಸೋಂಕು ತಗ್ಗಿದ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಪ್ರೌಢ ಶಾಲೆಯ 9ನೇ ಮತ್ತು 10ನೇ ತರಗತಿಗಳು ಹಾಗೂ ಪದವಿ ಪೂರ್ವ ಕಾಲೇಜುಗಳನ್ನು ಆರಂಭಿಸಿತ್ತು. ಬಳಿಕ ಹಿರಿಯ ಪ್ರಾಥಮಿಕ ಹಂತದ 6, 7 ಮತ್ತು 8ನೇ ತರಗತಿಗಳನ್ನು ಪ್ರಾರಂಭಿಸಲಾಗಿತ್ತು. ಇದೀಗ ಕಿರಿಯ ಪ್ರಾಥಮಿಕ ಹಂತದ ತರಗತಿಗಳನ್ನು ಪ್ರಾರಂಭಿಸಲು ಸರ್ಕಾರ ಸಜ್ಜಾಗಿದೆ.
Related Articles
Advertisement
ಕೊರೊನಾ ಭೀತಿ ಮಧ್ಯೆಯೂ ಚಿಕ್ಕ ಮಕ್ಕಳು ಶಾಲೆಗಳಿಗೆ ಬರಲಿರುವ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಹಲವು ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದ್ದು, ವಿದ್ಯಾರ್ಥಿಗಳ ಸ್ವಾಗತಕ್ಕೆ ಶಾಲೆಗಳು ಮತ್ತು ಶಿಕ್ಷಕರು ಸಜ್ಜಾಗಿದ್ದಾರೆ. ಈಗಾಗಲೇ ಹಿರಿಯ ಪ್ರಾಥಮಿಕ ತರ ಗತಿಗಳು ನಡೆಯುತ್ತಿರುವುದರಿಂದ ನಿತ್ಯ ಕೊರೊನಾ ಹರಡುವಿಕೆ ತಡೆಯ ಕ್ರಮ ಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈಗ ಮತ್ತೆ ಶಿಕ್ಷಣ ಇಲಾಖೆ ಮಾರ್ಗಸೂಚಿಯಂತೆ ಎಲ್ಲ ಶಾಲೆಗಳಲ್ಲಿ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಶಾಲಾ ಕೊಠಡಿ, ಆವರಣ, ಪೀಠೊಪಕರಣ ಸೇರಿದಂತೆ ಶಾಲೆಗಳ ಸಂಪೂರ್ಣ ಸ್ವತ್ಛಗೊಳಿಸಿ ಸ್ಯಾನಿಟೈಸರ್ ಮಾಡಲಾಗಿದೆ. ರವಿವಾರ ರಜೆ ದಿನವಾಗಿದ್ದರಿಂದ ಬಹುತೇಕ ಕಡೆಗಳಲ್ಲಿ ಶನಿವಾರವೇ ಶಾಲೆಗಳಲ್ಲಿ ಪೂರ್ಣ ಸಿದ್ಧತೆ ಪೂರ್ಣಗೊಳಿಸಲಾಗಿದೆ. ಒಟ್ಟಿನಲ್ಲಿ ಮಕ್ಕಳ ಕಲರವ ಶಾಲೆಗಳಲ್ಲಿ ಕೇಳಿಬರಲಿದೆ.
