Advertisement

Freedom fighter, ಶೈಕ್ಷಣಿಕ ಹರಿಕಾರ ಪಂಡಿತ್‌ ಎಸ್‌.ಕೆ .ಸುವರ್ಣ ಸಂಸ್ಮರಣೆ

08:26 PM Dec 19, 2023 | Team Udayavani |

ಶಿರ್ವ: ಬಾಲ್ಯದಲ್ಲಿಯೇ ಮುಂಬಯಿಗೆ ತೆರಳಿ,ದಿನವಿಡೀ ದುಡಿದು ರಾತ್ರಿ ಶಾಲೆಯಲ್ಲಿ ಕಲಿತು,ಸ್ವಾತಂತ್ರ್ಯ ಹೋರಾಟಗಾರರಾಗಿ, ಕ್ವಿಟ್‌ ಇಂಡಿಯಾ ಸಹಿತ ವಿವಿಧ ಚಳುವಳಿಗಳಲ್ಲಿ ಭಾಗವಹಿಸಿ,ನೆಹರೂ ಸಂಪುಟದ ರಕ್ಷಣಾ ಮಂತ್ರಿ ವಿ.ಕೆ ಕೃಷ್ಣ ಮೆನನ್‌ ಅವರ ಆಪ್ತ ಸಹಾಯಕರಾಗಿ,ತನಗಾಗಿ ಸ್ವಲ್ಪ,ಸಮಾಜಕ್ಕೆ ಸರ್ವಸ್ವ ಎಂಬ ನೀತಿಯಂತೆ ಜೀವನದುದ್ದಕ್ಕೂ ಆದರ್ಶಮಯ ಬದುಕನ್ನು ಬಾಳಿದ ಮೂಡುಬೆಳ್ಳೆಯ ದಿ|ಪಂಡಿತ್‌ ಡಾ|ಎಸ್‌. ಕೆ .ಸುವರ್ಣ ಅವರ 30ನೇ ಸಂಸ್ಮರಣೆೆ ಸಪ್ತಾಹ ಕಾರ್ಯಕ್ರಮ ಅವರ ಕರ್ಮಭೂಮಿ ಮುಂಬಯಿಯಲ್ಲಿ ಡಿ. 20 ರಿಂದ ನಡೆಯಲಿದೆ.

Advertisement

ಮುಂಬಯಿ ವಜ್ರೇಶ್ವರಿಯ ಅವಧೂತ ಭಗವಾನ್‌ ನಿತ್ಯಾನಂದರ ಶಿಷ್ಯತ್ವ ಸ್ವೀಕರಿಸಿದ್ದ ಸುವರ್ಣರು ಧಾರ್ಮಿಕ ರಂಗದ ಪಂಡಿತ ಗುರುವಾಗಿ,ಪಾರಂಪರಿಕ ವೈದ್ಯನಾಗಿ, ಉದ್ಯಮಿಯಾಗಿ ಮುಂಬಯಿ ಮತ್ತು ಬೆಳ್ಳೆಯಲ್ಲಿ ಜನಪರ ಕಾರ್ಯ ನಡೆಸಿದ್ದರು.ಮುಂಬಯಿ ಬಿಲ್ಲವರ ಎಸೋಸಿಯೇಶನ್‌ ಭಾಂಡುಪ್‌ ಶಾಖೆಯ ಸ್ಥಾಪಕರಾಗಿ,ಮುಂಬಯಿ ತುಳು-ಕನ್ನಡಿಗರ ಹೆಮ್ಮೆಯ ಆರ್ಥಿಕ ಸಂಸ್ಥೆ ಭಾರತ್‌ ಕೋ ಆಪರೇಟಿವ್‌ ಬ್ಯಾಂಕ್‌ನ ಸ್ಥಾಪಕ ನಿರ್ದೇಶಕರಾಗಿ,ಬೆಳ್ಳೆ ಬಿಲ್ಲವ ಸಂಘದ ಸ್ಥಾಪಕರಾಗಿ, ಕಟಪಾಡಿ ವಿಶ್ವನಾಥ ಕ್ಷೇತ್ರದ ಮಹಾದಾನಿಯಾಗಿ, ಬೆಳ್ಳೆ ಗೀತಾ ಮಂದಿರದ ಸ್ಥಾಪಕ ಟ್ರಸ್ಟಿ ಮತ್ತು ಸಲಹೆಗಾರರಾಗಿ,ಬೆಳ್ಳೆ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ,ಕಾಂಗ್ರೆಸ್‌ ಸೇವಾ ದಳದ ಸ್ಥಾಪಕರಾಗಿ ಸೇವೆ ಸಲ್ಲಿಸಿದ್ದರು.

