Advertisement

ಫ್ರೆಂಚ್‌ ಓಪನ್‌ ಟೆನಿಸ್‌: ನಂ.1 ಕೆರ್ಬರ್‌ಗೆ ಐತಿಹಾಸಿಕ ಸೋಲು!

03:53 PM May 29, 2017 | Team Udayavani |

ಪ್ಯಾರಿಸ್‌: ಈ ಬಾರಿಯ ಫ್ರೆಂಚ್‌ ಓಪನ್‌ ಪಂದ್ಯಾವಳಿ ಐತಿಹಾಸಿಕ ರೀತಿಯಲ್ಲಿ ಮೊದಲ್ಗೊಂಡಿದೆ. ಆದರೆ ಇದು “ಸೋಲಿನ ಇತಿಹಾಸ’ ಎಂಬುದು ಮಾತ್ರ ವಿಪರ್ಯಾಸ! ಭಾನುವಾರ ಆರಂಭಗೊಂಡ ಆವೆಯಂಗಳದ ರ್ಯಾಕೆಟ್‌ ಸಮರದ ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ್ತಿ ಜರ್ಮನಿಯ ಆ್ಯಂಜೆಲಿಕ್‌ ಕೆರ್ಬರ್‌ ಮೊದಲ ಸುತ್ತಿನಲ್ಲೇ ಸೋಲುಂಡು ನಿರ್ಗಮಿಸಿದ್ದಾರೆ. 

Advertisement

ರಷ್ಯಾದ 40ನೇ ರ್‍ಯಾಂಕಿಂಗ್‌ ಆಟಗಾರ್ತಿ ಎಕತೆರಿನಾ ಮಕರೋವಾ ಕೈಯಲ್ಲಿ ಅವರು 2-6, 2-6 ಅಂತರದ ನೇರ ಸೆಟ್‌ಗಳ ಆಘಾತ ಅನುಭವಿಸಿದರು. ಪ್ಯಾರಿಸ್‌ನ ಈ ಟೆನಿಸ್‌ ಸಮರ 1968ರಲ್ಲಿ ವೃತ್ತಿಪರ ಮಾನ್ಯತೆ ಪಡೆದ ಬಳಿಕ ಅಗ್ರ ರ್‍ಯಾಂಕಿಂಗ್‌ ಆಟಗಾರ್ತಿಯೊಬ್ಬಳು ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದ ಮೊದಲ ದೃಷ್ಟಾಂತ ಇದಾಗಿದೆ.

29ರ ಹರೆಯದ ಕೆರ್ಬರ್‌ ಈ ವರ್ಷ ಗಾಯದ ಸಮಸ್ಯೆಗೆ ಒಳಗಾಗುತ್ತಲೇ ಇದ್ದರು. ತೊಡೆಯ ನೋವಿನಿಂದ ಮ್ಯಾಡ್ರಿಡ್‌ ಟೆನಿಸ್‌ ಕೂಟದಿಂದ ಹಿಂದೆ ಸರಿದಿದ್ದರು. ರೋಮ್‌ ಪಂದ್ಯಾವಳಿಯಲ್ಲಿ ಅರ್ಹತಾ ಆಟಗಾರ್ತಿ ಅನ್ನಾ ಕೊಂಟಾವೀಟ್‌ ವಿರುದ್ಧ ನೇರ ಸೆಟ್‌ ಗಳಲ್ಲಿ ಸೋತು ನಿರ್ಗಮಿಸಿದ್ದರು. ಆದರೆ ಪ್ಯಾರಿಸ್‌ನಲ್ಲಿ ಮೊದಲ ಸುತ್ತಿನಲ್ಲೇ ಸೋಲಿಗೆ ತುತ್ತಾಗುವಂಥ ಗಂಭೀರ ಸಮಸ್ಯೆಯೇನೂ ಈ ಜರ್ಮನ್‌ ಆಟಗಾರ್ತಿಗೆ ಎದುರಾಗಿರಲಿಲ್ಲ.

ಕಳೆದ ವರ್ಷ ಟೆನಿಸ್‌ ಉತ್ತುಂಗದಲ್ಲಿದ್ದ ಆ್ಯಂಜೆಲಿಕ್‌ ಕೆರ್ಬರ್‌ ಆಸ್ಟ್ರೇಲಿಯನ್‌ ಓಪನ್‌ ಮತ್ತು ಯುಎಸ್‌ ಓಪನ್‌ ಪ್ರಶಸ್ತಿ ಗೆದ್ದು ಮೆರೆದಿದ್ದರು. ವಿಂಬಲ್ಡನ್‌ ನಲ್ಲಿ ಫೈನಲ್‌ ತನಕ ಓಟ ಬೆಳೆಸಿದ್ದರು.

