ಪ್ಯಾರಿಸ್: ಫ್ರಾನ್ಸ್‌ನಲ್ಲಿ ರವಿವಾರ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಅದಕ್ಕಾಗಿ ಬಹಿರಂಗ ಪ್ರಚಾರ ಈಗಾಗಲೇ ಮುಕ್ತಾಯವಾಗಿದೆ.
ಸದ್ಯ ಪ್ರಕಟವಾಗಿರುವ ಸಮೀಕ್ಷೆಯ ಪ್ರಕಾರ ಹಾಲಿ ಅಧ್ಯಕ್ಷ ಇಮ್ಯಾನ್ಯುವೆಲ್ ಮಾಕ್ರನ್ ತಮ್ಮ ಪ್ರತಿಸ್ಪರ್ಧಿ “ನ್ಯಾಶನಲ್ ರ್‍ಯಾಲಿ’ ಪಕ್ಷದ ಮರೈನ್ ಲೆ ಪೆನ್‌ಗಿಂತ ಕೊಂಚ ಮುಂದಿದ್ದಾರೆ.
ಹಾಲಿ ಅಧ್ಯಕ್ಷರಿಗೆ ಶೇ.57.5 ಮತಗಳು ಸಮೀಕ್ಷೆಯಲ್ಲಿ ಪ್ರಾಪ್ತವಾಗಿದ್ದರೆ, ಲೆ ಪೆನ್ ಅವರಿಗೆ ಶೇ.42.5 ಮತಗಳು ಬಂದಿವೆ. ಹೀಗಾಗಿ, ಸಮಬಲದ ಹೋರಾಟ ನಡೆಯುವ ನಿರೀಕ್ಷೆ ಇದೆ.
ಕರ್ನಾಟಕದಲ್ಲಿ ಹೆಚ್ಚು ಚರ್ಚೆಗೆ ಬಂದಿದ್ದ ಹಲಾಲ್ ಮತ್ತು ಹಿಜಾಬ್ ವಿಚಾರವೂ ಅಲ್ಲಿ ಪ್ರಸ್ತಾವಗೊಂಡಿದೆ. ಶುಕ್ರವಾರ ನಡೆದಿದ್ದ ಪ್ರಚಾರದ ವೇಳೆ, ಮರೈನ್ ಲೆ ಪೆನ್ ದೇಶವನ್ನು ಧರ್ಮದ ಆಧಾರದಲ್ಲಿ ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಮ್ಯಾಕ್ರಾನ್ ದೂರಿದ್ದರೆ, ಮ್ಯಾಕ್ರಾನ್ ಹಾಕಿಕೊಂಡಿರುವ ಪಿಂಚಣಿ ಯೋಜನೆಯು ದೇಶದ ಜನರನ್ನು ಜೀವ ನಪೂರ್ತಿ ದುಡಿಯುವಂತೆ ಮಾಡುತ್ತದೆ ಎಂದು ಮರೈನ್ ಆರೋಪಿಸಿದ್ದಾರೆ.
2017ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲೂ ಪರಸ್ಪರ ಎದುರಾಳಿಗಳಾಗಿದ್ದರು. ಅದರಲ್ಲಿ ರಾಜಕೀಯ ಕುಟುಂಬದಿಂದಲೇ ಬಂದಿರುವ ಮರೈನ್‌ರನ್ನು ಆಗ ತಾನೆ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ಮ್ಯಾಕ್ರಾನ್ ಅತ್ಯಂತ ಕಡಿಮೆ ಅಂತರದಲ್ಲಿ ಸೋಲಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.