ತಾಂಡಾಗಳಲ್ಲಿಲ್ಲ ಬಸ್; ವಿದ್ಯಾರ್ಥಿಗಳ ಪರದಾಟ
ದಸರಾ ರಜೆ ನಂತರ ತಾಲೂಕಿನಲ್ಲಿ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆ ಕಾಲೇಜುಗಳು ಪ್ರಾರಂಭವಾಗಿದ್ದು, ಕೆಲವು ಗ್ರಾಮಗಳಿಗೆ ಬಸ್ ಸಂಚಾರ ಇಲ್ಲದ ಕಾರಣ ವಿದ್ಯಾರ್ಥಿಗಳು ಪ್ರತಿನಿತ್ಯ ನಡೆದುಕೊಂಡು ಓಡಾಡುವ ಇಲ್ಲವೇ ಖಾಸಗಿ ವಾಹನಗಳ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಗೌಡನಳ್ಳಿ, ನಿಮಾಹೊಸಳ್ಳಿ, ಗರಗಪಳ್ಳಿ, ಗಂಗನಪಳ್ಳಿ, ಶಿವರಾಮಪುರ, ಪೋಚಾವರಂ, ಶಿವರೆಡ್ಡಿಪಳ್ಳಿ, ಮಗದಂಪುರ, ಬೊನಸಪುರ, ಸಂಗಾಪುರ ತಾಂಡಾ, ಸುಂಠಾಣ, ಹಲಕೋಡಾ, ಪೋತಂಗಲ್, ಕಂಚಾನಾಳ, ಮುಕರಂಬಾ, ಧರಿತಾಂಡಾ, ಸಜ್ಜನಕೊಳ್ಳ, ಬೆನಕೆಪಳ್ಳಿ, ಎಲ್ಮಮಡಗಿ, ಶಿವರಾಮನಾಯಕ ತಾಂಡಾ, ಹೇಮಲಾನಾಯಕ ತಾಂಡಾದಲ್ಲಿ ಬಸ್ ಸಂಚಾರ ಇಲ್ಲದಿರುವ ಕಾರಣ ಮಕ್ಕಳು ಶಾಲೆ ಸಮಯಕ್ಕೆ ಹಾಜರಾಗಲು ತೊಂದರೆ ಪಡುವಂತಾಗಿದೆ. ಅಲ್ಲದೇ ಮರಳಿ ತಮ್ಮ ಗ್ರಾಮಗಳಿಗೆ ಹೋಗಲು ಕಷ್ಟಪಡಬೇಕಾಗಿದೆ. ಕೂಡಲೇ ಸಾರಿಗೆ ಅಧಿಕಾರಿಗಳು ಬಸ್ ಸಂಚಾರ ಇಲ್ಲದ ಗ್ರಾಮಗಳಿಗೆ ಬಸ್ ಬಿಡಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
ಅರ್ಧ ದಿನ ಮಾತ್ರ ತರಗತಿಗಳು
ಅ.25ರಿಂದ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಆರಂಭವಾದರೂ, ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಅರ್ಧ ದಿನ ಮಾತ್ರ ತರಗತಿಗಳು ನಡೆಯಲಿದೆ. ಜತೆಗೆ ಈ ವಿದ್ಯಾರ್ಥಿಗಳಿಗೆ ಮಾಸಾಂತ್ಯದ ವರೆಗೆ ಬಿಸಿಯೂಟ ಯೋಜನೆ ಇರುವುದಿಲ್ಲ. ನ.2ರಿಂದ ಐದೂ ತರಗತಿ ವಿದ್ಯಾರ್ಥಿಗಳಿಗೆ ಬಿಸಿಯೂಟ ಆರಂಭವಾಗಲಿದೆ. ಅಲ್ಲದೇ, ಶಾಲೆಗೆ ಮಕ್ಕಳನ್ನು ಕಳುಹಿಸುವ ಪೋಷಕರು ತಮ್ಮದೇ ಆದ ಅನುಮತಿ ಪತ್ರವನ್ನು ನೀಡಬೇಕು. ತಮ್ಮ ವಿದ್ಯಾರ್ಥಿಯನ್ನು ಶಾಲೆಗೆ ಕಳುಹಿಸುವ ಕುರಿತು ಸ್ವಯಂ ದೃಢಿಕರಣ ಪತ್ರ ಕೊಡಬೇಕೆಂದು ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಈಗಾಗಲೇ 6ನೇ ತರಗತಿಯಿಂದ ಎಸ್ಸೆಸ್ಸೆಲ್ಸಿ ತರಗತಿಗಳು ಆರಂಭವಾಗಿದೆ. ಈಗ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಪ್ರಾರಂಭಿಸಲು ಅಗತ್ಯ ಸಿದ್ಧತೆ ಮತ್ತು ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. -ಅಶೋಕ ಭಜಂತ್ರಿ, ಡಿಡಿಪಿಐ