ಕಾಬೂಲ್: ಅಫ್ಘಾನಿಸ್ತಾನ್ ದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ‘ತಾಲಿಬಾನ್’ ಹಂತ ಹಂತವಾಗಿ ಷರಿಯಾ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿದೆ.
ಭಾನುವಾರವಷ್ಟೆ ಹುಡುಗ-ಹುಡುಗಿಯರು ಒಟ್ಟಿಗೆ ಕಲಿಯುವುದಕ್ಕೆ ನಿರ್ಬಂಧ ಹೇರಿರುವ ತಾಲಿಬಾನ್ ಇಂದು( ಆ.30) ವಿದ್ಯಾರ್ಥಿನಿಯರಿಗೆ ಪುರುಷ ಶಿಕ್ಷಕ ಪಾಠ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದೆ.
ಮಹಿಳೆಯರು ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ನಡೆಸಲು ತಾಲಿಬಾನ್ ಅವಕಾಶ ನೀಡಿದೆ. ಆದರೆ, ಹೊಸ ನಿಯಮಗಳ ಅಡಿಯಲ್ಲಿ ಯುವಕ ಮತ್ತು ಯುವತಿಯರು ಒಟ್ಟಿಗೆ ಕಲಿಕೆಯಲ್ಲಿ ಭಾಗಿಯಾಗಲು ಅವಕಾಶ ಇರುವುದಿಲ್ಲ. ಹಾಗೂ ಹೆಣ್ಣು ಮಕ್ಕಳಿಗೆ ಪುರುಷರು ಪಾಠ ಮಾಡುವಂತಿಲ್ಲ ಎಂದು ತಾಲಿಬಾನ್ ಹಂಗಾಮಿ ಉನ್ನತ ಶಿಕ್ಷಣ ಸಚಿವ ಶೇಖ್ ಅಬ್ದುಲ್ ಬಾಕಿ ಹಕ್ಕಾನಿ, ಹುಡುಗಿಯರಿಗೆ ಕಲಿಸಲು ಪುರುಷರಿಗೆ ಅವಕಾಶವಿಲ್ಲ, ಷರಿಯಾ ಕಾನೂನಿನ ಪ್ರಕಾರ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತವೆ ಎಂದಿದ್ದಾರೆ.
ತಾಲಿಬಾನ್ ಆಡಳಿತ 90ರ ದಶಕದಲ್ಲಿ ಹುಡುಗಿಯರು ಮತ್ತು ಮಹಿಳೆಯರು ಶಿಕ್ಷಣ ಪಡೆಯುವುದನ್ನು ನಿಷೇಧಿಸಿತ್ತು, ಆಗಸ್ಟ್ 15 ರಂದು ಮತ್ತೆ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನ್ ಗಳು ಭಿನ್ನ ಆಡಳಿತ ನೀಡುವ ಭರವಸೆ ನೀಡಿದ್ದರು.
ಷರಿಯಾ ಕಾನೂನಿನ ಅನ್ವಯ ಅಫ್ಘಾನಿಸ್ತಾನದ ಜನತೆ ಉನ್ನತ ಶಿಕ್ಷಣ ಪಡೆಯುವುದನ್ನು ಮುಂದುವರೆಸಬಹುದಾಗಿದೆ. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಕಲಿಯುವ ವಾತಾವರಣ ಸೃಷ್ಟಿಸಲಾಗುತ್ತಿದೆ.
ಆದರೆ, ತಾಲಿಬಾನ್ ಸರ್ಕಾರದ ಈ ಆದೇಶ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ. ಈ ಕಾನೂನು ಉನ್ನತ ಶಿಕ್ಷಣದಿಂದ ಹೆಣ್ಣು ಮಕ್ಕಳನ್ನು ವಂಚಿತರನ್ನಾಗಿಸುತ್ತದೆ. ಯಾಕಂದರೆ ಸಾಕಷ್ಟು ವಿಶ್ವವಿದ್ಯಾಲಯಗಳು ಪ್ರತ್ಯೇಕ ತರಗತಿಗಳನ್ನು ನಡೆಸಲು ಸಾಧ್ಯವಿಲ್ಲ. ಮತ್ತೊಂದೆಡೆ ಪ್ರತ್ಯೇಕ ಶಿಕ್ಷಣ ಒದಗಿಸುವಷ್ಟು ಮಾನವ ಸಂಪನ್ಮೂಲವೂ ಇಲ್ಲ ಎಂದು ಅಫ್ಘಾನ್ ಪತ್ರಕರ್ತ ಬಶೀರ್ ಅಹ್ಮದ್ ಗವಾಜ್ ಟ್ವೀಟ್ ಮಾಡಿದ್ದಾರೆ.