Advertisement

ಫ್ರೆಂಚ್‌ ಓಪನ್‌ ಫೈನಲ್‌ : ಹುರಿದುಂಬಿಸಿದ ಅಭಿಮಾನಿಗೆ ಜೊಕೋ ರ‍್ಯಾಕೆಟ್‌ ಗಿಫ್ಟ್!

11:21 PM Jun 14, 2021 | Team Udayavani |

ಪ್ಯಾರಿಸ್‌ : ಫ್ರೆಂಚ್‌ ಓಪನ್‌ ಫೈನಲ್‌ನಲ್ಲಿ ವಿಶ್ವದ ನಂ.1 ಟೆನಿಸಿಗ ನೊವಾಕ್‌ ಜೊಕೋವಿಕ್‌ ಟ್ರೋಫಿ ಎತ್ತಿ ಸಂಭ್ರಮಿಸಿರಬಹುದು, ಆದರೆ ಇದಕ್ಕೂ ಮಿಗಿಲಾದ ಸ್ಮರಣೀಯ ಕ್ಷಣವನ್ನು ಅನುಭವಿಸಿದ ಅದೃಷ್ಟಶಾಲಿ ವ್ಯಕ್ತಿ ಬೇರೆಯೇ ಒಬ್ಬರಿದ್ದಾರೆ. ಅದು ಸ್ಟಾಂಡ್‌ನ‌ಲ್ಲಿ ಕುಳಿತು ಪಂದ್ಯ ದುದ್ದಕ್ಕೂ ಜೊಕೋವಿಕ್‌ ಅವರನ್ನು ಹುರಿದುಂಬಿಸಿದ ಯುವ ಅಭಿಮಾನಿ!
ಪಂದ್ಯದ ಬಳಿಕ ಈ ಅಭಿಮಾನಿಗೆ ತನ್ನ ರ‍್ಯಾಕೆಟ್‌ ನೀಡುವ ಮೂಲಕ ಜೊಕೋವಿಕ್‌ ಕ್ರೀಡಾಸ್ಫೂರ್ತಿ ಮೆರೆದರು. ಇದನ್ನು ಪಡೆದ ಆ ಅಭಿಮಾನಿಗೆ ಸ್ವರ್ಗಕ್ಕೆ ಮೂರೇ ಗೇಣು!

Advertisement

ಜೊಕೋವಿಕ್‌ ಎರಡು ಸೆಟ್‌ ಹಿನ್ನಡೆ ಯಲ್ಲಿದ್ದಾಗ ಈ ಸಲವೂ ರೊಲ್ಯಾಂಡ್‌ ಗ್ಯಾರೋಸ್‌ ಸರ್ಬಿಯನ್‌ ಟೆನಿಸಿಗನಿಗೆ ಒಲಿಯುವುದು ಕಷ್ಟ ಎಂದೇ ಭಾವಿಸಾಗಿತ್ತು. ಆದರೆ ಎದುರಾಳಿ ಸ್ಟೆಫ‌ನೋಸ್‌ ಸಿಸಿಪಸ್‌ ಹೇಳಿದಂತೆ, ಎರಡು ಸೆಟ್‌ಗಳ ಬಳಿಕ ಜೊಕೋ ಸಂಪೂರ್ಣ ಬದಲಾದ ಆಟಗಾರ ಹಾಗೂ ವ್ಯಕ್ತಿಯಾಗಿ ಗೋಚರಿಸಿದರು. ಮುಂದಿನ ಮೂರೂ ಸೆಟ್‌ ಗೆದ್ದು ಗ್ರೀಸ್‌ ಟೆನಿಸಿಗನ ಮೇಲೆಯೇ ದಂಡಯಾತ್ರೆ ನಡೆಸಿದರು. ಇದಕ್ಕೆಲ್ಲ ಸ್ಫೂರ್ತಿ, ಆ ಯಂಗ್‌ ಫ್ಯಾನ್‌!

