ನಾನು ನಿಶ್ಚಿತಾರ್ಥಕ್ಕೆ ಹೋಗಲಿಲ್ಲ. ನನ್ನ ಬರುವಿಕೆಯ ನಿರೀಕ್ಷೆಯಲ್ಲಿದ್ದ ಗೆಳತಿಗೆ ಅವಮಾನ ಆದಂತಾಗಿ, ಮಾತೇ ನಿಲ್ಲಿಸಿಬಿಟ್ಟರು. ಫೋನ್ ಮಾಡಿದರೆ ಎತ್ತಲಿಲ್ಲ. ಮೆಸೇಜ್‌ಗೂ ಉತ್ತರವಿಲ್ಲ. ವಾಟ್ಸ್‌ಆ್ಯಪ್‌ನಲ್ಲಿ ನನ್ನನ್ನು ಬ್ಲಾಕ್ ಮಾಡಿಬಿಟ್ಟರು!
ಈ ಕೋವಿಡ್ 19ದಿಂದ ಆಗಿರುವ ತೊಂದರೆಗಳು ಒಂದೆರಡಲ್ಲ. ಲಾಕ್‌ಡೌನ್ ಮುಗಿದರೂ ಮನೆಯಿಂದ ಹೊರಗೆ ಹೋಗಲು ಭಯವಾಗುತ್ತಿದೆ. ನಾನಂತೂ ತೀರಾ ಅಗತ್ಯ ಇದ್ದರೆ ಮಾತ್ರ ಹೊರಗೆ ಹೋಗುತ್ತೇನೆಂದು ಶಪಥ ಮಾಡಿದ್ದೇನೆ. ಪರಿಸ್ಥಿತಿ ಹೀಗಿರುವಾಗಲೇ ಏನೇನೆಲ್ಲಾ ಆಗಿಹೋಯ್ತೋ ಕೇಳಿ: ಗೆಳತಿಯ ಮಗಳಿಗೆ ಮದುವೆ ನಿಶ್ಚಯವಾಯ್ತು. ಆಕೆ ನನಗೆ ಮೂರು ವರ್ಷಗಳಿಂದ ಪರಿಚಯ. ನಾಲ್ಕು ಬೀದಿಯ ಆಚೆಯಲ್ಲಿರುವ ಅವರ ಮನೆಗೆ, ವಾರಕ್ಕೊಮ್ಮೆ ಭೇಟಿ ನೀಡುವುದು ನಡೆದೇ ಇತ್ತು.
ಮನೆಯಲ್ಲೇ ಸರಳವಾಗಿ ನಿಶ್ಚಿತಾರ್ಥ ಇಟ್ಟುಕೊಂಡಿದ್ದ ಅವರು, ಏಳೆಂಟು ಬಾರಿ ಫೋನ್ ಮಾಡಿ ಆಮಂತ್ರಿಸಿದ್ದರು. “ಸಂಬಂಧಿಕರಲ್ಲೂ ಎಲ್ಲರನ್ನೂ ಕರೆದಿಲ್ಲ. ನಿಮ್ಮನ್ನು ಕರೆಯುತ್ತಿದ್ದೇವೆ. ಎಲ್ಲರೂ ಬರಲೇಬೇಕು’ ಅಂತ ಒತ್ತಾಯಿಸಿದ್ದರು. ನಿಶ್ಚಿತಾರ್ಥಕ್ಕೆ ಇನ್ನೂ ಎರಡು ದಿನವಿರುವಾಗ, ಮಗನ ಆಫೀಸಿನಲ್ಲೇ ಒಬ್ಬರು ಹೋಂ ಕ್ವಾರಂಟೈನ್ ಆಗಿಬಿಟ್ಟರು. ಅವರ ಜೊತೆಯಲ್ಲಿ ಓಡಾಡಿದ್ದ ನನ್ನ ಮಗನಿಗೂ, ಮನೆಯಿಂದಲೇ ಕೆಲಸ ಮಾಡಿ ಎಂದು ಕಂಪನಿಯಿಂದ ಆದೇಶ ಬಂತು.
ಏನಾಗಿತ್ತೆಂದರೆ- ಮಗನ ಗೆಳೆಯನ ಅಪಾಟ್ ಮೆಂಟ್‌ನಲ್ಲಿ ಒಬ್ಬರಿಗೆ ಕೋವಿಡ್ 19 ತಗುಲಿತ್ತು. ಆ ಮನೆಯವರ ಜೊತೆ ಸಂಪರ್ಕದಲ್ಲಿದ್ದ ಗೆಳೆಯನ ಕುಟುಂಬವೂ ಕ್ವಾರಂಟೈನ್ ಆದರು. ಅವರ ಪಕ್ಕದ ಕ್ಯಾಬಿನ್‌ನಲ್ಲಿ ಕೂರುವ ಮಗನೂ ಶಂಕಿತನಾಗ ಬೇಕಾಯ್ತು! ಮಗನ ಜೊತೆಯಲ್ಲಿದ್ದ ನಮ್ಮಿಂದಲೂ ಇತರರಿಗೆ ಅಪಾಯ ಆಗಬಹುದಲ್ವಾ? ಸೋಂಕು ಹರಡಿರುವ ಚಾನ್ಸ್ ಕಡಿಮೆ ಇದ್ದರೂ, ಜಾಗ್ರತೆ ಮಾಡಬೇಕಾಗಿದ್ದು ನಮ್ಮ ಕರ್ತವ್ಯ ಅಂದುಕೊಂಡು, ನಮ್ಮನ್ನು ನಾವೇ ಕ್ವಾರಂಟೈನ್ ಮಾಡಿಕೊಂಡೆವು.
