ಪ್ಯಾರಿಸ್: ಕ್ಲೇ ಕೋರ್ಟ್ ಕಿಂಗ್ ರಫೆಲ್ ನಡಾಲ್ ಎದುರಿನ ಮುಖಾಮುಖಿಯ ವೇಳೆ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ಗಾಯಾಳಾಗಿ ಹೊರಬೀಳುವು ದರೊಂದಿಗೆ ಪುರುಷರ ಜಿದ್ದಾಜಿದ್ದಿ ಸೆಮಿಫೈನಲ್ ಹೋರಾಟ ಅನಿರೀಕ್ಷಿತ ಅಂತ್ಯ ಕಂಡಿತು. ನಡಾಲ್ ಫೈನಲ್ ಪ್ರವೇಶಿಸಿದರು.
ದ್ವಿತೀಯ ಸೆಟ್ ವೇಳೆ ಬಿದ್ದ ಜ್ವೆರೇವ್ ಪಾದದ ತೀವ್ರ ಸೆಳೆತದಿಂದಾಗಿ ಎದ್ದು ನಿಲ್ಲಲಿಕ್ಕೂ ಸಾಧ್ಯವಾಗದ ಸ್ಥಿತಿ ತಲುಪಿದರು. ಆಗ ಅವರನ್ನು ವೀಲ್‌ಚೇರ್‌ನಲ್ಲಿ ಕರೆದೊಯ್ಯಲಾಯಿತು. ಕೆಲವು ನಿಮಿಷಗಳ ಬಳಿಕ ವಾಕಿಂಗ್ ಸ್ಟಿಕ್ ನೆರವಿನಿಂದ ನಡೆದು ಬಂದ ಜ್ವೆರೇವ್ ತಮ್ಮ ಶರಣಾಗತಿಯನ್ನು ಸಾರಿದರು. ವಾಕಿಂಗ್ ಸ್ಟಿಕ್ ಮೇಲೆತ್ತಿ ವೀಕ್ಷಕರತ್ತ ಕೈ ಬೀಸಿದರು. ಜರ್ಮನ್ ಅಭಿಮಾನಿಗಳು ಈ ಅನಿರೀಕ್ಷಿತ ಘಟನೆಯಿಂದ ತೀವ್ರ ಆಘಾತಕ್ಕೊಳಗಾದರು.
ಈ ಪಂದ್ಯ ಫೈನಲ್ ಮಿಗಿಲಾದ ಜೋಶ್‌ನಲ್ಲಿ ಸಾಗಿತ್ತು. ಇಬ್ಬರೂ ಸಮಬಲದ ಪರಾಕ್ರಮದೊಂದಿಗೆ ಮುನ್ನುಗ್ಗುತ್ತಿದ್ದರು. ಮೊದಲ ಸೆಟ್ ಟೈಬ್ರೇಕರ್ ಕಂಡಿತು. ಇದನ್ನು ನಡಾಲ್ 7-6 (10-8)ರಿಂದ ತಮ್ಮದಾಗಿಸಿ ಕೊಂಡರು. ಆರಂಭದಲ್ಲಿ ನಡಾಲ್ 0-2ರ ಹಿನ್ನಡೆಯಲ್ಲಿದ್ದರು. ಜ್ವೆರೇವ್ ಎಡವಿ ಬೀಳುವಾಗ ದ್ವಿತೀಯ ಸೆಟ್ 6-6ರ ಸಮಬಲದಲ್ಲಿತ್ತು.
ಇದಿಷ್ಟು ಆಟಕ್ಕೆ 190 ನಿಮಿಷ ತಗುಲಿತ್ತು ಎಂಬುದು ಈ ಪಂದ್ಯದ ತೀವ್ರತೆಯನ್ನು ಸಾರುತ್ತದೆ.
ಇನ್ನೊಂದು ಸೆಮಿಫೈನಲ್ ಮರಿನ್ ಸಿಲಿಕ್-ಕ್ಯಾಸ್ಪರ್ ರೂಡ್ ನಡುವೆ ಸಾಗಲಿದೆ.