ಮುಂಬಯಿ: ಶುದ್ಧ ಮನೋಭಾವ, ವಿಶಾಲ ಮನಸ್ಸು, ಪ್ರೀತಿ-ಕರುಣೆ ತುಂಬಿದ ಹೃದಯ ಎಲ್ಲರ ಬಗ್ಗೆ ಒಳ್ಳೆಯ ಚಿಂತನೆ ಪ್ರತಿಯೊಂದು ಸಂಘಟನೆಗಳ ಪ್ರಾಮುಖ್ಯ ಸಿದ್ಧಾಂತವಾಗಿರಬೇಕು. ಈ ನಿಟ್ಟಿನಲ್ಲಿ ಮುಂದುವರಿದಾಗ ಮಾತ್ರ ಅದು ಜನಮನ್ನಣೆ ಹೊಂದಲು ಯೋಗ್ಯವಾಗಿರುತ್ತದೆ. ಕಣಂಜಾರು ಗ್ರಾಮಸ್ಥರನ್ನು ಒಟ್ಟುಗೂಡಿಸಿ ಜನ್ಮಭೂಮಿ ಹಾಗೂ ಕರ್ಮಭೂಮಿಯ ಋಣ ಸಂದಾಯದ ಸಂಭ್ರಮ ಇಂದು ಅರ್ಥಪೂರ್ಣವಾಗಿ ಮೇಳೈಸಿದೆ. ಇಂತಹ ಕಾರ್ಯಕ್ರಮಗಳಿಂದ ನಾವೆಲ್ಲ ಒಂದೇ, ನಾವೆಲ್ಲ ಬಂಧು ಎಂಬ ಸಂದೇಶ ರವಾನೆಯಾಗುತ್ತದೆ ಎಂದು ಬಂಟರ ಸಂಘ ಮುಂಬಯಿ ಇದರ ವಸಾಯಿ-ಡಹಾಣೂ ಪ್ರಾ. ಸಮಿತಿ ಸಂಚಾಲಕ ಶಶಿಧರ ಕೆ. ಶೆಟ್ಟಿ ನುಡಿದರು.
ನ. 17 ರಂದು ಸಂಜೆ ನಲಸೋಪರ ಪಶ್ಚಿಮದ ಹೊಟೇಲ್ ಗ್ಯಾಲಕ್ಸಿ ಸಭಾಂಗಣದಲ್ಲಿ ಫ್ರೆಂಡ್ಸ್ ಸರ್ಕಲ್ ಕಣಂಜಾರು ಮುಂಬಯಿ ಇದರ 15 ನೇ ವಾರ್ಷಿ ಕೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘಟನೆಯಲ್ಲಿ ಆರೋಗ್ಯಕರ ಸ್ಪರ್ಧೆಯಿರಬೇಕು. ಇದರಿಂದ ಅಭಿವೃದ್ಧಿಗಳ ಬೆಳವಣಿಗೆ, ಬಂಧಮುಕ್ತ ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ಸಾಧಕರನ್ನು ಗುರುತಿಸಿ ಸಮ್ಮಾನಿಸುವುದು ಅಭಿನಂದನೀಯ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಬಂಟರ ಸಂಘ ಮುಂಬಯಿ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್ ಅವರು ಮಾತನಾಡಿ, ಗ್ರಾಮೀಣಾಭಿವೃದ್ಧಿಯಲ್ಲಿ ಮಹತ್ತರ ಸಾಧನೆಗೈದ ಪ್ರವೀಣ್ ಶೆಟ್ಟಿ ಕಣಂಜಾರು ನೇತೃತ್ವದ ಫ್ರೆಂಡ್ಸ್ ಸರ್ಕಲ್ ಕಣಂಜಾರು ಮುಂಬಯಿ ಕಳೆದ 15 ವರ್ಷಗಳಿಂದ ನಿರಂತರ ಚಟುವಟಿಕೆಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಅರ್ಹ ವ್ಯಕ್ತಿಗಳನ್ನು ಗುರುತಿಸಿ, ಏಳು ಮಂದಿ ಸಾಧಕರನ್ನು ಸಮ್ಮಾನಿಸಿದ ರೀತಿಯ ಅಭಿನಂದನೀಯವಾಗಿದೆ ಎಂದರು.
ದಕ್ಷಿಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿರಾರ್ ಶಂಕರ್ ಬಿ. ಶೆಟ್ಟಿ, ಕಾರ್ಕಳ ತಾ.ಪಂ.ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಆರ್ಯಭಟ ಪ್ರಶಸ್ತಿ ಪುರಸ್ಕೃತ ಹುರ್ಲಾಡಿ ರಘುವೀರ್ ಶೆಟ್ಟಿ, ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ, ವೇಟ್‌ಲಿಫ್ಟರ್ ಅಜಯ್ ಶೆಟ್ಟಿ, ಸಂಘಟಕ ನವೀನ್ ಪಡುಇನ್ನ, ಸಮಾಜ ಸೇವಕ ತಾರನಾಥ ಶೆಟ್ಟಿ ಇವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.
ಶೋಭಾ ಸುವರ್ಣ ಕಣಂಜಾರು, ಶ್ರದ್ಧಾ ಶೆಟ್ಟಿ, ವಿಜಯ ಶೆಟ್ಟಿ ಕುತ್ತೆತ್ತೂರು, ಅರುಣ್ ಶೆಟ್ಟಿ ಅವರು ಸಮ್ಮಾನ ಪತ್ರ ವಾಚಿಸಿದರು. ಜ್ಯೋತಿಷಿ ಅಶೋಕ್ ಪುರೋಹಿತ್, ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ, ಬಂಟರ ಸಂಘ ಮುಂಬಯಿ ವಸಾಯಿ-ಡಹಾಣೂ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಂತ್ ಆರ್. ಪಕ್ಕಳ, ವಸಾಯಿ ಮಣಿಕಂಠ ಸೇವಾ ಸಮಿತಿಯಿ ಗೌರವಾಧ್ಯಕ್ಷ ಕರ್ನೂರು ಶಂಕರ ಆಳ್ವ ಅವರು ಮಾತನಾಡಿ ಶುಭಹಾರೈಸಿದರು.
ಕಣಂಜಾರು ಪ್ರವೀಣ್ ಶೆಟ್ಟಿ ಸ್ವಾಗತಿಸಿದರು. ಸತೀಶ್ ಎರ್ಮಾಳ್ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಕಲಾಪೋಷಕರಾದ ಹರೀಶ್ ಶೆಟ್ಟಿ ಗುರ್ಮೆ, ಪಾಂಡು ಎಲ್. ಶೆಟ್ಟಿ, ಒ. ಪಿ. ಪೂಜಾರಿ, ದೇವೇಂದ್ರ ಬುನ್ನನ್, ಜಯಾ ಅಶೋಕ್ ಶೆಟ್ಟಿ, ಶುಭಾ ಸತೀಶ್ ಶೆಟ್ಟಿ, ಮಂಜುನಾಥ ಶೆಟ್ಟಿ, ಸುಪ್ರೀತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪರಿಸರದ ಸಂಘ-ಸಂಸ್ಥೆಗಳಿಂದ ನೃತ್ಯ ವೈವಿಧ್ಯ, ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ಇದರ ಕಲಾವಿದರಿಂದ ಬಂಜಿಗ್ ಹಾಕೊಡಿc ನಾಟಕ ಪ್ರದರ್ಶನಗೊಂಡಿತು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಚಿತ್ರ-ವರದಿ : ರಮೇಶ್ ಅಮೀನ್