Advertisement

ಲೋಕ ಸಮರಕ್ಕೂ ಮೊದಲೇ ದೋಸ್ತಿಗಳ ಕುಸ್ತಿ  

06:21 AM Mar 10, 2019 | Team Udayavani |

ಚಿಕ್ಕಬಳ್ಳಾಪುರ: ಕೇಂದ್ರದಲ್ಲಿ ಈ ಬಾರಿ ಅಧಿಕಾರ ಹಿಡಿಯಲೇಬೇಕೆಂಬ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸಬೇಕೆಂಬ ಜಪ ರಾಜ್ಯದ ಆಡಳಿತರೂಢ ಮೈತ್ರಿ ಪಕ್ಷಗಳಾದ ಕಾಂಗ್ರೆಸ್‌, ಜೆಡಿಎಸ್‌ಗಳಲ್ಲಿ ಕೇಳಿ ಬರುತ್ತಿದ್ದರೆ, ಇತ್ತ ಚಿಕ್ಕಬಳ್ಳಾಪುರ  ಕ್ಷೇತ್ರದಲ್ಲಿ ಮಾತ್ರ ಚುನಾವಣೆಗೂ ಮೊದಲೇ ದೋಸ್ತಿಗಳ ನಡುವೆ ಕುಸ್ತಿ ಆರಂಭಗೊಂಡಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. 

Advertisement

ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್‌ ನಿಗಮ ಮಂಡಳಿ ಕೈ ತಪ್ಪಿದ್ದಕ್ಕೆ ಬಹಿರಂಗವಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಸಮರ ಸಾರಿದ್ದು, ನಿಗಮ ಮಂಡಳಿ ನನಗೆ ಪುಟಗೋಸಿಗೆ ಸಮ ಎಂದು ಆಕ್ರೋಶ ಹೊರ ಹಾಕಿದ್ದರು. ಇದರ ಬೆನ್ನಲ್ಲೇ ಜೆಡಿಎಸ್‌ ನಾಯಕರು ಕೂಡ ಸುದ್ದಿಗೋಷ್ಠಿ ನಡೆಸಿ ಕುಮಾರಸ್ವಾಮಿ ಅವರನ್ನು ಅವಹೇಳನ ಮಾಡುವುದು ನಿಲ್ಲಿಸದಿದ್ದರೆ ಪ್ರತಿಭಟನೆಗೆ ಇಳಿಯುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ. 

ಕ್ಷೇತ್ರದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮಿತ್ರ ಪಕ್ಷಗಳಲ್ಲಿಯೇ ಕಿತ್ತಾಟ ಬೀದಿಗೆ ಬಂದಿದ್ದು, ಇದು ಮುಂದೆ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಹೇಳುವುದಕ್ಕೆ ಆಗದು. ಚುನಾವಣೆಯನ್ನು ಮೈತ್ರಿ ಪಕ್ಷಗಳು ಕ್ಷೇತ್ರದಲ್ಲಿ ಒಟ್ಟಾಗಿ ಎದುರಿಸುತ್ತವೆಯೇ ಎಂಬ ಶಂಕೆ ವ್ಯಕ್ತವಾಗಿದೆ.

ಅಸಮಾಧಾನ: ಕಾಂಗ್ರೆಸ್‌ ಭದ್ರಕೋಟೆಯಾಗಿರುವ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಜೆಡಿಎಸ್‌ ಪಟ್ಟು ಹಿಡಿದಿರುವುದು ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಅಸಮಾಧಾನ ಭುಗಿಲೇಳುವಂತೆ ಮಾಡಿದ್ದು, ಈ ವಿಚಾರ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರಲ್ಲಿ ಪರಸ್ಪರ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದೆ. 

