Advertisement
ಸುರತ್ಕಲ್ : ದೇಶ ಸೇವೆಯ ಕನಸು ಕಂಡರೆ ಮಾತ್ರ ಸಾಲದು ಸಾಧಿಸುವ ಛಲವೂ ಬೇಕು. ಅನಿವಾರ್ಯ ಕಾರಣಗಳಿಂದಾಗಿ ಹೋಲ್ ಸೇಲ್ ಮಳಿಗೆಯೊಂದರಲ್ಲಿ ಕೆಲಸಕ್ಕಿದ್ದರೂ ಸೇನೆಗೆ ಸೇರುವುದನ್ನೇ ಉದ್ದೇಶವಾಗಿಸಿ, ಸಾಧಿಸಿದವರು ಸುರತ್ಕಲ್ ತಡಂಬೈಲ್‌ನ ನಾಯಕ್ ದಿನೇಶ್ ಅವರು. ಕಳೆದ 17 ವರ್ಷಗಳಿಂದ ಭೂಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು, ಸೇನೆಯ ಎಂಜಿನಿಯರಿಂಗ್ ವಿಭಾಗದಲ್ಲಿದ್ದಾರೆ.ತಂಡ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ದಿನೇಶ್
ದಿನೇಶ್ ಅವರ ತಂದೆ ಕೃಷ್ಣಪ್ಪ ಸಾಲಿಯಾನ್ ಅವರಿಗೆ ನಾಲ್ವರು ಗಂಡು, ಒಬ್ಬಳು ಹೆಣ್ಣು ಮಕ್ಕಳು. ಪತ್ನಿ ದಿವ್ಯಾ, ಮಗ ಕಶ್ಯಪ್ ಇದ್ದಾರೆ. ಸುರತ್ಕಲ್ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ, ಬಳಿಕ ವಿದ್ಯಾದಾಯಿನಿ ಪ್ರೌಢಶಾಲೆಯಲ್ಲಿ ಕಲಿಕೆ ಪಡೆದರು. 1998ರಲ್ಲಿ ಐಟಿಐ ತರಬೇತಿಯಾಗಿದ್ದು, ಬಳಿಕ ಮಂಗಳೂರು ಬಂದರಿನ ಹೋಲ್‌ಸೇಲ್ ಅಂಗಡಿಯಲ್ಲಿ ಕೆಲಸಕ್ಕಿದ್ದರು. ಮನೆಯ ಜವಾಬ್ದಾರಿ, ಸೇನೆ ಸೇರುವ ಉತ್ಸಾಹದಿಂದ 2001ರಲ್ಲಿ ಬೆಂಗಳೂರಲ್ಲಿ ನಡೆದಿದ್ದ ನೇಮಕಾತಿಗೆ ಹಾಜರಾದರು. ಪ್ರಥಮ ಸುತ್ತಿನಲ್ಲೇ ಆಯ್ಕೆಯೂ ಆದರು. ತರಬೇತಿ ಅವಧಿ ಬಳಿಕ ಮೊದಲ ಪೋಸ್ಟಿಂಗ್ ರಾಜಸ್ಥಾನದ ನಸೀರಾಬಾದ್‌ಗೆ ಆಯಿತು.