“ಅಮ್ಮಾ, ನೀನು ನಿಶ್ಚಿತಾರ್ಥಕ್ಕೆ ಹೋಗ್ಬೇಡ. ಸುಮ್ಮನೆ ನಮ್ಮಿಂದ ಅವರಿಗೆ ತೊಂದರೆ ಯಾಕೆ? ನಮ್ ಆಫೀಸಲ್ಲಿ ಹೀಗಾಯ್ತು ಅಂತ ಯಾರಿಗೂ ಹೇಳ್ಬೇಡ. ಆಮೇಲೆ ಒಂದಕ್ಕೆ ಹತ್ತು ಸುಳ್ ಸುದ್ದಿ ಹಬ್ಬಿಸ್ತಾರೆ ಜನ…’ ಅಂತ ಮಗ ಎಚ್ಚರಿಸಿದ. ನಂಗೂ ಅದೇ ಸರಿ ಅನ್ನಿಸಿತು. ಫಂಕ್ಷನ್‌ನ ಹಿಂದಿನ ದಿನ ಗೆಳತಿಗೆ ಫೋನ್ ಮಾಡಿ- ಜನ ಎಲ್ಲೆಲ್ಲಿಂದ ಬಂದಿರ್ತಾರೋ ಏನೋ. ನಂಗೂ ಭಯ ಆಗ್ತಿದೆ. ನಾಳೆ ಬರದಿದ್ರೆ ಬೇಜಾರಾಗ್ಬೇಡಿ’ ಅಂದೆ.
ಅದನ್ನು ಸೀರಿಯಸ್ಸಾಗಿ ತಗೊಳ್ಳದ ಅವರು, ಏನಾಗಲ್ಲ ಬನ್ನಿ ಅಂತ ಒತ್ತಾಯಿಸಿ ಫೋನಿಟ್ಟರು. ಕೊನೆಗೂ ನಾನು ಫಂಕ್ಷನ್‌ಗೆ ಹೋಗಲಿಲ್ಲ. ನನ್ನ ನಿರೀಕ್ಷೆಯಲ್ಲಿದ್ದ ಗೆಳತಿಗೆ ಅವಮಾನ ಆದಂತಾಗಿ, ಮಾತೇ ನಿಲ್ಲಿಸಿಬಿಟ್ಟರು. ಮಾರನೇದಿನ ಫೋನ್ ಮಾಡಿದರೆ ಎತ್ತಲಿಲ್ಲ. ಮೆಸೇಜ್‌ಗೂ ಉತ್ತರವಿಲ್ಲ. ವಾಟ್ಸ್‌ಆ್ಯಪ್‌ನಲ್ಲಿ ನನ್ನನ್ನು ಬ್ಲಾಕ್ ಮಾಡಿಬಿಟ್ಟರು! ಮಗನ ಹದಿನಾಲ್ಕು ದಿನದ ಹೋಂ ಕ್ವಾರಂಟೈನ್ ಮುಗಿಯುವವರೆಗೂ ಸತ್ಯ ವಿಷಯ ಹೇಳಲು ಭಯ. ಹೇಳುವ ಅವಕಾಶವನ್ನು ಗೆಳತಿ ಕೊಡಲೂ ಇಲ್ಲ ಬಿಡಿ.
ಮೂರು ವರ್ಷದ ಸ್ನೇಹ, ಕೋವಿಡ್ 19ದಿಂದ ಹೀಗೆ ಮುರಿದು ಬಿದ್ದಿತ್ತು. ಮಗನಿಗೆ ವಿಷಯ ಹೇಳಿದಾಗ, “ನಾನೇ ಆಂಟಿಗೆ ಫೋನು ಮಾಡ್ತೀನಿ’ ಅಂದ. ಪರೋಕ್ಷವಾಗಿ ಅವನಿಂದ ಆದ ಬ್ರೇಕ್ ಅಪ್ ಅನ್ನು ಅವನೇ ಸರಿಪಡಿಸಿದ. ವಿಷಯ ಹೀಗಂತ ನನ್ನತ್ರ ಹೇಳಬಹುದಿತ್ತಲ್ಲ ಅಂತ ಗೆಳತಿಯೂ, ನೀವು ಹೇಳ್ಳೋಕೆ ಬಿಟ್ಟರೆ ತಾನೇ ಅಂತ ನಾನೂ ಈಗ ಕೋಳಿ ಜಗಳ ಮಾಡುತ್ತಿದ್ದೇವೆ.
* ಸುನಂದಾ ಪಿ.