ಬೆಂಗಳೂರು: ವಿಶ್ವ ಬ್ರೈಲ್ ದಿನಾಚರಣೆ ಅಂಗವಾಗಿ ಬಾಲಭವನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ನಂತರದ ಶಿಕ್ಷಣ ಮುಂದುವರಿಸಿರುವ ದೃಷ್ಟಿ ವಿಕಲಚೇತನರಿಗೆ ರಾಜ್ಯ ಸರ್ಕಾರದ ವತಿಯಿಂದ “ಟಾಕಿಂಗ್ ಲ್ಯಾಪ್‌ಟಾಪ್’ ವಿತರಿಸುವ ಮೂಲಕ ಲ್ಯಾಪ್‌ಟಾಪ್ ವಿತರಣೆ ಕಾರ್ಯಕ್ಕೆ ಚಾಲನೆ ದೊರೆಯಿತು.
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ನಾನಾ ಸ್ವಯಂ ಸೇವಾಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬ್ರೈಲ್ ದಿನಾಚರಣೆ ಸಮಾರಂಭದಲ್ಲಿ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಸಾಂಕೇತಿಕವಾಗಿ 50 ಮಂದಿ ದೃಷ್ಟಿ ವಿಕಲಚೇತನ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್ ವಿತರಿಸಿದರು.
ಸಮಾರಂಭದಲ್ಲಿ ಮಾತನಾಡಿದ ಇಲಾಖೆ ನಿರ್ದೇಶಕ ಡಾ.ಸಿದ್ದರಾಜು, ವಿಕಲಚೇತನರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಅನುಕೂಲವಾಗುವಂತೆ ಸರ್ಕಾರ ಸಾಕಷ್ಟು ಸೌಲಭ್ಯ ಕಲ್ಪಿಸುತ್ತಿದೆ. ಮಾಸಾಶನ, ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನದ ಜತೆಗೆ ಎಸ್‌ಎಸ್‌ಎಲ್‌ಸಿ ನಂತರದ ಶಿಕ್ಷಣ ಮುಂದುವರಿಸಿರುವ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್ ನೀಡಿ ಸುಧಾರಿತ ತಂತ್ರಜ್ಞಾನ ಬಳಕೆಗೆ ಅವಕಾಶ ಕಲ್ಪಿಸುತ್ತಿದೆ. ದೃಷ್ಟಿ ವಿಕಲಚೇತನ ತಾಯಂದಿರ ಬಾಣಂತನಕ್ಕೆ ಅನುಕೂಲವಾಗಲೆಂದು ಹೆರಿಗೆ ಬಳಿಕ ಎರಡು ವರ್ಷದವರೆಗೆ ಸಹಾಯಕರ ಸೇವೆ ಬಳಸಿಕೊಳ್ಳಲು ಶಿಶುಪಾಲನಾ ಭತ್ಯೆಯನ್ನೂ ನೀಡಲಾಗುತ್ತಿದೆ ಎಂದು ಹೇಳಿದರು.
ದೃಷ್ಟಿ ವಿಕಲಚೇತನರು ತಮ್ಮಲ್ಲಿ ನ್ಯೂನತೆ ಇದೆ ಎಂದು ಮಾನಸಿಕವಾಗಿ ಕುಗ್ಗಬಾರದು. ಭೌತಿಕ ದೃಷ್ಟಿಯಿಲ್ಲದಿದ್ದರೂ ಅಂತ:ದೃಷ್ಟಿಯಿಂದಲೇ ಆತ್ಮವಿಶ್ವಾಸದಿಂದ ಜೀವನ ನಡೆಸುವುದನ್ನು ರೂಢಿಸಿಕೊಳ್ಳಬೇಕು. ಸರ್ಕಾರವು ವಿಕಲಚೇತನರನ್ನೂ ರಾಷ್ಟ್ರದ ಸಂಪತ್ತು ಎಂದು ಪರಿಗಣಿಸಿದ್ದು, ಅಗತ್ಯ ಸೌಲಭ್ಯ ಕಲ್ಪಿಸುತ್ತಿದೆ. ಸೌಲಭ್ಯ ಬಳಸಿಕೊಂಡು ಮುಂದೆ ಕೊಡುಗೆ ನೀಡುವಷ್ಟರ ಮಟ್ಟಿಗೆ ಸಬಲರಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ದೃಷ್ಟಿ ವಿಕಲಚೇತನರು ನಡೆಸಿಕೊಟ್ಟ ಗೀತ ಗಾಯನಕ್ಕೆ ಸಭಿಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಧಾರವಾಡದ ಮನಗುಂದಿಯ ಗುರುಬಸವ ಮಹಾಮನೆಯ ಬಸವಾನಂದ ಸ್ವಾಮಿ, ಮಾತೃಛಾಯ ಸಂಸ್ಥೆಯ ರಾಜ್ಯಶ್ರೀ ಸತೀಶ್, ಪರಶಿವಮೂರ್ತಿ, ಅಮರನಾಥ್ ಇತರರು ಉಪಸ್ಥಿತರಿದ್ದರು.
ರಾಜ್ಯದಲ್ಲಿ 1000ಕ್ಕೂ ಹೆಚ್ಚು ದೃಷ್ಟಿ ವಿಕಲಚೇತನರು ಎಸ್‌ಎಸ್‌ಎಲ್‌ಸಿ ನಂತರದ ಪದವಿಪೂರ್ವ, ಪದವಿ ಇತರೆ ಶಿಕ್ಷಣ ಪಡೆಯುತ್ತಿದ್ದು, ಈ ವಿದ್ಯಾರ್ಥಿಗಳಿಗೆ ಇಲಾಖೆಯಿಂದ 2016-17ನೇ ಸಾಲಿಗೆ ಸಂಬಂಧಪಟ್ಟಂತೆ ಉಚಿತವಾಗಿ ಟಾಕಿಂಗ್ ಲ್ಯಾಪ್‌ಟಾಪ್ ನೀಡಲಾಗುತ್ತಿದೆ. ಟಾಕಿಂಗ್ ಲ್ಯಾಪ್‌ಟಾಪ್ ವಿತರಣೆಗೆ ಇಲಾಖೆಯು ಬೆಂಗಳೂರಿನಲ್ಲಿ ಚಾಲನೆ ನೀಡಿದ್ದು, ಮುಂದೆ ಜಿಲ್ಲಾ ಮಟ್ಟದಲ್ಲೂ ವಿತರಿಸಲಿದೆ. ಸುಮಾರು 45,000 ರೂ. ಮೌಲ್ಯದ ಟಾಕಿಂಗ್ ಲ್ಯಾಪ್‌ಟಾಪ್ ನೀಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.