ಪತ್ನಿ ದಿವ್ಯಾ ಮತ್ತು ಮಗ ಕಶ್ಯಪ್ ಜತೆ ದಿನೇಶ್ ಆಪರೇಷನ್ ಪರಾಕ್ರಮ್
ಪಾಕಿಸ್ಥಾನ ಗಡಿಯಲ್ಲಿ ಉಗ್ರರ ಉಪಟಳ ಹೇಳತೀರದು. ಸದಾ ಭಾರತದ ಗಡಿಯೊಳಕ್ಕೆ ನುಗ್ಗುತ್ತಾರೆ. ಇದನ್ನು ತಡೆಯಲೆಂದೇ ಸೇನೆ ಆಪರೇಷನ್ ಪರಾಕ್ರಮ್ ನಡೆಸಿತ್ತು. ಇದರಲ್ಲಿ ದಿನೇಶ್ ಅವರ ತಂಡವೂ ಭಾಗಿಯಾಗಿತ್ತು. ಶತ್ರುಗಳು ಗಡಿ ದಾಟದಂತೆ ಭೂಮಿಯ ತಳಭಾಗದಲ್ಲಿ ಬಾಂಬ್‌ಗಳನ್ನು ಹುದುಗಿಸಿಡುವ ಕಾರ್ಯಾಚರಣೆಯಲ್ಲಿ ಭಾಗಿಯಾದರು. ಒಂದು ವೇಳೆ ನುಸುಳಿದ್ದೇ ಆದಲ್ಲಿ ಯಾರೇ ಆದರೂ ಉಡೀಸ್ ಆಗುವಂತೆ ಇತ್ತು ಈ ಕಾರ್ಯಾಚರಣೆ.
Related Articles
ಒಳನುಸುಳುವಿಕೆ ತಡೆಯಲು ಭೂಸೇನೆ ಎಂಜಿನಿಯರಿಂಗ್ ತಂಡ ಜಮ್ಮು ಮತ್ತು ಕಾಶ್ಮೀರದಲ್ಲಿ ಆಪರೇಷನ್ ದಿವಾರ್ ಕಾರ್ಯಾಚರಣೆ ನಡೆಸಿತು. ಇದರಲ್ಲಿ ಗಡಿಯುದ್ದಕ್ಕೂ ಬೇಲಿ ಹಾಕುವ ಕೆಲಸ ನಿರ್ವಹಿಸಲಾಯಿತು. ಅತಿ ಬಂದೋಬಸ್ತ್ನ ಬೇಲಿ ಇದಾಗಿದ್ದು, ನುಸುಳಲು, ತುಂಡರಿಸಲು ಅಸಾಧ್ಯವಾದ ರೀತಿಯಲ್ಲಿ ನಿರ್ಮಿಸಲಾಯಿತು. ಇದರೊಂದಿಗೆ ಭಾರತ-ಅಮೆರಿಕ ಸೇನೆಯ ಜಂಟಿ ಸಮರಾಭ್ಯಾಸ, ಕಾರವಾರ ಸೀಬರ್ಡ್ ನೌಕಾನೆಲೆ, ನಕ್ಸಲ್ ಪೀಡಿತ ಪ್ರದೇಶದಲ್ಲಿ ನಡೆದ ಸೇನಾ ಕಾರ್ಯಾಚರಣೆಗಳಲ್ಲೂ ದಿನೇಶ್ ಕೆಲಸ ಮಾಡಿದ್ದಾರೆ.
Advertisement
ವಿವಿಧೆಡೆ ಸೇವೆಎಂಜಿನಿಯರಿಂಗ್ ವಿಭಾಗದಲ್ಲಿ ಮುಂಬಯಿ, ಪಶ್ಚಿಮ ಬಂಗಾಲ ಮತ್ತಿತರೆಡೆ ದಿನೇಶ್ ಕೆಲಸ ಮಾಡಿದ್ದರು. 