ಪಕ್ಷದ ವಿರುದ್ಧ ಕೆಲಸ: ಸ್ಥಳೀಯ ಜೆಡಿಎಸ್‌ ನಾಯಕರು ಕ್ಷೇತ್ರವನ್ನು ಈ ಬಾರಿ ಕಾಂಗ್ರೆಸ್‌ಗೆ ಬಿಟ್ಟು ಕೊಡದಂತೆ ಪಕ್ಷದ ವರಿಷ್ಠರ ಮೇಲೆ ತೀವ್ರ ಒತ್ತಡ ತಂದಿದ್ದಾರೆ. ಕಾಂಗ್ರೆಸ್‌ ಕೂಡ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡದಂತೆ ಪಕ್ಷದ ನಾಯಕರ ಮೇಲೆ ಒತ್ತಡ ಹೇರಿದ್ದು, ಇತ್ತೀಚೆಗೆ ಶಾಸಕ ಸುಧಾಕರ್‌ ಬಹಿರಂಗವಾಗಿಯೇ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟರೆ ದಳದ ವಿರುದ್ಧ ಕೆಲಸ ಮಾಡುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದರು. 

Advertisement

ಪಟಾಕಿ ಸಿಡಿಸಿ ವಿಜಯೋತ್ಸವ: ಕಳೆದೊಂದು ವಾರದಿಂದ ಕ್ಷೇತ್ರದಲ್ಲಿ ನಡೆಯುವ ಪ್ರತಿ ಸಭೆ, ಸಮಾರಂಭಗಳಲ್ಲಿ ಕ್ಷೇತ್ರಕ್ಕೆ ಅನುದಾನ ಕೊಡುತ್ತಿಲ್ಲ, ಮೆಡಿಕಲ್‌ ಕಾಲೇಜಿಗೆ ನಯಾಪೈಸೆ ಕೊಡಲಿಲ್ಲ, ಎತ್ತಿನಹೊಳೆ ಯೋಜನೆಗೆ ಭೂ ಸ್ವಾಧೀನವಾಗಿಲ್ಲ, ನೀರಾವರಿ ಯೋಜನೆಗಳಿಗೆ ಅನುದಾನ ಕೊಡುತ್ತಿಲ್ಲ ಎಂದು ಮೈತ್ರಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದರ ನಡುವೆ ಶಾಸಕ ಸುಧಾಕರ್‌ಗೆ ನಿಗಮ ಮಂಡಳಿ ಕೈತಪ್ಪಿದ್ದಕ್ಕೆ ವಿರೋಧಿ ಪಾಳೆಯ ಅದರಲ್ಲೂ ಜೆಡಿಎಸ್‌ ಮುಖಂಡರು ನಗರದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿರುವುದು ಶಾಸಕ ಸುಧಾಕರ್‌ ಆಕ್ರೋಶಕ್ಕೆ ಕಾರಣವಾಗಿದೆ.

ಒಟ್ಟಾರೆ ರಾಜ್ಯದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಪಕ್ಷಗಳು ಬಿಜೆಪಿಯನ್ನು ಮಣಿಸಲು ತಂತ್ರ, ಪ್ರತಿ ತಂತ್ರಗಳನ್ನು ಹೂಡುತ್ತಾ ಸೀಟು ಹೊಂದಾಣಿಕೆ ಮೂಲಕ ಒಟ್ಟಾಗಿ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಉಭಯ ನಾಯಕರು ಮುಂದಾಗಿದ್ದಾರೆ. ಕ್ಷೇತ್ರದಲ್ಲಿ ಮಾತ್ರ ನಾನೊಂದು ತೀರಾ ನೀನೊಂದು ತೀರ ಎನ್ನುವಂತೆ ಚುನಾವಣೆಗೂ ಮೊದಲೇ ಉಭಯ ಪಕ್ಷಗಳ ಸಂಬಂಧ ಹಾವು, ಮುಂಗುಸಿಯಂತೆ ಆಗಿದೆ. 

