Advertisement

Karnataka: ಇನ್ನು ಮುಂದೆ ಶನಿವಾರ, ರವಿವಾರವೂ ಉಪನೋಂದಣಿ ಕಚೇರಿ ಕಾರ್ಯಾಚರಣೆ !

12:22 AM Sep 24, 2024 | Team Udayavani |

ಬೆಂಗಳೂರು: ಮುಂದಿನ ತಿಂಗಳು ಅಂದರೆ, ಅ. 21ರ ಅನಂತರದ ಎಲ್ಲ ಶನಿವಾರ, ರವಿವಾರಗಳಂದು ಕೂಡ ರಾಜ್ಯದ 35 ಉಪ ನೋಂದಣಾಧಿಕಾರಿ ಕಚೇರಿಗಳು ತೆರೆದಿರಲಿದ್ದು, ಆ ಕಚೇರಿಗಳಿಗೆ ಮಂಗಳವಾರ ರಜೆ ನೀಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

Advertisement

“ಎನಿವೇರ್‌ ರಿಜಿಸ್ಟ್ರೇಶನ್‌’ ಯಶಸ್ವಿಯಾಗಿ ನಡೆಯುತ್ತಿದೆ. ಇದರ ನಡುವೆ ವಾರಾಂತ್ಯ ದಲ್ಲೂ ನೋಂದಣಿಗೆ ಅವಕಾಶ ನೀಡಬೇಕೆಂದು ದುಡಿಯುವ ವರ್ಗದಿಂದ ಬೇಡಿಕೆ ಬಂದಿದೆ ಎಂದು ಸೋಮವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

ಅನೇಕರು ಹೊರರಾಜ್ಯಗಳಲ್ಲೂ ಉದ್ಯೋಗದಲ್ಲಿದ್ದು, ವಾರಾಂತ್ಯಗಳಲ್ಲಿ ನೋಂದಣಿ ಪ್ರಕ್ರಿಯೆಗೆ ಅವಕಾಶ ಇದ್ದರೆ ಅನುಕೂಲಕರ ಎಂಬ ಸಲಹೆಗಳು ಬಂದಿದ್ದವು. ದುಡಿಯುವ ವರ್ಗಕ್ಕೆ ಅನುಕೂಲವಾಗಲೆಂದು ಇನ್ನು ಮುಂದೆ 2 ಮತ್ತು 4ನೇ ಶನಿವಾರ ಹಾಗೂ ಎಲ್ಲ ರವಿವಾರಗಳಂದು ಕೂಡ ಜಿಲ್ಲೆಗೊಂದು ಉಪನೋಂದಣಾಧಿಕಾರಿ ಕಚೇರಿಯನ್ನು ತೆರೆದಿರಲು ನಿರ್ಧರಿಸಲಾಗಿದೆ ಎಂದರು.

ಯಾವ ಉಪನೋಂದಣಾಧಿಕಾರಿ ಕಚೇರಿ ಯಾವ ದಿನ ತೆರೆದಿರಲಿದೆ ಎಂಬ ಮಾಹಿತಿಯನ್ನು ಮೊದಲೇ ನೀಡಲಾಗಿರುತ್ತದೆ. ಅಂದು ಅವಕಾಶ ಇದ್ದರೆ ಮಾಡಿಸಿಕೊಳ್ಳಬಹುದು. ಇಲ್ಲದಿದ್ದರೆ ಅನುಕೂಲ ಆದ ದಿನ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಸಚಿವರು ಸ್ಪಷ್ಟಪಡಿಸಿದರು.

ಶೀಘ್ರದಲ್ಲೇ ಪೌತಿ ಖಾತೆ ಆಂದೋಲನ
ರಾಜ್ಯದಲ್ಲಿ 48 ಲಕ್ಷ ಕೃಷಿ ಭೂಮಿಗಳು ತೀರಿ ಹೋದವರ ಹೆಸರಿನಲ್ಲೇ ಇಂದಿಗೂ ಇದ್ದು, ಇವುಗಳನ್ನು ಅವರ ಮಕ್ಕಳು ಅಥವಾ ವಾರಸುದಾರರ ಹೆಸರಿಗೆ ಮಾಡಿಕೊಳ್ಳಲು ಅವಕಾಶ ಕೊಡಲಾಗುತ್ತಿದೆ. ಎಲ್ಲರೂ ತಮ್ಮ ಜಮೀನುಗಳ ಪಹಣಿ (ಆರ್‌ಟಿಸಿ)ಗೆ ಆಧಾರ್‌ ವಿಲೀನ ಮಾಡಬೇಕೆಂದು ಈಗಾಗಲೇ ತಿಳಿಸಲಾಗಿದೆ. ಕುಟುಂಬ ಸದಸ್ಯರ ನಡುವೆ ವಿವಾದ ಇದ್ದರೆ ಅದನ್ನು ಅವರೇ ಬಗೆಹರಿಸಿಕೊಳ್ಳಬೇಕು ಇಲ್ಲವೇ ಪೌತಿ ಖಾತೆ ಮಾಡಿಸಿಕೊಳ್ಳಬೇಕು. ಇದಕ್ಕಾಗಿ ಶೀಘ್ರದಲ್ಲೇ ಹೋಬಳಿ ಅಥವಾ ಗ್ರಾಮ ಲೆಕ್ಕಿಗರ ವ್ಯಾಪ್ತಿಯಲ್ಲಿ ಪೌತಿ ಆಂದೋಲನ ನಡೆಸಲಾಗುತ್ತದೆ. ಗ್ರಾಮ ಲೆಕ್ಕಿಗರು ಹಾಗೂ ಗ್ರಾಮ ಸೇವಕರ ಮೂಲಕ ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next