ಬೆಂಗಳೂರು: ಸಜ್ಜನ್‌ರಾವ್ ವೃತ್ತದ ಶ್ರೀವಾಸವಿ ಕಾಂಡಿಮೆಂಟ್ ವತಿಯಿಂದ ಜ.4ರಿಂದ 15ರವರೆಗೆ ನಗರದಲ್ಲಿ “ಅವರೆ ಕಾಯಿ ಮೇಳ’ವನ್ನು ಹಮ್ಮಿಕೊಂಡಿದೆ. ವಿವಿಪುರದ ಸಜ್ಜನರಾವ್ ಸರ್ಕಲ್ ಫುಡ್ ಸ್ಟ್ರೀಟ್‌ನಲ್ಲಿ ಪ್ರತಿದಿನ ಬೆಳಗ್ಗೆ 11ರಿಂದ ರಾತ್ರಿ 10 ಗಂಟೆವರೆಗೆ ಮೇಳ ನಡೆಯಲಿದೆ.
ಮೇಳವನ್ನು ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಲಿದ್ದು, ಶಾಸಕರಾದ ಆರ್.ವಿ.ದೇವರಾಜ್, ಪ್ರಿಯಾ ಕೃಷ್ಣ, ಮೇಯರ್ ಸಂಪತ್ ರಾಜ್, ವಿಧಾನ ಪರಿಷತ್ ಸದಸ್ಯೆ ಮತ್ತು ಚಿತ್ರ ನಟಿ ತಾರಾ ಅನುರಾಧಾ, ಬಿಜೆಪಿಯ ಮುಖಂಡ ಉದಯ ಗರುಡಾಚಾರ್, ಕೋಡಿಹಳ್ಳಿ ಚಂದ್ರಶೇಖರ್, ಬೆಂಗಳೂರು ನಗರ ಪೋಲಿಸ್ ಆಯುಕ್ತ ಸುನೀಲ್ ಕುಮಾರ್ ಸೇರಿದಂತೆ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಚಿತ್ರನಟ ದೊಡ್ಡಣ್ಣ, ರಮೇಶ್ ಭಟ್, ಚಿರಂಜೀವಿ ಸರ್ಜಾ, ನಟಿ ಮಯೂರಿ, ರೂಪಿಕಾ ಸೇರಿದಂತೆ ಹಲವರು ಆಗಮಿಸಲಿದ್ದಾರೆ. ಇದೇ ವೇಳೆ ಮೇಳದ ಅಂಗವಾಗಿ ಅಂಗ ವಿಕಲರಿಗೆ ವ್ಹೀಲ್‌ಛೇರ್, ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್‌ಗಳನ್ನು ಕೂಡ ವಿತರಿಸಲಾಗುವುದು ಎಂದು ಹೇಳಿದರು.
ರೈತರಿಂದ ನೇರ ಖರೀದಿ: ವಾಸವಿ ಕ್ಯಾಂಡಿಮೆಂಟ್ಸ್, ಮಾಗಡಿ ತಾಲೂಕಿನ ರೈತರು ಬೆಳೆದ ಒಂಭತ್ತು ಟನ್ ಅಧಿಕ ಅವರೆ ಕಾಯಿಯನ್ನು ನೇರವಾಗಿ ರೈತರಿಂದಲೇ ಖರೀದಿಸುತ್ತದೆ.ಬೆಳೆಗಾರರ ಮನೆಬಾಗಿಲಿಗೆ ಹೋಗಿ ಅವರೆ ಕಾಯಿ ಖರೀದಿಸಿ ರೈತರಿಗೆ ಮಾರುಕಟ್ಟೆ ಬೆಲೆಗಿಂತ ಹೆಚ್ಚು ಬೆಲೆಯನ್ನು ನೀಡಲಾಗುತ್ತದೆ.ಇದರಿಂದಾ ಗಿ ರೈತರ ಶ್ರಮಕ್ಕೆ ಹೆಚ್ಚು ಬೆಲೆ ಸಿಗಲಿದೆ. ರೈತರು ಕೂಡ ಸಂತೃಪ್ತರಾಗುತ್ತಾರೆ ಎಂದು ಗೀತಾ ಶಿವಕುಮಾರ್ ತಿಳಿಸಿದರು.
ಮಲ್ಲೇಶ್ವರ, ನಾಗರಬಾವಿಯಲ್ಲೂ ಮೇಳ: ವಿವಿಪುರದಲ್ಲಿ ಮೇಳ ಮುಗಿದ ನಂತರ ಜ.19ರಿಂದ 28ರ ವರೆಗೆ ಮಲ್ಲೇಶ್ವರ ಮೈದಾನದಲ್ಲಿ ಮೇಳ ನಡೆಯಲಿದೆ. ಮೇಳವನ್ನು ಸಚಿವ ಎಚ್.ಎಂ.ರೇವಣ್ಣ ಉದ್ಘಾಟಿಸಲಿದ್ದಾರೆ. ನಂತರ ಫೆ.2ರಿಂದ 11ರ ವರೆಗೆ ನಾಗರಬಾವಿಯ ಪೂರ್ಣಿಮಾ ಮಹಲ್ ಪಕ್ಕ ಅವರೆ ಮೇಳ ನಡೆಯಲಿದ್ದು, ಸಚಿವ ಕೃಷ್ಣಪ್ಪ ಚಾಲನೆ ನೀಡುವರು ಶಾಸಕ ಪ್ರಿಯಕೃಷ್ಣ, ನಟಿ ತಾರಾ ಅನುರಾಧ, ಸಂಗೀತ ನಿರ್ದೇಶಕ ಗುರುಕಿರಣ್, ರಕ್ಷಿತ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ವಾಸವಿ ಕಾಂಡಿಮೆಂಟ್ಸ್‌ನ ಗೀತಾ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.