ಕ್ಲೈಮಾಕ್ಸ್‌ ತಲುಪಿದ ಸೀಟು ಹಂಚಿಕೆ ವಿಚಾರ: ಕ್ಷೇತ್ರಕ್ಕಾಗಿ ರಾಜ್ಯ ಕಾಂಗ್ರೆಸ್‌,ಜೆಡಿಎಸ್‌ ನಾಯಕರಲ್ಲಿ ಹಗ್ಗಜಗ್ಗಾಟ ಮುಂದುವರಿದಿದ್ದು, ಯಾವ ಪಕ್ಷಕ್ಕೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಸಿಗಲಿದೆ ಎಂಬುದು ಮಾತ್ರ ಕೊನೆ ಗಳಿಗೆಯವರೆಗೂ ಹೇಳದ ಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ಮಾಜಿ ಪ್ರಧಾನಿ ದೇವೇಗೌಡರೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಇಚ್ಛಿಸಿದರೆ ಅನಿವಾರ್ಯವಾಗಿ ಕಾಂಗ್ರೆಸ್‌ ಬಿಟ್ಟು ಕೊಡಬೇಕಾಗುತ್ತದೆ. ಆದರೆ ದೇವೇಗೌಡರು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಹಾಗೂ ಅವರ ರಾಜಕೀಯ ಒಳತಂತ್ರ ಇನ್ನೂ ನಿಗೂಢವಾಗಿರುವುದು ಕುತೂಹಲ ಕೆರಳಿಸಿದ್ದು, ನಾಲ್ಕೈದು ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಲಾಗುತ್ತಿದೆ.
 
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆಯಾಗಿದೆ. ಕ್ಷೇತ್ರದಲ್ಲಿ ಜೆಡಿಎಸ್‌ ಒಮ್ಮೆ ಬಿಟ್ಟರೆ ಎಂದೂ ಗೆಲುವು ಸಾಧಿಸಿಲ್ಲ. ಈ ಭಾಗಕ್ಕೆ ಯಾವ ಸರ್ಕಾರವು ರೂಪಿಸದ  ನೀರಾವರಿ ಯೋಜನೆಗಳನ್ನು ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಅನುಮೋದನೆ ಪಡೆದು ಅನುಷ್ಠಾನಗೊಳಿಸಲು ಹಾಲಿ ಸಂಸದ ವೀರಪ್ಪ ಮೊಯ್ಲಿ ಅವರು ಶ್ರಮಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಮೊಯ್ಲಿಯವರೇ ಅಭ್ಯರ್ಥಿ ಆಗಬೇಕು.
-ಮರಳಕುಂಟೆ ಕೃಷ್ಣಮೂರ್ತಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟರೂ ಶಾಸಕ ಸುಧಾಕರ್‌ ಕೆಲಸ ಮಾಡುವುದಿಲ್ಲ. ಕ್ಷೇತ್ರದಲ್ಲಿ  ಕಾಂಗ್ರೆಸ್‌ ಸೋತರೆ ಜೆಡಿಎಸ್‌ಗೆ ಕೆಟ್ಟ ಹೆಸರು ಬರುತ್ತದೆ. ಜೆಡಿಎಸ್‌ಗೆ ಬಿಟ್ಟು ಕೊಟ್ಟರೆ ನೂರಕ್ಕೆ ನೂರರಷ್ಟು ಜೆಡಿಎಸ್‌ ಗೆಲುವು ಸಾಧಿಸುತ್ತದೆ. ಈ ಬಾರಿ ಜೆಡಿಎಸ್‌ಗೆ  ಕ್ಷೇತ್ರ ಬಿಟ್ಟುಕೊಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇವೆ.
-ಕೆ.ಎಂ.ಮುನೇಗೌಡ, ಜಿಪಂ ಸದಸ್ಯ (ಜೆಡಿಎಸ್‌)

* ಕಾಗತಿ ನಾಗರಾಜಪ್ಪ 

Advertisement

Udayavani is now on Telegram. Click here to join our channel and stay updated with the latest news.

Next