ಆತ ಸ್ಫೂರ್ತಿ ತುಂಬಿದ …
“ಆತ ನನಗೆ ಮಾರ್ಗದರ್ಶನ ನೀಡಿದ, ತರಬೇತಿಯನ್ನೂ ಕೊಟ್ಟ, ಸ್ಫೂರ್ತಿ ತುಂಬಿದ. ಪಂದ್ಯದುದ್ದಕ್ಕೂ ಆಟದ ತಂತ್ರಗಾರಿಕೆಯನ್ನು ಹೇಳಿ ಕೊಡುತ್ತಿದ್ದ. ಹೋಲ್ಡ್‌ ಯುವರ್‌ ಸರ್ವ್‌, ಗೋ ಟು ಬ್ಯಾಕ್‌ಹ್ಯಾಂಡ್‌… ಎಂದು ಕೂಗುತ್ತಲೇ ಇದ್ದ. ನನಗೆ ಇದು ನಿಜಕ್ಕೂ ಪಾಠದಂತೆ ಕಂಡಿತು. ಎಷ್ಟೊಂದು ಉಪಯುಕ್ತವಾಗಿದ್ದವು ಈ ಸಲಹೆ. ಹೀಗಾಗಿ ನಾನು ಆತನಿಗೆ ರ‍್ಯಾಕೆಟ್‌ ನೀಡಿದೆ’ ಎಂದರು.

ಫೈನಲ್‌ ಪಂದ್ಯಕ್ಕೆ ಅಮೆರಿಕದ ಮಾಜಿ ಟೆನಿಸಿಗ ಜಾನ್‌ ಮೆಕೆನ್ರೊ ಕೂಡ ಸಾಕ್ಷಿಯಾದರು. ಅವರೂ ಈ ಅಭಿಮಾನಿಯಿಂದ ಪ್ರಭಾವಿತ ರಾಗಿದ್ದರು!

ಇದನ್ನೂ ಓದಿ:ಟೆಸ್ಟ್‌ ಫೈನಲ್‌ನಲ್ಲಿ ಭಾರತಕ್ಕೆ ಇಶಾಂತ್‌ ಅನುಭವ ನೆರವಾಗಲಿದೆ : ವೆಂಕಟೇಶ ಪ್ರಸಾದ್‌

Advertisement

ಎರಡು ಸೆಟ್‌ ಗೆದ್ದರೆ ಸಾಲದು: ಸಿಸಿಪಸ್‌
ಎರಡು ಸೆಟ್‌ ಮುಗಿದ ಬಳಿಕ ಅಂಕಣದಿಂದ ಹೊರಹೋದ ಜೊಕೋವಿಕ್‌, ವಾಪಸ್‌ ಬಂದೊಡನೆ ವಿಭಿನ್ನ ಆಟಗಾರನಾಗಿ ಗೋಚರಿಸಿದರು ಎಂದು ಫೈನಲ್‌ನಲ್ಲಿ ಎಡವಿದ ಸಿಸಿಪಸ್‌ ಹೇಳಿದ್ದಾರೆ.

“ಚಾಂಪಿಯನ್‌ ಎನಿಸಿಕೊಳ್ಳಲು ಎರಡು ಸೆಟ್‌ ಗೆದ್ದರೆ ಸಾಲದು ಎಂಬುದು ನಾನು ಈ ಪಂದ್ಯದಿಂದ ಕಲಿತ ದೊಡ್ಡ ಪಾಠ. ನನ್ನ ಆಟದ ಶೈಲಿಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲಿಲ್ಲ. ಆದರೆ ಎರಡು ಸೆಟ್‌ಗಳ ಬಳಿಕ ಕೋರ್ಟ್‌ ಬಿಟ್ಟ ಜೊಕೋವಿಕ್‌, ಬಳಿಕ ಶಕ್ತಿಶಾಲಿಯಾಗಿ ಕಂಡುಬಂದರು. ನನ್ನ ಗೇಮ್‌ ಏನು ಎಂಬುದನ್ನು ಅವರು ದಿಢೀರನೆ ಪತ್ತೆಹಚ್ಚಿದ್ದು ಅಚ್ಚರಿಯಾಗಿತ್ತು. ಈ ಸೋಲಿನ ಹೊರತಾಗಿಯೂ ನನ್ನ ಆಟದ ಮೇಲೆ ಅಪಾರ ನಂಬಿಕೆಯಂತೂ ಇದ್ದೇ ಇದೆ. ಶೀಘ್ರದಲ್ಲೇ 3ನೇ ಸೆಟ್‌ ಗೆಲ್ಲುವುದನ್ನು ಕಲಿತು ಆ ಎತ್ತರವನ್ನು ತಲುಪಲಿದ್ದೇನೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next