2009ರಲ್ಲಿ ಆಂಧ್ರ ಪ್ರದೇಶದ ನಾಗಾರ್ಜುನ ಸಾಗರ ಭದ್ರತೆಗೆ ನಿಯೋಜಿತರಾಗಿದ್ದರು. ನೆರೆ, ಭೀಕರ ಮಳೆ ಸಂದರ್ಭವೂ ಈ ಎಂಜಿನಿಯರಿಂಗ್ ತಂಡ ಆಪದ್ಭಾಂಧವರಂತೆ ಕೆಲಸ ನಿರ್ವಹಿಸುತ್ತದೆ. ದುರ್ಗಮ ಪ್ರದೇಶಕ್ಕೆ ತೆರಳಲು ಅನುಕೂಲ ಮಾಡಿಕೊಡುವುದು, ರಕ್ಷಣೆಗೆ ನೆರವು, ತೆರವು ಕಾರ್ಯಾಚರಣೆ, ವಿದ್ಯುತ್ ವೈಫಲ್ಯ ಸರಿಪಡಿಸುವಿಕೆ, ಕಡಿದು ಹೋದ ರಸ್ತೆಗಳ ದುರಸ್ತಿ ಮತ್ತಿತರ ಸೇವೆಗೆ ಎಂಜಿನಿಯರಿಂಗ್ ತಂಡ ಮುಂದಾಗುತ್ತದೆ. ದೇಶಸೇವೆಯೇ ಭಾಗ್ಯ
ಸೇನೆ ಸೇರಲು ನನಗೆ ಅಣ್ಣನೇ ಸ್ಫೂರ್ತಿ ನೀಡಿದ್ದರು. 1947ರಲ್ಲಿ ಸೇನೆ ಸೇರಿದ್ದ ನನ್ನ ದೊಡ್ಡಪ್ಪ ಹಲವಾರು ವರ್ಷ ಸೇವೆ ಸಲ್ಲಿಸಿದ್ದರು. ಅವರು ಊರಿಗೆ ಬಂದಾಗ ಪುಟ್ಟಮಕ್ಕಳಾದ ನಮಗೆ ಹೇಳುತ್ತಿದ್ದ ಕಥೆಗಳು ರೋಮಾಂಚನ ಮೂಡಿಸುತ್ತಿದ್ದವು. ಬಳಿಕ ನನ್ನ ದೊಡ್ಡಪ್ಪನ ಮಗನೂ ಸೇನೆಗೆ ಸೇರಿದ್ದರು. ಇದು ನನಗೂ ಸೇನೆಗೆ ಸೇರಲು ಪ್ರೋತ್ಸಾಹ ನೀಡಿತು. ತರಬೇತಿ ಅವಧಿ ಅತಿ ಕಠಿನವಿದ್ದು, ಸೇನೆಯಲ್ಲಿ ದೇಶ ಸೇವೆಯ ಭಾಗ್ಯ ಎಲ್ಲರಿಗೂ ಸಿಗದು. ಈಗ 17 ವರ್ಷ ಸೇನೆಯಲ್ಲಿ ಸೇವೆ ಮಾಡಿದ ತೃಪ್ತಿ ನನಗಿದೆ.
-ದಿನೇಶ್, ಭೂಸೇನೆ ಎಂಜಿನಿಯರಿಂಗ್ ವಿಭಾಗ ಯೋಧರನ್ನು ನೀಡುತ್ತಿರುವ ರಥಬೀದಿ ಶಾಲೆ
ಸುರತ್ಕಲ್‌ನ ನಮ್ಮ ರಥ ಬೀದಿ ಸರಕಾರಿ ಶಾಲೆ ಸೇನೆಗೆ ಯೋಧರನ್ನು ನೀಡುತ್ತ ಬಂದಿದೆ. ಸರಕಾರಿ ಶಾಲೆ ಎಂದು ಹೀಯಾಳಿಸುತ್ತಿದ್ದವರಿಗೆ ಇದೇ ಉತ್ತರ. ನನ್ನ ಜ್ಯೂನಿಯರ್ ಆಗಿದ್ದ ದಿನೇಶ್, ಇಲ್ಲೇ ಕಲಿತು ಸೇನೆಯ ಎಂಜಿನಿಯರಿಂಗ್ ವಿಭಾಗದಲ್ಲಿ ದೇಶಸೇವೆ ಮಾಡುತ್ತಿರುವುದು ನಮಗೆ, ಶಾಲೆಗೆ ಹೆಮ್ಮೆ ತಂದಿದೆ.
–ಅನಂತ ಶೆಟ್ಟಿಗಾರ್,
ಸ್ನೇಹಿತ ರಥಬೀದಿ ಸುರತ್ಕಲ್ ಲಕ್ಷ್ಮೀನಾರಾಯಣ ರಾವ್