Advertisement

ವಿಮಾನ ಏರದ ತಾಜಾ ಮೀನು! ಕರಾವಳಿಯ ರಫ್ತು ವಹಿವಾಟಿಗೆ ಹಿನ್ನಡೆ

12:26 AM Oct 20, 2022 | Team Udayavani |

ಮಂಗಳೂರು:ಕರಾವಳಿಯ ತಾಜಾ ಮೀನಿನ ರಫ್ತಿಗೆ ವಿಶೇಷ ಒತ್ತು ನೀಡಲಾಗು ವುದು ಎಂದು ರಾಜ್ಯ ಸರಕಾರ ಭರವಸೆ ನೀಡುತ್ತಿದ್ದರೂ ಮಂಗಳೂರಿನಿಂದ ವಿದೇಶಕ್ಕೆ ಮೀನು ಸಾಗಿಸಲು ಇರುವ ತೊಡಕು ಇನ್ನೂ ನಿವಾರಣೆಯಾಗಿಲ್ಲ.”

Advertisement

ಮೀನು ರಫ್ತು ಕ್ಷೇತ್ರದಲ್ಲಿ ಆಂಧ್ರಪ್ರದೇಶವು ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಕರ್ನಾಟಕ ದಲ್ಲಿಯೂ ರಫ್ತು ಕ್ಷೇತ್ರಕ್ಕೆ ಹೆಚ್ಚು ಬಲ ನೀಡಲು ಅಧ್ಯಯನ ತಂಡವನ್ನು ಆಂಧ್ರಕ್ಕೆ ಕಳುಹಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ ಎಂದು ಇತ್ತೀಚೆಗೆ ಮುಖ್ಯಮಂತ್ರಿಗಳು ತಿಳಿಸಿದ್ದರು. ಆದರೆ ಮಂಗಳೂರಿನಿಂದ ವಿದೇಶಗಳಿಗೆ ತಾಜಾ ಮೀನು ಸಾಗಿಸಲು ವಿಮಾನಯಾನ ಸಂಸ್ಥೆಗಳು ನಿರಾಕರಿಸುತ್ತಿರುವುದರಿಂದ ವಿದೇಶದಲ್ಲಿ ಕರಾವಳಿ ಮೀನಿಗೆ ಬೇಡಿಕೆ ಇದ್ದರೂ ಸಾಗಾಟ ಮಾತ್ರ ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯ ನಿವಾರಣೆಯತ್ತ ಯಾರೂ ಗಮನಹರಿಸದಿರುವುದು ಆಶ್ಚರ್ಯ ತರಿಸಿದೆ.

5 ವರ್ಷಗಳ ಹಿಂದೆ ಮಂಗಳೂರಿನಿಂದ ಏರ್‌ ಇಂಡಿಯಾ ವಿಮಾನದ ಮೂಲಕ ತಾಜಾ ಮೀನು ರಫ್ತು ಮಾಡಲಾಗುತ್ತಿತ್ತು. ಆದರೆ ಪ್ಯಾಕಿಂಗ್‌ನಲ್ಲಿ “ಸೋರಿಕೆ’ ಆಗುತ್ತಿದೆ ಎಂಬ ಕಾರಣ ನೀಡಿ ವಿಮಾನ ಸಂಸ್ಥೆಯವರು ಮೀನು ಸಾಗಾಟ ಸ್ಥಗಿತಗೊಳಿಸಿದ್ದರು. ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ ಮೀನು ರಫ್ತಿಗೆ ಅವಕಾಶ ನೀಡಲು ಅವರು ಸಿದ್ಧರಿದ್ದಾರೆ. ಆದರೆ ವಿಮಾನಯಾನ ಸಂಸ್ಥೆಯವರ ಒಪ್ಪಿಗೆ ಅಗತ್ಯ ಎನ್ನುತ್ತಾರೆ.

69 ಸಾ.ಮೆ.ಟನ್‌ ಮೀನು ರಫ್ತು
ದ.ಕ., ಉಡುಪಿಯಿಂದ ವಾರ್ಷಿಕವಾಗಿ 69 ಸಾವಿರ ಮೆ.ಟನ್‌ ಮೀನು ರಫ್ತು ಮಾಡಲಾಗುತ್ತದೆ. ಶೀತಲೀಕೃತ ವ್ಯವಸ್ಥೆಯ ಮೀನು ರಫ¤ನ್ನು ನವಮಂಗಳೂರು ಬಂದರಿನಿಂದ ಹಡಗಿನ ಮೂಲಕ ಮಾಡಲಾಗುತ್ತದೆ. ಶೀತಲೀಕೃತ ಮೀನನ್ನು 9 ತಿಂಗಳವರೆಗೂ ಕಾಪಿಡಲು ಸಾಧ್ಯ. ಆದರೆ ತಾಜಾ ಮೀನನ್ನು 3-4 ದಿನಗಳಷ್ಟೇ ಇಡಬಹುದಾದ್ದರಿಂದ ವಿಮಾನದ ಮುಖೇನವೇ ರಫ್ತು ಮಾಡಬೇಕು.

ಸದ್ಯ ಬೆಂಗಳೂರು, ಗೋವಾ ಅಥವಾ ಕೋಯಿಕ್ಕೋಡ್‌, ತಿರುವನಂತಪುರಕ್ಕೆ ಮಂಗಳೂರು/ಮಲ್ಪೆಯಿಂದ ವಾಹನದ ಮೂಲಕ ಸಾಗಿಸಿ ಅಲ್ಲಿಂದ ವಿಮಾನದಲ್ಲಿ ರಫ್ತು ಮಾಡಲಾಗುತ್ತಿದೆ. ದುಬಾರಿ ವೆಚ್ಚ ಹಾಗೂ ಅಧಿಕ ಸಮಯ ಕೂಡ ಇದಕ್ಕೆ ಬೇಕಾಗುತ್ತದೆ.

Advertisement

“ಸಣ್ಣ ಸಂಗತಿಯನ್ನೇ ನೆಪವಾಗಿಸಿ ನಿತ್ಯದ ವ್ಯಾಪಾರಕ್ಕೆ ಸಮಸ್ಯೆ ಮಾಡಿರುವುದು ಸರಿಯಲ್ಲ. ಅಂತಾರಾಷ್ಟ್ರೀಯ ದರ್ಜೆಯಲ್ಲಿ ಮೀನು ಪ್ಯಾಕಿಂಗ್‌ ಮಾಡಲು ನಾವು ಬದ್ಧರಿದ್ದೇವೆ. ಮಂಗಳೂರಿನಿಂದ ಏರ್‌ಕಾರ್ಗೊ ವ್ಯವಸ್ಥೆ ಬೇಗನೇ ಜಾರಿಗೆ ಬರಲಿ’ ಎನ್ನುತ್ತಾರೆ ರಫ್ತು ವಹಿವಾಟು ನಡೆಸುತ್ತಿರುವ ಉದ್ಯಮಿ.

ತಾಜಾ ಮೀನನ್ನು ವಿಮಾನದ ಮೂಲಕ ರಫ್ತು ಮಾಡಲು ಮಂಗಳೂರಿನಲ್ಲಿ ಎದುರಾಗಿರುವ ತೊಡಕಿನ ಬಗ್ಗೆ ಮಾಹಿತಿ ಪಡೆದು ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸುವೆ.
– ಎಸ್‌. ಅಂಗಾರ,
ಸಚಿವರು, ಮೀನುಗಾರಿಕೆ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next