ಈ ಎಲ್ಲ ಸಾಧನೆಗಳಿಂದ ಸೆರೆನಾ ವಿಲಿಯಮ್ಸನ್‌ ಅವರನ್ನು ಬದಿಗೆ ಸರಿಸಿ ವಿಶ್ವದ ನಂಬರ್‌ ವನ್‌ ಆಟಗಾರ್ತಿಯಾಗಿ
ಮೂಡಿಬಂದಿದ್ದರು. ಈ ಸಲದ ಫ್ರೆಂಚ್‌ ಓಪನ್‌ನಲ್ಲಿ ಸೆರೆನಾ ಇಲ್ಲದಿರುವುದರಿಂದ ಆವೆಯಂಗಳದಲ್ಲೂ ಮೆರೆದಾಡುವ
ಉತ್ತಮ ಅವಕಾಶವೊಂದು ಕೆರ್ಬರ್‌ ಮುಂದಿತ್ತು. ಆದರೆ ಇದು ಮೊದಲ ದಿನವೇ ಕೈಜಾರಿದೆ. ಕಳೆದ ವರ್ಷವೂ ಕೆರ್ಬರ್‌ ಇಲ್ಲಿ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದ್ದರು. ಇದು ಕೆರ್ಬರ್‌ ವಿರುದ್ಧ ಆಡಿದ 12 ಪಂದ್ಯಗಳಲ್ಲಿ ಮಕರೋವಾ ಸಾಧಿಸಿದ 5ನೇ ಗೆಲುವು.

Advertisement

ವೀನಸ್‌ಗೆ ಮುನ್ನಡೆ: ಅಮೆರಿಕದ ಖ್ಯಾತ ಆಟಗಾರ್ತಿ ವೀನಸ್‌ ವಿಲಿಯಮ್ಸ್‌ ಮಹಿಳಾ ಸಿಂಗಲ್ಸ್‌ ವಿಭಾಗದ ಮೊದಲ ಪಂದ್ಯದಲ್ಲಿ ಚೀನಾದ ಆಟಗಾರ್ತಿ ವಾಂಗ್‌ ಅವರನ್ನು 6-4, 7-6 ಸೆಟ್‌ಗಳ ಅಂತರದಿಂದ ಸೋಲಿಸಿ 2ನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ಕ್ವಿಟೋವಾಗೆ ಸುಲಭ ಜಯ
ಎರಡು ಬಾರಿಯ ವಿಂಬಲ್ಡನ್‌ ಚಾಂಪಿಯನ್‌, ಜೆಕ್‌ ಆಟಗಾರ್ತಿ ಪೆಟ್ರಾ ಕ್ವಿಟೋವಾ ಮೊದಲ ಸುತ್ತನ್ನು ಸುಲಭದಲ್ಲಿ ದಾಟಿದ್ದಾರೆ. ಅವರು ಅಮೆರಿಕದ ಜೂಲಿಯಾ ಬೊಸೆರಪ್‌ ವಿರುದ್ಧ 6-3, 6-2 ಅಂತರದ ಜಯ ಸಾಧಿಸಿದರು. 74 ನಿಮಿಷಗಳಲ್ಲಿ ಈ ಪಂದ್ಯವನ್ನು ಕ್ವಿಟೋವಾ ವಶಪಡಿಸಿಕೊಂಡರು. ಎಡಗೈಗೆ ಗಂಭೀರವೆನಿಸಿದ ಗಾಯಕ್ಕೆ ಸಿಲುಕಿ ರ್ಯಾಕೆಟನ್ನೇ ಬದಿಗಿಡಬೇಕಾದ ಅಪಾಯಕ್ಕೆ ಸಿಲುಕಿದ್ದ ಕ್ವಿಟೋವಾಗೆ ಈ ಗೆಲುವು ಹೆಚ್ಚಿನ ಆತ್ಮಸ್ಥೈರ್ಯ ತುಂಬಿದೆ. ರಶ್ಯದ ಸ್ವೆತ್ಲಾನಾ ಕುಜ್ನೆತ್ಸೋವಾ ಭಾರೀ ಪೈಪೋಟಿಯ ಬಳಿಕ ಅಮೆರಿಕದ ಕ್ರಿಸ್ಟಿನಾ ಮೆಕಾಲೆ ಅವರನ್ನು
7-5, 6-4ರಿಂದ ಮಣಿಸುವಲ್ಲಿ ಯಶಸ್ವಿಯಾದರು.

ಪೊರ್ಟೊರಿಕೋದ ಮೋನಿಕಾ ಪಿಗ್‌ ಇಟಲಿಯ 31ನೇ ಶ್ರೇಯಾಂಕಿತೆ ರಾಬರ್ಟಾ ವಿನ್ಸಿ ಅವರನ್ನು 6-3, 3-6, 6-2 ಅಂತರದಿಂದ ಮಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next