1950ರ ದಶಕದಲ್ಲಿ ದಿ| ಡಾ|ಎಸ್‌.ಕೆ. ಸುವರ್ಣರು ಮುಂಬಯಿಯ ಭಾಂಡುಪ್‌ನಲ್ಲಿ ಸ್ಥಾಪಿಸಿದ್ದ ಶ್ರೀ ನಿತ್ಯಾನಂದ ಆಶ್ರಮ ಇಂದು ಭಾಂಡುಪ್‌ನ ಖ್ಯಾತ ಸ್ವಾಮಿ ನಿತ್ಯಾನಂದ ಮಂದಿರವಾಗಿದೆ. ಹುಟ್ಟೂರಿನ ಮೂಡುಬೆಳ್ಳೆಯ ಕಪ್ಪಂದ ಕರಿಯದಲ್ಲಿ ಕೂಡಾ 1960ರಲ್ಲಿ ಶ್ರೀ ನಿತ್ಯಾನಂದ ಆಶ್ರಮ ಸ್ಥಾಪಿಸಿದ್ದರು. ಮುಂಬಯಿ,ಉಡುಪಿ ಮತ್ತು ದ.ಕ.ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ, ಧಾರ್ಮಿಕ ಹಾಗೂ ಸಾಮಾಜಿಕ ಸಂಸ್ಥೆಗಳಿಗೆ ಕೊಡುಗೈ ದಾನಿಯಾಗಿ ಬೆಂಬಲ ನೀಡಿದ್ದ ಅವರು 1960ರ ದಶಕದಲ್ಲಿ ಮುಂಬಯಿ ಮಹಾನಗರಕ್ಕೆ ಉದ್ಯೋಗ ಅರಸಿ ಬಂದ ಯುವಕರಿಗೆ ಮಾರ್ಗದರ್ಶಕರಾಗಿದ್ದರು.

ಪಡುಬೆಳ್ಳೆಯಲ್ಲಿ ಶ್ರೀ ನಾರಾಯಣಗುರು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಪಡುಬೆಳ್ಳೆ ಎಂಬ ಕುಗ್ರಾಮವನ್ನು ಶಿಕ್ಷಣ ಕಾಶಿಯಾಗಿ ಪರಿವರ್ತಿಸಿದ ಕೀರ್ತಿ ದಿ| ಡಾ|ಎಸ್‌.ಕೆ. ಸುವರ್ಣ ಅವರಿಗೆ ಸಲ್ಲುತ್ತದೆ.ಮುಂಬಯಿಯಲ್ಲಿ ತುಳು ಕನ್ನಡಿಗರು ಮಾತ್ರವಲ್ಲದೆ ಕೋಳಿ,ಆಗ್ರಿ,ಗುಜರಾತಿ ಮತ್ತು ಸಿಂಧಿ ಅಭಿಮಾನಿ ಬಳಗವನ್ನು ಹೊಂದಿದ್ದ ಅವರು ಬಡ ಕುಟುಂಬಗಳ ಅನ್ನದಾತರಾಗಿದ್ದರು.

1993ರ ಡಿ. 20 ರಂದು ಮುಂಬಯಿಯಲ್ಲಿ ಇಹಲೋಕ ತ್ಯಜಿಸಿದ್ದ ಅವರ 30ನೇ ಸಂಸ್ಮರಣೆ ಕಾರ್ಯಕ್ರಮವು ಮುಂಬಯಿಯಲ್ಲಿ ಅವರೇ ಸ್ಥಾಪಿಸಿದ ಭಾಂಡುಪ್‌ನ ಶ್ರೀ ನಿತ್ಯಾನಂದ ಮಂದಿರದಲ್ಲಿ ಡಿ. 20ರಿಂದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next