Advertisement

ವೃತ್ತಗಳಿಗೆ ಸ್ವಾತಂತ್ರ್ಯ ಯೋಧರ ಹೆಸರು

05:18 PM Aug 11, 2022 | Team Udayavani |

ಬೆಳಗಾವಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ತೆರಳಿ ಅವರನ್ನು ಸನ್ಮಾನಿಸಿ. ಗೌರವಿಸುವುದು ನಮ್ಮ ಪುಣ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.

Advertisement

ಭಾರತ ಬಿಟ್ಟು ತೊಲಗಿ(ಕ್ವಿಟ್‌ ಇಂಡಿಯಾ) ಚಳವಳಿಗೆ 80 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ನಗರದಲ್ಲಿರುವ ಸ್ವಾತಂತ್ರ್ಯ ಯೋಧರ ಮನೆಗಳಿಗೆ ಬುಧವಾರ ಭೇಟಿ ನೀಡಿ ಅವರನ್ನು ಸರಕಾರದ ವತಿಯಿಂದ ಸನ್ಮಾನಿಸಿದ ನಂತರ ಮಾತನಾಡಿದ ಅವರು, ಅಮೃತ ಮಹೋತ್ಸವದ ಸಂದರ್ಭದಲ್ಲಿ ಸ್ವಾತಂತ್ರ್ಯ ಯೋಧರನ್ನು ಅವರ ಮನೆಗಳಲ್ಲಿಯೇ ಸನ್ಮಾನಿಸುವ ಮೂಲಕ ಅವರನ್ನು ಗೌರವಿಸಬೇಕು ಎಂಬುದು ಪ್ರಧಾನಮಂತ್ರಿಗಳ ಆಶಯವಾಗಿದೆ. ಅದರಂತೆ ದೇಶಾದ್ಯಂತ ಸ್ವಾತಂತ್ರ್ಯ ಯೋಧರನ್ನು ಗೌರವಿಸಲಾಗುತ್ತಿದೆ. ಇದೊಂದು ಅಪರೂಪದ ಅವಕಾಶ ಎಂದರು.

ಕುವೆಂಪು ನಗರದಲ್ಲಿರುವ ವಿಠ್ಠಲ ಯಾಳಗಿ(96) ಅವರ ಮನೆಗೆ ಮೊದಲು ಭೇಟಿ ನೀಡಿದ ಸಚಿವರು ಯಾಳಗಿ ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ವಿಠ್ಠಲ ಯಾಳಗಿ ಅವರೊಂದಿಗೆ ಸ್ವಾತಂತ್ರ್ಯ ಸಂಗ್ರಾಮದ ದಿನಗಳ ಕುರಿತು ಚರ್ಚಿಸಿದ ಸಚಿವರು, ಹರಿಜನ ಮಕ್ಕಳಿಗೆ ವಸತಿನಿಲಯ, ಹೆಣ್ಣುಮಕ್ಕಳಿಗೆ ವಸತಿ ನಿಲಯ, ಶಿಕ್ಷಣ ಒದಗಿಸುವ ಷರತ್ತು ವಿಧಿಸಿಯೇ ಮಹಾತ್ಮಾ ಗಾಂಧೀಜಿ ಗ್ರಾಮಗಳಿಗೆ ಬರುತ್ತಿದ್ದರು. ಆದ್ದರಿಂದ ಬಹುತೇಕ ಕಡೆಗಳಲ್ಲಿ ಹರಿಜನರಿಗೆ ಶಿಕ್ಷಣ ಲಭಿಸುವಂತಾಗಿದೆ ಎಂದು ಹೇಳಿದರು.

ಬೆಳಗಾವಿ ನಗರದ ಸಾರ್ವಜನಿಕ ವೃತ್ತಕ್ಕೆ ಸ್ವಾತಂತ್ರ್ಯ ಯೋಧರ ಹೆಸರು ಇಡಲು ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಗೋವಿಂದ ಕಾರಜೋಳ ಅವರು ಹಿರಿಯ ಸ್ವಾತಂತ್ರ್ಯ ಯೋಧ ವಿಠ್ಠಲ ಯಾಳಗಿ ಅವರಿಗೆ ಭರವಸೆ ನೀಡಿದರು.

ಸ್ವಾತಂತ್ರ್ಯ ಹೋರಾಟದ ದಿನಗಳನ್ನು ಮೆಲುಕು ಹಾಕಿದ ವಿಠ್ಠಲ ಯಾಳಗಿ ಅವರು, ತಮ್ಮ ಮನೆಯಲ್ಲಿ 16 ಸದಸ್ಯರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಗಂಗಾಧರ ರಾವ್‌ ದೇಶಪಾಂಡೆ ಹಾಗೂ ಬಾಲಗಂಗಾಧರ್‌ ಟಿಳಕ ಮತ್ತಿತರ ಅನುಯಾಯಿಗಳು ನಾವು ಎಂದು ಹೋರಾಟದ ವಿವಿಧ ಮಜಲುಗಳನ್ನು ಮೆಲಕು ಹಾಕಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಗೋವಾ ಸತ್ಯಾಗ್ರಹ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಯಾಳಗಿ ಕುಟುಂಬದ 16 ಸದಸ್ಯರು ಸಕ್ರೀಯವಾಗಿ ಪಾಲ್ಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ನಂತರ ರಾಣಿ ಚೆನ್ನಮ್ಮ ನಗರದಲ್ಲಿರುವ ಸ್ವಾತಂತ್ರ್ಯ ಯೋಧರಾದ ರಾಜೇಂದ್ರ ಕಲಘಟಗಿ ಅವರನ್ನು ಸಚಿವ ಗೋವಿಂದ ಕಾರಜೋಳ ಅವರು ಸನ್ಮಾನಿಸಿದರು.

Advertisement

ರಾಜೇಂದ್ರ ಕಲಘಟಗಿ ಅವರು ತಮ್ಮ 102 ವಯಸ್ಸಿನಲ್ಲಿಯೂ ಲವಲವಿಕೆಯಿಂದ ಇರುವುದಕ್ಕೆ ಸಚಿವರು ಅತೀವ ಸಂತಸ ವ್ಯಕ್ತಪಡಿಸಿದರು. ಪ್ರತಿದಿನ ನಸುಕಿನ ಜಾವ 4 ಗಂಟೆಗೆ ಎದ್ದು 1000 ಕಪಾಲಬಾತಿ ಮಾಡುತ್ತೇನೆ. ನಿಯಮಿತವಾಗಿ ವಾಕಿಂಗ್‌ ಮಾಡುವುದಲ್ಲದೇ ಜೋಳದ ರೊಟ್ಟಿ, ಚಪಾತಿ ಊಟ, ಹಾಲು ಸೇವನೆ ಮಾಡುತ್ತೇನೆ. ಸಿಹಿ ತಿನ್ನುವದಿಲ್ಲ. ಕರಿದ ಪದಾರ್ಥಗಳನ್ನು ಮುಟ್ಟುವದಿಲ್ಲ ಎಂದು ರಾಜೇಂದ್ರ ಕಲಘಟಗಿ ತಮ್ಮ ಆರೋಗ್ಯದ ಗುಟ್ಟು ಬಿಟ್ಟುಕೊಟ್ಟರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ, ಪೊಲೀಸ್‌ ಆಯುಕ್ತರಾದ ಡಾ.ಎಂ.ಬಿ. ಬೋರಲಿಂಗಯ್ಯ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್‌, ಜಿಲ್ಲಾ ಸೆ„ನಿಕ ಭವನದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next