Advertisement
ಶನಿವಾರದ ಮುಖಾಮುಖೀಯಲ್ಲಿ ಹೋಲ್ಜರ್ ರುನೆ ಆರ್ಜೆಂಟೀನಾದ ಅರ್ಹತಾ ಆಟಗಾರ ಜೆನರೊ ಆಲ್ಬರ್ಟೊ ಒಲಿವಿರಿ ಅವರನ್ನು 6-4, 6-1, 6-3 ನೇರ ಸೆಟ್‌ಗಳಲ್ಲಿ ಮಣಿಸಿದರು.
ಇಗಾ ಸ್ವಿಯಾಟೆಕ್ ಅವರಿಗೆ ಚೀನದ ಕ್ಸಿನ್ಯು ವಾಂಗ್ ಸುಲಭದ ತುತ್ತಾದರು. ಅವರಿಗೆ ಒಂದೂ ಅಂಕ ಗಳಿಸಲಾಗಲಿಲ್ಲ. ಸ್ವಿಯಾಟೆಕ್ 6-0, 6-0 ಅಂತರದ ಜಯ ಒಲಿಸಿಕೊಂಡರು. ಇದು 2017ರ ಬಳಿಕ ಫ್ರೆಂಚ್ ಓಪನ್‌ನಲ್ಲಿ ದಾಖಲಾದ 6-0, 6-0 ಅಂತರದ ಮೊದಲ ಜಯಭೇರಿ. ಅಂದು ಫ್ರಾಂಕೊಯಿಸ್ ಅಬಂಡಾ ಅವರನ್ನು ಕ್ಯಾರೋಲಿನ್ ವೋಜ್ನಿಯಾಕಿ ಒಂದೂ ಅಂಕ ನೀಡದೆ ಹಿಮ್ಮೆಟ್ಟಿಸಿದ್ದರು.
Related Articles
Advertisement
ಜೊಕೋವಿಕ್, ಅಲ್ಕರಾಜ್ ಗೆಲುವಿನ ಓಟ
22 ಗ್ರಾನ್‌ಸ್ಲಾಮ್ ಪ್ರಶಸ್ತಿಗಳ ಸರದಾರ ನೊವಾಕ್ ಜೊಕೋವಿಕ್ ಮತ್ತು ವಿಶ್ವದ ನಂ.1 ಟೆನಿಸಿಗ ಕಾರ್ಲೋಸ್ ಅಲ್ಕರಾಜ್ 4ನೇ ಸುತ್ತಿಗೆ ಮುನ್ನಡೆದರು.2 ಬಾರಿಯ ಫ್ರೆಂಚ್ ಓಪನ್ ಪ್ರಶಸ್ತಿ ವಿಜೇತ ಜೊಕೋವಿಕ್ ಸ್ಪೇನ್‌ನ ಅಲೆಕ್ಸಾಂಡ್ರೊ ಡೇವಿಡೋವಿಕ್ ಫೋಕಿನ ವಿರುದ್ಧ ನೇರ ಸೆಟ್‌ಗಳಿಂದ ಮೇಲುಗೈ ಸಾಧಿಸಿದರೂ ಇದೇನೂ
ಸುಲಭ ಗೆಲುವಾಗಿರಲಿಲ್ಲ. 29ನೇ ಶ್ರೇಯಾಂಕಿತ ಡೇವಿಡೋವಿಕ್ ಮೊದಲೆರಡು ಸೆಟ್‌ಗಳನ್ನು ಟೈ- ಬ್ರೇಕರ್‌ಗಳ ತನಕ ಎಳೆದೊಯ್ದರು. ಆದರೆ ಜೊಕೋ ಅನುಭವದ ಮುಂದೆ ಡೇವಿಡೋವಿಕ್ ಆಟ ನಡೆಯಲಿಲ್ಲ. ಅಂತಿಮವಾಗಿ ಜೊಕೋ 7-6 (7-4), 7-6 (7-5), 6-2ರಿಂದ ಗೆದ್ದರು. ಇದರೊಂದಿಗೆ ಜೊಕೋವಿಕ್ ಫ್ರೆಂಚ್ ಓಪನ್‌ನಲ್ಲಿ ಸತತ 14 ಸಲ 4ನೇ ಸುತ್ತು ತಲುಪಿದಂತಾಯಿತು. ಜೊಕೋವಿಕ್ ಅವರ ಮುಂದಿನ ಎದುರಾಳಿ ಪೆರುವಿನ ಜುವಾನ್ ಪಾಬ್ಲೊ ವಾರಿಲ್ಲಸ್. ಇನ್ನೊಂದು ಪಂದ್ಯದಲ್ಲಿ ವಾರಿಲ್ಲಸ್ 3-6, 6-3, 7-6 (7-3), 4-6, 6-2 ಅಂತರದಿಂದ ಪೋಲೆಂಡ್‌ನ ಹ್ಯೂಬರ್ಟ್ ಹುರ್ಕಾಜ್‌ಗೆ ಸೋಲುಣಿಸಿದರು. ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಅವರದು ತುಸು ದೊಡ್ಡ ಬೇಟೆ. ಕೆನಡಾದ ಡೆನ್ನಿಸ್ ಶಪೊವಲೋವ್ ವಿರುದ್ಧ ಅವರು 6-1, 6-4, 6-2 ಅಂತರದ ಜಯ ಸಾಧಿಸಿದರು. ಇನ್ನು ಇಟಲಿಯ 17ನೇ ಶ್ರೇಯಾಂಕದ ಆಟಗಾರ ಲೊರೆಂಜೊ ಮುಸೆಟ್ಟಿ ವಿರುದ್ಧ ಸೆಣಸಲಿದ್ದಾರೆ.
ಗ್ರೀಕ್‌ನ ಸ್ಟೆಫನಸ್ ಸಿಸಿಪಸ್ ಕೂಡ 4ನೇ ಸುತ್ತು ತಲುಪಿದ್ದಾರೆ. ಆರ್ಜೆಂಟೀನಾದ ಡೀಗೊ ಶಾರ್ಟ್ಸ್ಮನ್ ವಿರುದ್ಧ 6-2, 6-2, 6-3 ಅಂತರದ ಗೆಲುವು ಸಾಧಿಸಿದರು. ಹಿಂದೆ ಸರಿದ ಎಲೆನಾ ರಿಬಕಿನಾ ಹಾಲಿ ವಿಂಬಲ್ಡನ್ ಚಾಂಪಿಯನ್, ವಿಶ್ವದ ನಂ.4 ಆಟಗಾರ್ತಿ, ಕಜಾಕ್‌ಸ್ಥಾನದ ಎಲೆನಾ ರಿಬಕಿನಾ ಅನಾರೋಗ್ಯದ ಕಾರಣದಿಂದ ಫ್ರೆಂಚ್ ಓಪನ್ ಪಂದ್ಯಾವಳಿಯಿಂದ ಹಿಂದೆ ಸರಿದರು. ಅವರು ಶನಿವಾರ ಸ್ಪೇನ್‌ನ ಸಾರಾ ಸೋರಿಬೆಸ್ ಟೊರ್ಮೊ ವಿರುದ್ಧ 3ನೇ ಸುತ್ತಿನ ಪಂದ್ಯ ಆಡಬೇಕಿತ್ತು. “ಕಳೆದ ಎರಡು ದಿನಗಳಿಂದ ನನ್ನ ಆರೋಗ್ಯ ಸರಿ ಇಲ್ಲ. ಜ್ವರದಿಂದಾಗಿ ಎರಡು ರಾತ್ರಿ ನಿದ್ದೆ ಇಲ್ಲದೆ ಕಳೆದಿದ್ದೇನೆ. ಇಂದು ವಾರ್ಮ್ಅಪ್ ಆಗಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಇದು ವೈರಲ್ ಫಿವರ್ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಕೂಟದಿಂದ ಹಿಂದೆ ಸರಿಯಲು ನಿರ್ಧರಿಸಿದೆ’ ಎಂಬುದಾಗಿ ರಿಬಕಿನಾ ಹೇಳಿದರು.
ಎಲೆನಾ ರಿಬಕಿನಾ ಈ ಕೂಟದ ನೆಚ್ಚಿನ ಆಟಗಾರ್ತಿಯಾಗಿದ್ದರು. ಟೊರ್ಮೊ ಅವರಿಗೆ ಮುಂದಿನ ಸುತ್ತಿಗೆ ವಾಕ್ ಓವರ್ ನೀಡಲಾಗಿದೆ.